ಗುಬ್ಬಿ: ಪಟ್ಟಣದ ಹೊರ ವಲಯದ ಕರೇಕಲ್ಲು ಬಾರೆ ಬಡಾವಣೆಯ ಬಳಿಯಲ್ಲಿ ನಿರ್ಮಾಣವಾಗಿರುವ ಗುಬ್ಬಿ ಪಟ್ಟಣ ಪಂಚಾಯಿತಿ ಘನತ್ಯಾಜ್ಯ ವಿಲೇವಾರಿ ಘಟಕ ಅವ್ಯವಸ್ಥೆಯ ಆಗರವಾಗಿ ಸ್ಥಳೀಯ ನಿವಾಸಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೊತೆಗೆ ನಿತ್ಯ ದುರ್ವಾಸನೆಯಿಂದ ನರಕಯಾತನೆ ಪಡುತ್ತಿದ್ದಾರೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಾಗಲಿ ಚುನಾಯಿತ ಪ್ರತಿನಿಧಿಗಳಾಗಲಿ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಈ ನಿಟ್ಟಿನಲ್ಲಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿದ್ದೇವೆ ಎಂದು ಕರುನಾಡ ವಿಜಯ ಸೇನೆ ಪದಾಧಿಕಾರಿಗಳು ತಿಳಿಸಿದರು.
ಬೆಳಿಗ್ಗೆ ಕಸ ವಿಲೇವಾರಿ ಮಾಡಲು ಬಂದ ಕಸದ ವಾಹನ ತಡೆದು ಧರಣಿ ಆರಂಭಿಸಲಾಯಿತು. ಅನಿರ್ಧಿಷ್ಟಾವಧಿ ಧರಣಿ ಕುಳಿತ ಹಲವು ಸಂಘಟನೆಯ ಕಾರ್ಯಕರ್ತರು ಸ್ಥಳೀಯ ನಿವಾಸಿಗಳ ಜೊತೆ ಜಮಾಯಿಸಿ ಘನತ್ಯಾಜ್ಯ ನಿರ್ವಹಣೆಯಲ್ಲಿ ವಿಫಲಗೊಂಡ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹೋರಾಟ ಆರಂಭಿಸಿದರು.
ಕಳೆದ ಹತ್ತು ವರ್ಷಗಳಿಂದ ಇಲ್ಲಿ ಯಾವುದೇ ವ್ಯವಸ್ಥೆ ಮಾಡದೇ ಎಲ್ಲೆಂದರಲ್ಲಿ ಕಸ ಸುರಿದು ಹೋಗಲಾಗುತ್ತದೆ. ಈ ಜೊತೆಗೆ ಕೋಳಿ ತ್ಯಾಜ್ಯ ಇಲ್ಲಿ ಮಾರಕವಾಗಿದೆ. ಕೆಟ್ಟ ವಾಸನೆ ಇಲ್ಲಿನ 150 ಮನೆಗಳಿಗೆ ತೊಂದರೆ ನೀಡಿದೆ. ಪಕ್ಕದಲ್ಲಿರುವ ಸಾಲು ಮರದ ತಿಮ್ಮಕ್ಕ ಪಾರ್ಕ್ ಗೆ ವಾಯು ವಿಹಾರಕ್ಕೆ ಜನರೇ ಬಾರದಂತಾಗಿದೆ. ಇಂತಹ ಅವ್ಯವಸ್ಥೆಗೆ ಮುಕ್ತಿ ಕಾಣಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಜಾಗದಿಂದ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರ ಆಗಲೇಬೇಕು. ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಕರುನಾಡ ವಿಜಯ ಸೇನೆ ತಾಲ್ಲೂಕು ಅಧ್ಯಕ್ಷ ಜಿ.ವಿನಯ್ ಆಗ್ರಹಿಸಿದರು.
ತ್ಯಾಜ್ಯ ಸಂಸ್ಕರಣೆ ಹಾಗೂ ಗೊಬ್ಬರ ತಯಾರಿಕೆ ಮಾಡುವ ಜೊತೆಗೆ ಒಣ ಕಸ ಹಸಿ ಕಸ ಬೇರ್ಪಡಿಸುವ ಯಂತ್ರ ಸಹ ಖರೀದಿ ಮಾಡಲಾಗಿತ್ತು. ಇದ್ಯಾಯುದು ಅಳವಡಿಕೆ ಮಾಡದೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಯಂತ್ರ ತುಕ್ಕು ಹಿಡಿದಿವೆ. ಸರ್ಕಾರದ ಹಣ ಪೋಲು ಮಾಡಿದ ಅಧಿಕಾರಿಗಳಿಂದ ಭ್ರಷ್ಠಾಚಾರ ಇಲ್ಲಿ ನಡೆದಿದೆ. ಇದು ತನಿಖೆಗೆ ಒಳಪಡಬೇಕು. ನಿತ್ಯ ನರಕ ಪ್ರದರ್ಶನ ತೋರುವ ಘಟಕ ನಾಯಿಗಳ ಹಾವಳಿಗೆ ತುತ್ತಾಗಿ ಕಸ ಕಡ್ಡಿ ಎಲ್ಲವೂ ಘಟಕದಿಂದ ಹೊರ ಬಂದಿದೆ. ಸತ್ತ ಪ್ರಾಣಿಗಳ ಕಳೇಬರ ಸಹ ಇಲ್ಲೇ ಎಸೆಯಲಾಗುತ್ತಿದೆ. ಇದರ ದುರ್ವಾಸನೆ ಮಿತಿ ಮೀರಿ ಸಾಂಕ್ರಾಮಿಕ ರೋಗಕ್ಕೆ ಮೂಲವಾಗಿದೆ. ಸೂಕ್ತ ಪರಿಹಾರ ಸಿಗುವವರೆವಿಗೂ ಈ ಧರಣಿ ನಿಲ್ಲದು ಎಂದು ನಾಗಸಂದ್ರ ವಿಜಯ್ ಕುಮಾರ್ ಕಿಡಿಕಾರಿದರು.
ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆ ಪದಾಧಿಕಾರಿಗಳಾದ ಮಧು, ವಾಸುಗೌಡ, ಸತೀಶ್, ಜಿ.ಎಸ್. ಮಂಜುನಾಥ್, ಸಾದತ್ ಪಾಷ, ರೋಹಿತ್, ಮಹಮದ್ ಗೌಸ್, ಹರಿಕೇಶವ, ಮಾರಯ್ಯ, ಲಾವಣ್ಯ, ಪ್ರಿಯಾರಾಜ್ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.