ಮತ್ತೊಮ್ಮೆ ಬಿಜೆಪಿ ಸರ್ಕಾರ ತರುವಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ಗುಬ್ಬಿಯಲ್ಲಿ ಇದೇ ತಿಂಗಳು 7 ಕ್ಕೆ : ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್.
ಗುಬ್ಬಿ: ಸಂಘಟನಾತ್ಮಕ ಹಿನ್ನಲೆ ಬಿಜೆಪಿ ಪಕ್ಷವು ವಿವಿಧ ಮೋರ್ಚಾಗಳ ಜಿಲ್ಲಾ ಮಟ್ಟದ ಸಮಾವೇಶವನ್ನು ಜಿಲ್ಲೆಯ ಹಲವು ಕ್ಷೇತ್ರದಲ್ಲಿ ಒಂದೊಂದು ಮೋರ್ಚಾ ಘಟಕದಂತೆ ನಡೆಯಲಿದೆ. ಗುಬ್ಬಿಯಲ್ಲಿ ಇದೇ ತಿಂಗಳ 7 ನೇ ತಾರೀಖು ಮಂಗಳವಾರ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ಏಳು ಕ್ಷೇತ್ರ ಒಳಗೊಂಡಂತೆ ಬೃಹತ್ ಸಮಾವೇಶಕ್ಕೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಗಮಿಸಲಿದ್ದು ಗುಬ್ಬಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸುಸಜ್ಜಿತವಾಗಿ ವೇದಿಕೆ ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ಮೋರ್ಚಾಗಳ ರಾಜ್ಯ ಸಂಚಾಲಕ ಬಿ.ವೈ.ವಿಜಯೇಂದ್ರ ಸಮಾವೇಶಕ್ಕೆ ಕಳೆ ಕಟ್ಟಲಿದ್ದಾರೆ. ಇವರೊಟ್ಟಿಗೆ ಸಚಿವ ಸುನಿಲ್ ಕುಮಾರ್, ನೆ.ಲ. ನರೇಂದ್ರಬಾಬು, ಸಂಸದರಾದ ಪಿ.ಸಿ.ಮೋಹನ್, ಜಿ.ಎಸ್.ಬಸವರಾಜು, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಶಾಸಕರಾದ ಮಸಾಲಾ ಜಯರಾಮ್, ಜ್ಯೋತಿ ಗಣೇಶ್, ಚಿದಾನಂದಗೌಡ, ವೈ.ಎ.ನಾರಾಯಣಸ್ವಾಮಿ ಸಾಥ್ ನೀಡಲಿದ್ದಾರೆ. ಈ ಜೊತೆಗೆ ಗುಬ್ಬಿ ಕ್ಷೇತ್ರದ ಎಲ್ಲಾ ಮುಖಂಡರು, ಆಕಾಂಕ್ಷಿಗಳು ಮುಂಚೂಣಿ ನಿಂತು ಯಶಸ್ವಿಗೆ ಸಹಕರಿಸಲಿದ್ದಾರೆ ಎಂದ ಅವರು ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಬೈಕ್ ಮೆರವಣಿಗೆ ಮೂಲಕ ರಾಜ್ಯ ನಾಯಕರನ್ನು ಬರಮಾಡಿಕೊಳ್ಳಲಾಗುವುದು ಎಂದರು.
