ಒಣ ಮತ್ತು ಹಸಿ ಕಸ ವಿಂಗಡನೆಗೆ ಡಬ್ಬಿ ವಿತರಣೆ : ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ.

ಗುಬ್ಬಿ: ಪಟ್ಟಣದ ನಾಗರೀಕರ ಆರೋಗ್ಯ ಕಾಪಾಡಲು ಸ್ವಚ್ಚತೆ ಬಹು ಮುಖ್ಯ. ಈ ಹಿನ್ನಲೆ ಒಣ ಮತ್ತು ಹಸಿ ಕಸ ವಿಲೇವಾರಿ ಮಾಡಲು ಅಗತ್ಯ ಡಬ್ಬಿಯನ್ನು ಪ್ರತಿ ಮನೆಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ತಿಳಿಸಿದರು.

ಪಟ್ಟಣದ 19 ನೇ ವಾರ್ಡ್ ಬಿಲ್ಲೇಪಾಳ್ಯ ಬಡಾವಣೆಯಲ್ಲಿ ಕಸದ ಡಬ್ಬಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಸ ವಿಲೇವಾರಿ ಮಾಡುವಲ್ಲಿ ಕೆಲ ತಾಂತ್ರಿಕ ದೋಷ ಸರಿ ಪಡಿಸಿ ಕೆಲ ದಿನಗಳಲ್ಲಿ ಒಣ ಮತ್ತು ಹಸಿ ಕಸ ವಿಂಗಡನೆ ಮಾಡಿ ಎರೆಹುಳು ಗೊಬ್ಬರ ತಯಾರಿಕೆ ಘಟಕ ಚಾಲನೆ ಆಗಲಿದೆ. ಈ ಹಿನ್ನಲೆ ಪ್ರತಿ ಮನೆಯಿಂದ ಒಣ ಹಸಿ ಕಸ ವಿಂಗಡಣೆ ಮಾಡಿ ನೀಡಲು ಅಗತ್ಯ ಡಬ್ಬಿ ನೀಡಲಾಗುತ್ತಿದೆ ಎಂದರು.

ಸ್ವಚ್ಚ ಭಾರತ ಅಭಿಯಾನದಡಿ ಪಟ್ಟಣದ ಎಲ್ಲಾ 19 ವಾರ್ಡ್ ಗಳಲ್ಲಿ ಪ್ರತಿ ಮನೆಗೆ ಹಸಿರು ಮತ್ತು ನೀಲಿ ಬಣ್ಣದ ಡಬ್ಬಿ ನೀಡಿ ಒಣ ಮತ್ತು ಹಸಿ ಕಸ ವಿಂಗಡಿಸಿ ನೀಡಲು ಮನವಿ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಜನರ ಸಹಕಾರ ಅತ್ಯಗತ್ಯ. ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ ಬಿಟ್ಟು ನಮ್ಮ ಪರಿಸರ ಸ್ವಚ್ಚವಾಗಿಡಲು ಗಮನ ನೀಡಬೇಕು ಎಂದ ಅವರು ಕೆಲ ದಿನದಲ್ಲಿ ಎಲ್ಲಾ ಮನೆಗಳಿಗೆ ಡಬ್ಬಿ ತಲುಪಲಿದೆ ಎಂದರು.

ಕಸ ವಿಲೇವಾರಿ ಘಟಕ ನಿರ್ವಹಣೆ ಮಾಡಿ ಸ್ಥಳೀಯವಾಗಿ ಉತ್ತಮ ಪರಿಸರ ನಿರ್ಮಾಣ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಎಲ್ಲಾ ಯಂತ್ರೋಪಕರಣ ಚಾಲನೆ ಮಾಡಲು ನಿರ್ಧರಿಸಲಾಗಿದ್ದು, ನಾಗರೀಕರ ಸಹಕಾರ ಅಗತ್ಯವಿದೆ. ಈ ಜೊತೆಗೆ ಕಸದ ವಾಹನ ಹಸಿ ಕಸ ಪಡೆಯಲು ಎರಡು ದಿನಕ್ಕೆ ಒಮ್ಮೆ ಬರಲಿದೆ. ಒಣ ಕಸ ಶೇಖರಣೆಗಾಗಿ ಮೂರು ದಿನಕ್ಕೊಮ್ಮೆ ವಾಹನ ಓಡಾಡಲಿದೆ. ಇದೇ ಸಮಯವನ್ನು ಅರಿತು ಕಸ ನೀಡಿ ಜನರು ಸಹಕರಿಸಬೇಕು ಎಂದರು.

ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಪಟ್ಟಣದ ಪರಿಸರ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಸ ವಿಲೇವಾರಿ ಎನ್ನುವುದು ಪ್ರಮುಖ ಅಂಶವಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯದಂತೆ ಮನವಿ ಮಾಡುತ್ತಾ ಒಣ ಮತ್ತು ಹಸಿ ಕಸ ವಿಂಗಡಿಸಿ ನೀಡಲು ಅಗತ್ಯ ಡಬ್ಬಿಗಳನ್ನು ನೀಡಲಾಗುತ್ತಿದೆ. ಕಸ ವಿಲೇವಾರಿಗೆ ಮಾತ್ರ ಡಬ್ಬಿ ಬಳಸಿ ಪಟ್ಟಣ ಪಂಚಾಯಿತಿ ಕೆಲಸಕ್ಕೆ ಸಹಕಾರ ನೀಡಲು ಮನವಿ ಮಾಡಿದರು.

ಪಪಂ ಸದಸ್ಯರಾದ ಮಹಮದ್ ಸಾದಿಕ್, ಬಸವರಾಜು, ಸುನಂದ, ಪ್ರಕಾಶ್, ಮಾನವ ಹಕ್ಕುಗಳ ಸೇವಾ ಸಮಿತಿಯ ಜಯಚಂದ್ರ, ಪಪಂ ಮುಖ್ಯಾಧಿಕಾರಿ ಶಂಕರ್, ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!