ಗುಬ್ಬಿ: ಕಳೆದ ಒಂದೂವರೆ ವರ್ಷದಿಂದ ಗುಬ್ಬಿ ಕ್ಷೇತ್ರ ಪ್ರವಾಸ ಮಾಡಿದ ನನ್ನ ಮುಂದೆ ಗಡಿ ಗ್ರಾಮಗಳ ಸಮಸ್ಯೆ ದೊಡ್ಡ ಪಟ್ಟಿ ಕಂಡು ಬಂದಿದೆ. ಇಂತಹ ನಿರ್ಲಕ್ಷ್ಯಕ್ಕೆ ಒಳಗಾದ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಸಮಸ್ಯೆ ಬಗೆಹರಿಸುವ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ವಿನೂತನವಾಗಿ ಆರಂಭಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಒತ್ತಾಸೆಯಂತೆ ವಾಸ್ತವ್ಯ ಕಾರ್ಯಕ್ರಮ ಗುಬ್ಬಿ ಕ್ಷೇತ್ರದಲ್ಲಿ ಆರಂಭಿಸಿದ್ದೇವೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ತಿಳಿಸಿದರು.
ತಾಲ್ಲೂಕಿನ ಚೇಳೂರು ಹೋಬಳಿ ಜಾಲಗುಣಿ ಗ್ರಾಮದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಂಚರತ್ನ ಯೋಜನೆ ಸಾಕಾರಕ್ಕೆ ರೈತ ವರ್ಗ ಈಗಾಗಲೇ ಜೆಡಿಎಸ್ ಪರ ನಿಲ್ಲಲು ಸಜ್ಜಾಗಿದೆ. ಮುಂದಿನ ಮುಖ್ಯಮಂತ್ರಿಯಾಗಿ ಕುಮಾರಣ್ಣ ಆಡಳಿತ ಮಾಡಲಿದ್ದಾರೆ. ಇದೇ ಸುಸಮಯದಲ್ಲಿ ಗುಬ್ಬಿ ಕ್ಷೇತ್ರದ ಜನತೆ ನನಗೆ ಆಶೀರ್ವದಿಸಿ ನಂತರ ಶಾಸಕರ ಕೆಲಸ ಹೇಗೆ ಎಂಬುದು ತೋರಿಸುವೆ ಎಂದರು.
ಹಾಗಲವಾಡಿ ಹೋಬಳಿಯ ಗಡಿ ಭಾಗದ ಶ್ರೀರಾಮನಗರ ಎಂಬ ಹಳ್ಳಿಯಲ್ಲಿ ರಾಜಕಾರಣಿಗಳು ಎಂದರೆ ಬೈಗುಳದ ಸರಮಾಲೆ ಬರುತ್ತದೆ. ಅಲ್ಲಿನ ಸಮಸ್ಯೆ ಹೆಣ್ಣು ಮಕ್ಕಳೇ ಛೀಮಾರಿ ಹಾಕಿ ಹೇಳುತ್ತಾರೆ. ಅಭಿವೃದ್ದಿ ಬಗ್ಗೆ ಮಾತನಾಡುವ ಶಾಸಕರು ಧೈರ್ಯ ಇದ್ದರೆ ಶ್ರೀರಾಮ ನಗರ ಗ್ರಾಮಕ್ಕೆ ಭೇಟಿ ನೀಡಿ ಜೊತೆಗೆ ಎಲ್ಲಾ ಪಕ್ಷದ ಮುಖಂಡರನ್ನು ಕರೆತನ್ನಿ. ಜೊತೆಗೆ ನಾನು ಬರುತ್ತೇನೆ ಎಂದು ಸವಾಲೆಸೆದ ಅವರು ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಸಚಿವರಾಗಿ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ನಂತರ ವರಿಷ್ಠರ ಮೇಲೆ ಸಲ್ಲದ ಮಾತುಗಳಾಡಿದ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪಂಚರತ್ನ ಯೋಜನೆ ಜೊತೆ ಮಹಿಳೆಯ ಸಾಲ ಮನ್ನಾ ಘೋಷಣೆ ಹಾಗೂ ರೈತರ ಗಂಡು ಮಕ್ಕಳನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮ ಬಗ್ಗೆ ಘೋಷಣೆ ಮಾಡಿದ್ದು ರೈತರ ಕುರಿತ ಪ್ರೀತಿ ತಿಳಿಯುತ್ತದೆ ಎಂದ ಅವರು ಜಿಲ್ಲೆಗೆ ನೀರಾವರಿ ಯೋಜನೆ ನೀಡಿದ್ದು ದೇವೇಗೌಡರು. ಹೇಮೆ ಹರಿಸುವ ಯೋಜನೆಯಲ್ಲಿ ಮಹತ್ವ ಪಡೆದ ಮಠ ಗಂಗಯ್ಯನಪಾಳ್ಯ ಹಾಗೂ ಹಾಗಲವಾಡಿ ಕೆರೆಗಳಿಗೆ ನೀರು ಹರಿಸುವ ಕೆಲಸವೇ ನನ್ನ ಮೊದಲ ಕೆಲಸವಾಗಿರುತ್ತದೆ. ಈ ಜೊತೆಗೆ 16 ಸಾವಿರ ರೈತ ಕುಟುಂಬಕ್ಕೆ ಸಾಲ ಮನ್ನಾ ಮಾಡಿದ ಕುಮಾರಣ್ಣ ಅವರ ಕೊಡುಗೆ ಗುಬ್ಬಿ ಕ್ಷೇತ್ರದಲ್ಲಿದ್ದು ಆ ಕುಟುಂಬಗಳ ಮನೆ ತಲುಪಿ ಜೆಡಿಎಸ್ ಪರ ಕೆಲಸ ಮಾಡಲು ಕಾರ್ಯಕರ್ತರನ್ನು ಸಿದ್ದ ಪಡಿಸಲಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ವಾಸ್ತವ್ಯ ಎಂಬ ಪದಕ್ಕೆ ಅರ್ಥ ನೀಡಿದ ಕುಮಾರಣ್ಣ ಮುಖ್ಯಮಂತ್ರಿ ಹೀಗೆ ಮನೆ ಬಾಗಿಲಿಗೆ ತಲುಪುವ ಜನ ಸೇವಕರಾಗಿ ಕೆಲಸ ಮಾಡಿದ್ದರು. ಸರ್ವ ಜನಾಂಗಕ್ಕೂ ನ್ಯಾಯ ಒದಗಿಸಿ ವಾಸ್ತವ್ಯ ಹೂಡಿ ಅಭಿವೃದ್ದಿ ಕುಂಠಿತ ಗ್ರಾಮವನ್ನು ಗುರುತಿಸುವ ಕೆಲಸ ಮಾಡಿದರು. ಈ ನಿಟ್ಟಿನಲ್ಲಿ ನಾಗರಾಜು ಅವರಿಗೆ ಕೈ ಜೋಡಿಸಿ ಕುಮಾರಣ್ಣ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು ಮಾತನಾಡಿ ನೀರಿನ ವಿಚಾರದಲ್ಲಿ ಕೈ ಮುಗಿದು ಕಾಲಿಗೆ ಬಿದ್ದರೂ ವಾಸಣ್ಣ ನಮ್ಮ ಬಗ್ಗೆ ನಿಗಾ ವಹಿಸದೇ ಕೆಲಸ ಆಗುತ್ತೆ ಅನ್ನುತ್ತಲೇ ಕಾಲ ಕಳೆದರು. ನಮ್ಮಲ್ಲಿ ಕುಡಿಯುವ ನೀರು ಬೇಕು ಎಂದರೂ ಕೆಲಸ ಮಾಡದ ಹಿನ್ನಲೆ ನಾನು ನೇರವಾಗಿ 2023 ಕ್ಕೆ ಜನ ದಂಗೆ ಎದ್ದು ನಿಮ್ಮನ್ನು ಸೋಲಿಸುತ್ತಾರೆ ನಮ್ಮಪ್ಪನ ಮೇಲಾಣೆ ಎಂದು ಹೇಳಿದ್ದೆ. ಹದಿನೈದು ದಿನದಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಪಪಂ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶಗೌಡ ಮಾತನಾಡಿ ಇಪ್ಪತ್ತು ವರ್ಷ ನಾಟಕವಾಡುತ್ತಾ ಮಂಕು ಬೂದಿ ಎರಚಿ ಕಾಲ ಕಳೆದ ಶಾಸಕರಿಗೆ ಅಭಿವೃದ್ದಿ ಬಗ್ಗೆ ಚಿಂತನೆಯೇ ಇಲ್ಲ. ಹಿಂಬಾಲಕರಿಗೆ ಕೆಲಸ ಕೊಟ್ಟು ಕಮಿಷನ್ ಮಾಡಿರುವುದು ಅವರ ಸಾಧನೆ. ಜನಪರ ಕೆಲಸ ಮಾಡದೆ ಪತ್ನಿ ಪುತ್ರನ ಮೂಲಕ ಕಳಪೆ ಕುಕ್ಕರ್ ಹಂಚುವ ಕೆಲಸ ಮಾಡಿದ್ದೀರಿ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಎಪಿಎಂಸಿ ಮಾಜಿ ಸದಸ್ಯ ಜಿ.ಎಂ.ಶಿವಲಿಂಗಯ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕವೀರಯ್ಯ, ಯುವ ಜೆಡಿಎಸ್ ಅಧ್ಯಕ್ಷ ಗಂಗಸಂದ್ರ ಮಂಜಣ್ಣ, ಗ್ರಾಪಂ ಸದಸ್ಯ ಮೋಹನ್, ತಾಪಂ ಮಾಜಿ ಸದಸ್ಯ ಕಾಂತರಾಜು, ಮುಖಂಡರಾದ ರಾಮಕೃಷ್ಣಯ್ಯ, ಸಲೀಂಪಾಷ, ಬಸವರಾಜು, ಮಧು, ನಾಗರಾಜು, ಮಂಜುನಾಥ, ಆನಂದಪ್ಪ, ರಾಜಣ್ಣ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.