ವೀರಶೈವ ಲಿಂಗಾಯಿತ ಸಮಾಜ ಟಿಕೆಟ್ ನೀಡಲು ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಹೆಬ್ಬಾಕ ರವಿಶಂಕರ್, ಬಿಜೆಪಿ ಟಿಕೆಟ್ ಕೇಳುವುದು ಅವರ ಅಭಿಮಾನ. ಅದು ತಪ್ಪಲ್ಲ. ಆಯಾ ಸಮುದಾಯ ತಮ್ಮ ಜನಾಂಗದ ಶಾಸಕರ ಆಯ್ಕೆ ಬಯಸಿ ಬೇಡಿಕೆ ಸಲ್ಲಿಸುವುದು ಸಹಜ. ಟಿಕೆಟ್ ನೀಡದಿದ್ದರೆ ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿಲ್ಲ. ಘೋಷಣೆ ಆಗುವವರೆಗೆ ಈ ಒತ್ತಾಯ ಆಗ್ರಹ ಸಾಮಾನ್ಯ ನಡವಳಿಕೆ ಆಗಿದೆ. ನಂತರ ಯಾರಿಗೆ ಟಿಕೆಟ್ ನೀಡಿದರೂ ನಮ್ಮ ಎಲ್ಲಾ ಆಕಾಂಕ್ಷಿಗಳು ಒಗ್ಗೂಡಿ ದುಡಿಯುತ್ತಾರೆ. ಜಾತಿ ಭೇದ ಮಾಡದ ವೀರಶೈವ ಸಮಾಜ ಈ ಹಿಂದೆ ಓಬಿಸಿ ಅಭ್ಯರ್ಥಿ ಪರ ನಿಂತಿದೆ. ಈ ತಿಂಗಳ 28 ರವೆಗೆ ವಿಜಯ ಸಂಕಲ್ಪ, ವಿವಿಧ ಮೋರ್ಚಾ ಸಮಾವೇಶ ನಡೆಯಲಿದೆ. ತದನಂತರ ಪಕ್ಷದ ಸಮಿತಿ ಎಲ್ಲಾ ಆಯಾಮ ಅವಲೋಕಿಸಿ ಮಾನದಂಡ ಅನ್ವಯ ಟಿಕೆಟ್ ನೀಡಲಿದೆ. ಎಲ್ಲಾ ಮುಖಂಡರು ಕಾರ್ಯಕರ್ತರು ಈಗಾಗಲೇ ಪಕ್ಷ ಸಂಘಟನೆಗೆ ಒತ್ತು ನೀಡಿ ಕೆಲಸ ನಡೆಸಿದ್ದಾರೆ. ಇದೇ ರೀತಿ ಬಲವರ್ಧನೆ ಮುಂದುವರೆಯಲಿದೆ ಎಂದರು.
ಗುಬ್ಬಿಯಲ್ಲಿ ಅಭಿವೃದ್ದಿ ಶೂನ್ಯ ಎಂಬುದು ಈಗಾಗಲೇ ಜನರಿಗೆ ತಿಳಿದ ವಿಚಾರ. ನಮ್ಮದೇ ಪಕ್ಷ ಆಡಳಿತದಲ್ಲಿದ್ದರೂ ಶಾಸಕರ ಒತ್ತಾಸೆ ಇರಬೇಕಿತ್ತು. ಇಲ್ಲಿ ಅದು ಕಾಣದ ಹಿನ್ನಲೆ ಮತದಾರರು ಬಿಜೆಪಿಯತ್ತ ಒಲವು ತೋರಿದ್ದಾರೆ. ಗೆಲ್ಲುವ ಅವಕಾಶ ಎದ್ದು ಕಾಣುವ ಹಿನ್ನಲೆ ಆಕಾಂಕ್ಷಿಗಳು ಹೆಚ್ಚಿದ್ದಾರೆ. ನನ್ನ ಹೆಸರು ಬಂದಿರುವುದು ವದಂತಿ. ನಾನು ಎಲ್ಲಿಯೂ ನಾನು ಆಕಾಂಕ್ಷಿ ಎಂದು ಹೇಳಿಲ್ಲ. ಸಂಘಟನೆ ಬಲಗೊಂಡಿರುವ ಗುಬ್ಬಿಯಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದ ಅವರು ಟಿಕೆಟ್ ಪಡೆಯುವ ಆಸೆಯೂ ಸಹಜ. ಹಾಗೆಯೇ ಸಿಗದಿದ್ದಾಗ ಬೇಸರ ಆಗುವುದು ಸಹಜ. ಆದರೆ ಪಕ್ಷ ನಿಷ್ಠೆ ಖಂಡಿತಾ ಈ ಬಾರಿ ಅನಾವರಣಗೊಳ್ಳಲಿದೆ. ಯಾರೋ ಬೇರೆ ಪಕ್ಷದತ್ತ ಮುಖ ಮಾಡುವ ವೀಕ್ ಮೈಂಡ್ ವ್ಯಕ್ತಿಗಳು