ಮತಭಿಕ್ಷೆಗೆ ಸಿದ್ಧರಾದ ಸೊಗಡು ಶಿವಣ್ಣ

ತುಮಕೂರು: ಸ್ಥಳೀಯ ನಗರಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಸೊಗಡು ಶಿವಣ್ಣ ಮತಭಿಕ್ಷೆಗೆ ಸಿದ್ಧರಾಗಿದ್ದು, ಮಾ.12ರಂದು ನಗರದ ಎನ್.ಆರ್.ಕಾಲೋನಿಯ ದುರ್ಗಮ್ಮ, ದಾಳಮ್ಮ, ಪೂಜಮ್ಮ ದೇವರುಗಳಿಗೆ ಪೂಜೆ ಸಲ್ಲಿಸುವ ಮೂಲಕ ತಮಟೆ ವಾದ್ಯಗಳೊಂದಿಗೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.

ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎರಡು ಜೋಳಿಗೆಯಲ್ಲಿ ಒಂದರಲ್ಲಿ ಚುನಾವಣಾ ಸ್ಪರ್ಧೆಗೆ ಠೇವಣಿ ಹಣ ಕಟ್ಟಲು ನೋಟಿನ ಭಿಕ್ಷೆ, ಇನ್ನೊಂದು ಜೋಳಿಗೆಯಲ್ಲಿ ಜಯಗಳಿಸಲು ಅಗತ್ಯವಿರುವ ಮತ ಭಿಕ್ಷೆಯನ್ನು ಬೇಡುವ ಮೂಲಕ ಜನರ ಆಶೀರ್ವಾದಿಂದ ಮತ್ತೊಮ್ಮೆ ಗೆದ್ದು ಶಾಸಕನಾಗಿ ಜನಸೇವೆ ಮಾಡುವ ಆಶಯ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ವಿನಾಶದ ಅಂಚಿಗೆ ಸಾಗುತ್ತಿರುವ ಇಂದಿನ ದಿನಗಳಲ್ಲಿ ಅದರ ಉಳಿವಿಗಾಗಿ ಬುದ್ಧನ ಶಾಂತಿಮಂತ್ರ ಹಾಗೂ ಬಸವಣ್ಣನವರ ಕಾಯಕ ಮಂತ್ರವನ್ನು ಅಳವಡಿಸಿಕೊಂಡು ಯುವಜನರಲ್ಲಿ ಮತದಾನದ ಅರಿವು ಮೂಡಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ತೊಡಗಿಕೊಳ್ಳುವುದಾಗಿ ತಿಳಿಸಿದರು.

ಈ ಹಿಂದೆ ಶಾಸಕನಾಗಿ, ಸಚಿವನಾಗಿ ೨೦ ವರ್ಷಗಳ ಕಾಲ ನಗರದ ಶಾಂತಿ, ಆಡಳಿತ ಸುವ್ಯವಸ್ಥೆ, ಅಭಿವೃದ್ಧಿಯ ಕನಸು ನನಸು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು, ಕ್ಷೇತ್ರದ ಹಿರಿಯರು, ನಾಗರಿಕರು ಪಕ್ಷದ ಹಾಗೂ ವೈಯಕ್ತಿಕ ಅಭಿಮಾನಿಗಳು, ಮಿತ್ರ ಸಮೂಹ, ಕ್ರೀಡಾಪಟುಗಳು, ಯುವ ಸಮೂಹ, ಬಡ ಜನತೆ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

ಅಧಿಕಾರ ಇಲ್ಲದಿದ್ದರೂ ಸಹ ಕೋವಿಡ್ ಸಂಕಷ್ಟ ಹಾಗೂ ಅತೀವೃಷ್ಠಿ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿ, ಎಲ್ಲ ರೀತಿಯ ಸಹಾಯ, ಸಹಕಾರವನ್ನು ನೀಡಿದ ವಿಷಯವನ್ನು ಜನರು ಮರೆತಿಲ್ಲ. ಇದೆ ನನಗೆ ಮುಂದಿನ ಚುನಾವಣೆಗೆ ಗೆಲ್ಲಲು ಜನತೆಯ ಆಶೀರ್ವಾದವಾಗಲಿದೆ ಎಂದರು.

ಇಡಿ ಕ್ಷೇತ್ರದಲ್ಲಿ ಜನಬಲ ತನ್ನ ಪರವಾಗಿರುವಾಗ ಟಿಕೆಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡುವ ವಿಶ್ವಾಸವಿದ್ದು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬಹುತೇಕ ಜನ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

ಈ ಸಲದ ಚುನಾವಣೆಗಾಗಿ ಇತರೆ ಪಕ್ಷಗಳ ಟಿಕೆಟ್ ಅಕಾಂಕ್ಷಿಗಳು ಮತದಾರರಿಗೆ ಇಲ್ಲಸಲ್ಲದ ಆಮಿಷ ಒಡ್ಡುತ್ತಿದ್ದು, ಹಣ, ಸೀರೆ, ಕುಕ್ಕರ್ ಹಂಚಿಕೆ, ಮದ್ಯದ ಹೊಳೆ ಅರಿಸುತ್ತಿರುವುದಾಗಿ ತಿಳಿದು ಬಂದಿದ್ದು, ಮತದಾರರು ಇಂತಹ ಆಮಿಷಗಳಿಗೆ ಬಲಿಯಾಗದಂತೆ ಪ್ರಜಾಪ್ರಭುತ್ವ ಉಳಿವಿಗಾಗಿ ಸಜ್ಜನ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಪ್ರಸಕ್ತ ಚುನಾವಣೆಯಲ್ಲಿ ಆರಂಭವಾಗಿರುವ ನನ್ನ ಈ ವಿಶೇಷ ಪ್ರಚಾರದ ವೈಖರಿ ಚುನಾವಣೆ ಮುಗಿಯುವವರೆಗೂ ನಡೆಯಲಿದೆ ಎಂದು ತಿಳಿಸಿದರು.

ಮುಖಂಡರಾದ ಜಯಸಿಂಹರಾವ್, ಧನಿಯಾಕುಮಾರ್, ಶಾಂತರಾಜು, ನರಸಿಂಹಯ್ಯ, ರಂಗಾನಾಯಕ್, ಶಬ್ಬರಿ ಅಹಮದ್, ಕೆ.ಪಿ.ಮಮತ, ಗೋವಿಂದರಾಜು ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!