ಗುಬ್ಬಿ: ರಾಜ್ಯದಲ್ಲಿ 40 ಲಕ್ಷ ಮಂದಿ ಜನಸಂಖ್ಯೆ ಇದ್ದರೂ ರಾಜಕೀಯ ಪ್ರಾತಿನಿಧ್ಯ ಸಿಗದ ತಿಗಳ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಮಾನ್ಯತೆ ನೀಡಿ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಅಗ್ನಿವಂಶ ಕ್ಷತ್ರಿಯ ಸಂಘದ ಅಧ್ಯಕ್ಷ ರಾಮಯ್ಯ ಒತ್ತಾಯಿಸಿದರು.
ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ಅವಲಂಬಿತ ನಮ್ಮ ಜನಾಂಗ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಶಕ್ತಿ ಪಡೆದಿಲ್ಲ. ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿ ಬರಬೇಕಾದರೆ ರಾಜಕೀಯ ಶಕ್ತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನಮ್ಮ ಜನಾಂಗದ ಆಕಾಂಕ್ಷಿಗಳಿಗೆ ಗುರುತಿಸಿ ಟಿಕೆಟ್ ನೀಡಬೇಕು. ಗುಬ್ಬಿಯಲ್ಲಿ ಬಿಜೆಪಿ ಪಕ್ಷಕ್ಕೆ ದುಡಿದ ಸಾಗರನಹಳ್ಳಿ ನಂಜೇಗೌಡರು ಸೂಕ್ತ ಅಭ್ಯರ್ಥಿ ಎನಿಸಿದ್ದಾರೆ. ಅವರಿಗೆ ಬಿಜೆಪಿ ಮನ್ನಣೆ ನೀಡಿ ಓಬಿಸಿ ಜನಾಂಗಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮವನ್ನು ಇದೇ ತಿಂಗಳ 28 ಕ್ಕೆ ಅದ್ದೂರಿಯಾಗಿ ನಡೆಸಲು ಸಜ್ಜಾದ ಸಮುದಾಯದ ಮುಖಂಡರು ನಮ್ಮದೇ ಹಕ್ಕೊತ್ತಾಯ ಮಂಡಿಸಲು ನಿರ್ಧರಿಸಿದ್ದಾರೆ. ಎಲ್ಲೆಲ್ಲಿ ನಮ್ಮ ಜನಾಂಗದ ಆಕಾಂಕ್ಷಿಗಳು ಚುನಾವಣೆಗೆ ಸಜ್ಜಾಗಿದ್ದಾರೆ ಅಲ್ಲಿ ನಮ್ಮಗಳ ಸಂಪೂರ್ಣ ಬೆಂಬಲ ಸೂಚಿಸಿ ಅವಿರತ ಶ್ರಮ ವಹಿಸುತ್ತೇವೆ. ಯಾವುದೇ ಪಕ್ಷ ನಮ್ಮ ಜನಾಂಗಕ್ಕೆ ಮನ್ನಣೆ ನೀಡುತ್ತದೆ ಆ ಪಕ್ಷಕ್ಕೆ ನಮ್ಮ ಹೋರಾಟ ನಿರಂತರ ಇರಲಿದೆ ಎಂದ ಅವರು ತಾಲ್ಲೂಕಿನ ತಿಗಳ ಜನಾಂಗದ ಎಲ್ಲರೂ 28 ರಂದು ಆಗಮಿಸಿ ಜಯಂತಿ ಕಾರ್ಯಕ್ರಮ ಹಾಗೂ ಸಮಾವೇಶ ಯಶಸ್ವಿಗೆ ಕೈ ಜೋಡಿಸಲು ಮನವಿ ಮಾಡಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್ ಮಾತನಾಡಿ ಈಗಾಗಲೇ ಓಬಿಸಿ 2ಎ ಪ್ರವರ್ಗಕ್ಕೆ ಸೇರಿದ ತಿಗಳ ಜನಾಂಗಕ್ಕೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ನೂರು ಜನಾಂಗ ಸೇರಿದ 2ಎ ವರ್ಗದಲ್ಲಿ ಬಲಿಷ್ಠ ನಾಲ್ಕು ಜನಾಂಗ ಮಾತ್ರ ಶೇಕಡಾ 96 ರಷ್ಟು ಸವಲತ್ತು ಪಡೆದರೆ, ಉಳಿದ ನಾಲ್ಕು ಸವಲತ್ತು 96 ಜಾತಿ ಪಡೆಯುವ ದುಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ಪ್ರವರ್ಗ 1 ಕ್ಕೆ ಸೇರಿಸಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸುತ್ತೇವೆ. ಈ ಜೊತೆಗೆ ರಾಜಕೀಯ ಇಚ್ಛಾಶಕ್ತಿ ಬೆಳೆಸಿಕೊಳ್ಳಲು ನಮ್ಮ ಜನಾಂಗದ ಅಭ್ಯರ್ಥಿಗಳಿಗೆ ಅವಕಾಶ ಕೊಡುವ ಪಕ್ಷಕ್ಕೆ ನಾವು ಬೆಂಬಲ ನೀಡುತ್ತೇವೆ. ಓಬಿಸಿ ಗೆ ಮಾನ್ಯತೆ ನೀಡುವ ಬಿಜೆಪಿ ನಂಜೇಗೌಡರಿಗೆ ಟಿಕೆಟ್ ನೀಡಿದರೆ ಅವರನ್ನು ಎಲ್ಲಾ ಜನಾಂಗದ ಮತಗಳ ಜೊತೆ ಗೆಲ್ಲಿಸುತ್ತೇವೆ ಎಂದು ಬೇಡಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ನಂಜೇಗೌಡ, ಜಿ.ಬಿ.ಮಲ್ಲಪ್ಪ, ಶಿವಣ್ಣ, ಮಹದೇವಯ್ಯ, ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಪಪಂ ಮಾಜಿ ಸದಸ್ಯ ಜಿ.ಸಿ.ಲೋಕೇಶ್ ಬಾಬು, ಚಂದ್ರಣ್ಣ, ಲಕ್ಕೇನಹಳ್ಳಿ ಕೃಷ್ಣಮೂರ್ತಿ, ಸೋಮಶೇಖರ್, ಗಂಗಣ್ಣ ಸೇರಿದಂತೆ ಜನಾಂಗದ ಯಜಮಾನರು, ಅಣೆಕಾರರು, ಗೌಡರು, ಮುದ್ರೆಯವರು ಅನೇಕ ಮಂದಿ ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.