ಗುಬ್ಬಿ: ನಾಗರೀಕ ಸಮಾಜದಿಂದ ಭಿನ್ನವಾಗಿ ಬದುಕು ಸಾಗಿಸುವ ವೈಶಿಷ್ಟ್ಯ ಕಟ್ಟುಪಾಡು ಹೊಂದಿರುವ ಕಾಡು ಗೊಲ್ಲರನ್ನು ಎಲ್ಲಾ ರೀತಿಯಲ್ಲೂ ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದೇವೆ. ಇದೇ ತಿಂಗಳ 13 ಕ್ಕೆ ಗುಬ್ಬಿಯಲ್ಲಿ ಬೃಹತ್ ಜಾಥಾ ಮೆರವಣಿಗೆ ನಡೆಸಿ ನಮ್ಮ ಹಕ್ಕೊತ್ತಯವನ್ನು ತಾಲ್ಲೂಕು ಆಡಳಿತ ಮೂಲಕ ಸರ್ಕಾರಕ್ಕೆ ತಲುಪಿಸುತ್ತೇವೆ ಎಂದು ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಂಗಾಧರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿನ ಕಾಡು ಗೊಲ್ಲರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ಸಮಾಜಕ್ಕೆ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ದೊರಕಿಲ್ಲ. ಇಂದಿಗೂ ನಮ್ಮ ಸಮುದಾಯ ಪಶು ಸಂಗೋಪನೆ ವೃತ್ತಿ ಅವಲಂಬಿತವಾಗಿ ಅನೇಕ ವಿಶಿಷ್ಟ ಸಂಪ್ರದಾಯ ನಡೆಸಿಕೊಂಡು ಹಟ್ಟಿಗಳಲ್ಲಿ ಬದುಕು ಸಾಗಿಸಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಪ್ರಾಧಾನ್ಯತೆ, ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು. ಎಲ್ಲಾ ಬೇಡಿಕೆಯನ್ನು ಚುನಾಯಿತ ಪ್ರತಿನಿಧಿಗಳನ್ನು ಸ್ಥಳಕ್ಕೆ ಆಹ್ವಾನಿಸಿ ಗಮನ ಸೆಳೆಯುತ್ತವೆ ಎಂದರು.
ಕಾಡು ಗೊಲ್ಲರ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಸಲ್ಲದ ಮಾನದಂಡ ಅನುಸರಿಸಲಾಗಿದೆ. ತಹಶೀಲ್ದಾರ್ ಮೂಲಕ ಜಾತಿ ಪ್ರಮಾಣ ಪತ್ರವನ್ನು ಸ್ಥಳ ಪರಿಶೀಲನೆ ನಡೆಸಿ ನೀಡಲು ಸರ್ಕಾರ ಆದೇಶಿಸಬೇಕು. ಪ್ರಮಾಣ ಪತ್ರವನ್ನು ನೀಡದ ಈ ಸಂದರ್ಭದಲ್ಲಿ ನಿಗಮ ಮಂಡಳಿ ಮೂಗಿಗೆ ತುಪ್ಪ ಸವರಿದಂತಾಗಿದೆ. ಕೂಡಲೇ ಈ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದ್ದೇವೆ ಎಂದ ಅವರು ಬಿಜೆಪಿ ಸರ್ಕಾರ ನಮ್ಮನ್ನು ಬಳಸಿಕೊಂಡು ಆಡಳಿತ ನಡೆಸಿದೆ. ಆದರೆ ನಮ್ಮ ಮೂಲಭೂತ ಹಕ್ಕು ನೀಡುವಲ್ಲಿ ಮೀನಾಮೇಷ ಎಣಿಸಿದೆ. ಕೂಡಲೇ ನಮ್ಮ ಒತ್ತಾಯಗಳನ್ನು ಆಲಿಸಬೇಕು. ಇಲ್ಲವಾದಲ್ಲಿ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಬಸವರಾಜು ಮಾತನಾಡಿ ಅಧೀಮ ಬುಡಕಟ್ಟು ಎಂದು ಗುರುತಿಸಿಕೊಂಡ ಕಾಡು ಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಳಂಬ ಅನುಸರಿಸಿದ್ದಾರೆ ತಿಳಿಯದಾಗಿದೆ. ಮುಖ್ಯವಾಹಿನಿಗೆ ಬರಬೇಕಾದ ನಮ್ಮ ಜನಾಂಗ ಇಡೀ ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ಮಂದಿ ಇದ್ದಾರೆ. 12 ಜಿಲ್ಲೆ 40 ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕರಾದ ನಮ್ಮ ಜನಾಂಗ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ಅನ್ನಪೂರ್ಣಮ್ಮ ವರದಿ ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರ ಮೂಲಕ ನಮ್ಮನ್ನು ಎಸ್ಟಿ ವರ್ಗಕ್ಕೆ ಸೇರಿಸಿ ಎಂದು ಒತ್ತಾಯಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದರಾಜು ಮಾತನಾಡಿ ತಾಲ್ಲೂಕಿನಲ್ಲಿ 30 ಸಾವಿರ ಮಂದಿ ಇರುವ ಕಾಡು ಗೊಲ್ಲರ ಮೂಲ ಹಕ್ಕುಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಇದೇ ತಿಂಗಳ 13 ರಂದು ನಡೆಯುವ ಜಾಥಾ ಮೆರವಣಿಗೆ ನಮ್ಮ ರಾಜ್ಯಾಧ್ಯಕ್ಷ ರಾಜಣ್ಣ ಅವರ ನೇತೃತ್ವದಲ್ಲಿ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಹೊರಟು ತಾಲ್ಲೂಕು ಕಚೇರಿ ತಲುಪಿ ಪ್ರತಿಭಟಿಸಿ ನಮ್ಮ ಹಕ್ಕೊತ್ತಾಯದ ಪತ್ರ ತಹಶೀಲ್ದಾರ್ ಅವರಿಗೆ ಸಲ್ಲಿಸುತ್ತೇವೆ. ಈ ಜಾಥಾದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಯಶೋಧಮ್ಮ, ತಾಪಂ ಮಾಜಿ ಸದಸ್ಯ ತಿಮ್ಮಣ್ಣ, ಪೂಜಾರ್ ಯರಪ್ಪ, ತಾಲ್ಲೂಕು ಅಧ್ಯಕ್ಷ ದೇವರಾಜ್, ಕೆಟಿಕೆ ಪ್ರಭು, ಜುಂಜೆಗೌಡ, ನಾಗರಾಜು, ಮಲ್ಲಿಕಾರ್ಜುನಸ್ವಾಮಿ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.