ಅಭಿವೃದ್ದಿ ಗಮನಿಸಿ ಜನರೇ ನಿರ್ಧಾರ ಮಾಡುತ್ತಾರೆ : ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ವಿಶ್ವಾಸ.
ಗುಬ್ಬಿ: ಅಭಿವೃದ್ದಿ ಕೆಲಸ ತುರುವೇಕೆರೆ ಕ್ಷೇತ್ರದಲ್ಲಿ ಗಮನಾರ್ಹ ಎನಿಸಿದೆ. ಈ ನಿಟ್ಟಿನಲ್ಲಿ ಜನರೇ ನಿರ್ಧಾರ ಮಾಡುತ್ತಾರೆ. ಚುನಾವಣೆಯಲ್ಲಿ ನಾನು ಮಾಡಿದ ಅಭಿವೃದ್ದಿ ಕೆಲಸ ಮಾತನಾಡಲಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚಿಣ್ಣನಾಯಕನಪಾಳ್ಯ ಗ್ರಾಮದಲ್ಲಿ ಸಿಸಿ ರಸ್ತೆ ಪೂಜೆ ಹಾಗೂ ಚೆಂಗಾವಿ ಗ್ರಾಮದ ಸರ್ಕಾರಿ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಎದುರಾಳಿಯಾಗಿದೆ. ಜೆಡಿಎಸ್ ಪ್ರತಿಸ್ಪರ್ಧಿಯಲ್ಲ ಎಂದು ನೇರ ಮಾತುಗಳಾಡಿದರು.
ಸಿ.ಎಸ್.ಪುರ ಹೋಬಳಿ ತುರುವೇಕೆರೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಜನರನ್ನು ನೇರ ಮಾತಾಡಿಸಿದರೇ ವಾಸ್ತವ ಸ್ಥಿತಿ ತಿಳಿಯುತ್ತದೆ. ಕೆಲಸ ಸಿಗದ ಕೆಲವರು ಬೇರೆಡೆ ಹೋದರೆ ಅದು ಉತ್ಪ್ರೇಕ್ಷೆ ಮಾಡುವ ಅಗತ್ಯವಿಲ್ಲ. ಸ್ವಾರ್ಥ ಮನೋಭಾವವುಳ್ಳ ಕೆಲವೇ ಕೆಲವು ಮಂದಿ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದ ಅವರು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಆಸ್ಪತ್ರೆ, ಆಹಾರ ಕಿಟ್ ಸೇರಿದಂತೆ ಕೂಲಿ ಕಾರ್ಮಿಕರ ಬದುಕಿಗೆ ಅಗತ್ಯ ವಸ್ತುಗಳ ವಿತರಣೆ ಸೇರಿದಂತೆ ಅನೇಕ ಕೆಲಸ ಮಾಡಿದ್ದೇವೆ ಎಂದರು.

ಈಗಾಗಲೇ 1600 ಕೋಟಿ ರೂಗಳ ಅಭಿವೃದ್ದಿ ಕೆಲಸ ಕ್ಷೇತ್ರದಲ್ಲಿ ಮಾಡಿದ್ದು, ಸಿ.ಎಸ್.ಪುರ ಹೋಬಳಿಯಲ್ಲಿ 300 ಕೋಟಿ ಅನುದಾನದ ಸಿಸಿ ರಸ್ತೆ ಕಾಮಗಾರಿ ನಡೆದಿದೆ. ಸರ್ಕಾರದ ಜೊತೆ ಚರ್ಚಿಸಿ ವಿಶೇಷ ಅನುದಾನ ತಂದಿದ್ದೇನೆ. ಸದ್ಯದಲ್ಲಿ 300 ಕೋಟಿ ಅನುದಾನದ ಕೆಲಸಕ್ಕೆ ಚಾಲನೆ ಸಿಗಲಿದೆ ಎಂದ ಅವರು ಜನರ ಬೇಡಿಕೆಗೆ ಮುನ್ನ ಕೆಲಸ ಮಾಡಿ ಎಲ್ಲಾ ಕೆರೆ ಕಟ್ಟೆಗಳು ತುಂಬಿಸಿದ್ದೇನೆ. ಸಿಸಿ ರಸ್ತೆ ಸೇರಿದಂತೆ ಅಭಿವೃದ್ದಿ ಎಲ್ಲಾ ಕೆಲಸಗಳು ಜನರ ನಿರೀಕ್ಷೆ ಮೀರಿ ನಡೆಸಿದ್ದೇನೆ. ಈ ನಿಟ್ಟಿನಲ್ಲಿ ಕೆಲಸಗಳೇ ಮತ್ತೇ ನನ್ನ ಕೈ ಹಿಡಿಯಲಿದೆ ಎಂದು ವಿಶ್ವಾಸದ ನುಡಿಗಳನ್ನು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ಗೀತಾ ರಾಮಕೃಷ್ಣ, ಮಂಜುಳಾ ಪ್ರಕಾಶ್, ತಾಪಂ ಮಾಜಿ ಸದಸ್ಯ ಭಾನುಪ್ರಕಾಶ್, ಚನ್ನಿಗಪ್ಪ, ರಘು, ಪಾಂಡುರಂಗ, ಕುಮಾರ್, ಸದಾಶಿವ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