ನಮ್ಮಲ್ಲಿಲ್ಲ. ಬಂಡಾಯದ ಮಾತು ಈ ಬಾರಿ ಕೇಳಲು ಸಾಧ್ಯವಿಲ್ಲ. ಯಾರಿಗೆ ಟಿಕೆಟ್ ನೀಡಿದರೂ ಒಮ್ಮತದ ಅಭಿಪ್ರಾಯ ಓಡಾಟ ಕಂಡು ಬರಲಿದೆ ಎಂದ ಅವರು ಬಗರ್ ಹುಕುಂ ಸಮಿತಿಯ ಸಭೆಗೆ ನಮ್ಮ ಸದಸ್ಯರು ನಿರಾಕರಿಸಲು ಕಾರಣವಿದೆ. ಅಲ್ಲಿ ನಡೆದ ಅವ್ಯವಹಾರ ತನಿಖೆಗೆ ನಾವೇ ಆಗ್ರಹಿಸಿರುವ ಕಾರಣ ನಂತರ ಅರ್ಹರಿಗೆ ಭೂಮಿ ಹಕ್ಕುಪತ್ರ ಸಿಗಲಿದೆ ಎಂದರು.
ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಶಂಕರಣ್ಣ ಮಾತನಾಡಿ ಓಬಿಸಿ ಜನಾಂಗಕ್ಕೆ ಮನ್ನಣೆ ನೀಡಿ ಪ್ರಾತಿನಿತ್ಯ ಕೊಟ್ಟ ಬಿಜೆಪಿ ಸರ್ಕಾರ ಪರ ನಮ್ಮ ಎಲ್ಲಾ ಸಮುದಾಯ ಬಿಜೆಪಿ ಪಕ್ಷ ಗೆಲುವಿಗೆ ಕೈ ಜೋಡಿಸಲಿದೆ. ಈ ನಿಟ್ಟಿನಲ್ಲಿ ಗುಬ್ಬಿಯಲ್ಲಿ ನಡೆಯುವ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ಜಿಲ್ಲೆಯ ಸಂಘಟನೆಗೆ ಸಹಕಾರಿ. ಜಿಲ್ಲೆಯಲ್ಲಿ ಎರಡು ಕ್ಷೇತ್ರಕ್ಕೆ ಓಬಿಸಿ ಅಭ್ಯರ್ಥಿ ಆಯ್ಕೆಗೆ ನಾನು ಸಹ ವೈಯಕ್ತಿಕ ಬೇಡಿಕೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಭೈರಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ರುದ್ರೇಶ್, ಜಿಲ್ಲಾ ಕಾರ್ಯದರ್ಶಿ ಅ.ನ.ಲಿಂಗಪ್ಪ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವೇದಮೂರ್ತಿ, ಸಂದೀಪ್ ಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಚಂದ್ರಶೇಖರಬಾಬು, ದಿಲೀಪ್ ಕುಮಾರ್, ಎನ್.ಸಿ.ಪ್ರಕಾಶ್, ಎಸ್.ನಂಜೇಗೌಡ, ಬಲರಾಮಯ್ಯ, ಎಸ್.ವಿಜಯ್ ಕುಮಾರ್, ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ, ಓಬಿಸಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ಭೀಮಶೆಟ್ಟಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಗಂಗಣ್ಣ, ಯತೀಶ್ ಸೇರಿದಂತೆ ಪಪಂ ಸದಸ್ಯರು ಹಾಗೂ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.