ಹೈನುಗಾರಿಕೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸೂಕ್ತ : ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅಭಿಪ್ರಾಯ.

ಗುಬ್ಬಿ: ಕೃಷಿ ಜೊತೆ ಹೈನುಗಾರಿಕೆ ಆರ್ಥಿಕ ಸದೃಢತೆಗೆ ಸಹಕಾರಿಯಾಗಿದೆ. ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರಿಗೆ ಹಣಕಾಸು ವ್ಯವಸ್ಥೆಗೆ ಪಶು ಸಂಗೋಪನೆ ಉತ್ತಮ ದಾರಿಯಾಗಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಗದ್ದೇಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು 29 ಲಕ್ಷ ರೂಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡ ಮಹಿಳಾ ಸಂಘ ಈ ಗ್ರಾಮದಲ್ಲಿ ಚುರುಕಿನ ಕೆಲಸ ಮಾಡುತ್ತಿದೆ. ಈ ಹೋಬಳಿಯಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ ಎಂಬುದು ಇಲ್ಲಿನ ರೈತರ ಹೆಮ್ಮೆ ವಿಚಾರ ಎಂದರು.

ಕೃಷಿಕ ವರ್ಗಕ್ಕೆ ಈಗಾಗಲೇ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಬೆಳೆಗೆ ವೈಜ್ಞಾನಿಕ ಬೆಲೆ ಸಿಗದ ಈ ಸಮಯದಲ್ಲಿ ಹಾಲು ಉತ್ಪಾದನೆಗೆ ಉತ್ತಮ ಬೆಲೆ ಸಿಗುತ್ತಿದೆ. ಈ ಚಟುವಟಿಕೆಗೆ ಮಹಿಳೆಯರು ಭಾಗಿಯಾಗಿರುವುದು ಲಾಭದಾಯಕ ಎಂದ ಅವರು ಗಂಟು ರೋಗದಿಂದ ಬಳಲಿದ ರಾಸುಗಳು ಈಗಾಗಲೇ ಮೃತ ಪಡುತ್ತಿವೆ. ಈ ಹಿನ್ನಲೆ ಹಾಲು ಉತ್ಪಾದನೆ ಇಳಿಮುಖವಾಗಿದೆ. ಇಂತಹ ಸಂದರ್ಭದಲ್ಲಿ ಹಸುಗಳನ್ನು ಆರೈಕೆ ಮಾಡುವ ಕೆಲಸ ಮಾಡಬೇಕು. ರೋಗ ಕಾಣಿಸಿಕೊಂಡ ರಾಸುಗಳನ್ನು ಸ್ವಲ್ಪ ಅಂತರ ಕಾದು ನೋಡಿಕೊಳ್ಳಬೇಕು ಎಂದ ಅವರು ಗ್ರಾಮದಲ್ಲಿ ನಾನು ಸಹ ಡೈರಿ ಮೂಲಕವೇ ರಾಜಕಾರಣಕ್ಕೆ ಬಂದಿದ್ದೇನೆ. ಡೈರಿಗಳಲ್ಲಿ ಸಲ್ಲದ ರಾಜಕಾರಣ ಬೆರೆಯದಂತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ತುಮಕೂರು ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ ಮಾತನಾಡಿ ಬೇಸಿಗೆಯ ಈ ಸಮಯದಲ್ಲಿ ಹಾಲು ಉತ್ಪಾದನೆ ಕ್ಷೀಣಿಸಿದೆ. ರಾಜ್ಯದಲ್ಲಿ 15 ಲಕ್ಷ ಲೀಟರ್ ಹಾಲು ಇಳಿಮುಖವಾಗಿದೆ. ಈ ಜೊತೆಗೆ ಗಂಟು ರೋಗ ಸಹ ಹೈನುಗಾರಿಕೆಗೆ ಪೆಟ್ಟು ನೀಡಿದೆ. ಇದರ ಬಗ್ಗೆ ರೈತರು ನಿಗಾ ವಹಿಸಬೇಕು. ಹಾಲು ಕಡಿಮೆಯಾದರೂ ಗ್ರಾಹಕರಿಗೆ ಹಾಲು ವಿತರಣೆ ಮಾಡುತ್ತಿದ್ದೇವೆ. ಇತರೆ ಉತ್ಪನ್ನಗಳನ್ನು ಕಡಿಮೆಗೊಳಿಸಿ ಹಾಲು ವಿತರಣೆ ವ್ಯವಸ್ಥೆ ಮಾಡಲಾಗುವುದು. ಈ ನಡುವೆ ತುಮುಲ್ ಲಾಭದಾಯಕಗೊಳಿಸಲು ಸಾಕಷ್ಟು ಶ್ರಮ ವಹಿಸಿದ್ದೇವೆ. ಉತ್ಪಾದಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಸಹಾಯ, ರಾಸು, ರೈತರಿಗೆ ವಿಮೆ, ಅಕಾಲಿಕ ಮರಣಕ್ಕೆ ಪರಿಹಾರ ಹೀಗೆ ಅನೇಕ ಸವಲತ್ತು ಒಕ್ಕೂಟ ನೀಡುತ್ತಿದೆ ಎಂದರು.

ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಚಂದ್ರಶೇಖರ್ ಮಾತನಾಡಿ ಕೃಷಿಕ ವರ್ಗಕ್ಕೆ ಸದ್ಯ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಬೆಳೆದ ಕೃಷಿ ಬೆಳೆಗೆ ವೈಜ್ಞಾನಿಕ ಬೆಲೆ ಬರುತ್ತಿಲ್ಲ. ಆದರೆ ಮನೆ ಬಾಗಿಲಿಗೆ ಡೈರಿ ನೀಡಿ ಹಾಲು ಕೊಳ್ಳುವ ವ್ಯವಸ್ಥೆ ನಮ್ಮ ಒಕ್ಕೂಟ ಮಾಡಿದೆ. ಈ ಜೊತೆಗೆ ಯಡಿಯೂರಪ್ಪ ಅವರು ನೀಡಿದ ಎರಡು ರೂಗಳ ಪ್ರೋತ್ಸಾಹಧನ ನೀಡಿದ್ದು ಇಂದು ಐದು ರೂಗಳಿಗೆ ಏರಿಕೆಯಾಗಿ ನೇರ ಖಾತೆಗೆ ಕೊಡಲಾಗುತ್ತಿದೆ ಎಂದ ಅವರು ತುರುವೇಕೆರೆ ಕ್ಷೇತ್ರಕ್ಕೆ ಮಸಾಲಾ ಜಯರಾಮ್ ನೀಡಿರುವ ಕೊಡುಗೆ ಅಪಾರ. ನೆನೆಗುದಿಗೆ ಬಿದ್ದ ಕೆಲಸಗಳು ಕಾರ್ಯಗತ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಸಚಿವರಾಗಿ ಕೆಲಸ ಮಾಡಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ಹುಚ್ಚಮ್ಮ, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಪಿ.ಸುರೇಶ್, ವ್ಯವಸ್ಥಾಪಕ ಡಾ.ಟಿ.ಎಂ.ಪ್ರಸಾದ್, ಉಪ ವ್ಯವಸ್ಥಾಪಕ ಚಂದ್ರಶೇಖರ್, ವಿಸ್ತರಣಾಧಿಕಾರಿ ಸಿದ್ದಲಿಂಗಸ್ವಾಮಿ, ಮಂಜುನಾಥ್, ಪುಷ್ಪಲತಾ, ಸಂಘದ ಮುಖ್ಯ ಕಾರ್ಯನಿರ್ವಾಹಕಿ ಲಕ್ಷ್ಮೀದೇವಿ, ಹಾಲು ಪರೀಕ್ಷಕಿ ನೇತ್ರಾವತಿ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!