ಗುಬ್ಬಿ: ಕಾಡು ಗೊಲ್ಲರ ಹಕ್ಕೊತ್ತಾಯ ಹೋರಾಟಕ್ಕೆ ನಮ್ಮೆಲ್ಲರ ಸಹಕಾರವಿದೆ. ಆದರೆ ಚುನಾವಣಾ ಸಂದರ್ಭದಲ್ಲಿ ಇದು ಅಪ್ರಸ್ತುತ. 34 ಸಾವಿರ ಸಂಖ್ಯೆಯ ಕಾಡು ಗೊಲ್ಲರ ಪೈಕಿ ಕೇವಲ ಮುನ್ನೂರು ಮಂದಿ ಹೋರಾಟ ನಡೆದಿದ್ದು ಸಹ ಮುಜುಗರ ತಂದಿದೆ. ಈ ನಡುವೆ ಸಲ್ಲದ ರಾಜಕೀಯ ಲೇಪನ ಮಾಡಿ ಬೆಟ್ಟಸ್ವಾಮಿ ಅವರಿಗೆ ಆಹ್ವಾನವಿಲ್ಲ ಎನ್ನುವ ವಿಚಾರವನ್ನು ತಿರುಚಿ ಅಪಪ್ರಚಾರ ಮಾಡಲು ಕೆಲವರು ಮಾಧ್ಯಮವನ್ನು ಬಳಸಿದ್ದಾರೆ. ಇದು ಖಂಡನೀಯ ಎಂದು ಕಾಡು ಗೊಲ್ಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಹನುಮಂತರಾಜು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಒಳಪಂಗಡವಾದ ಕಾಡು ಊರು ಎಂಬುದು ಕೇವಲ ಆಚಾರ ವಿಚಾರಕ್ಕೆ ಸೀಮಿತವಾಗಿದೆ. ಆದರೆ ಅದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವರ ಬಗ್ಗೆ ಎಚ್ಚರಿಕೆ ವಹಿಸಬೇಕು. ರಾಜಕೀಯ ಚುನಾವಣೆ ವಿಚಾರ ಬಂದಾಗ ನಾವೆಲ್ಲ ಒಂದೇ ಎನ್ನುವ ಮಂತ್ರ ಗೊಲ್ಲರು ಪಠಿಸುತ್ತಾರೆ ಎಂದು ಸಮರ್ಥಿಸಿಕೊಂಡರು.
ರಾಜಕೀಯ ಪ್ರೇರಿತ ಎನ್ನುವ ಮೇಲ್ನೋಟಕ್ಕೆ ಕಂಡಿದೆ. ನಮ್ಮ ಆಚರಣೆ ಸಂಸ್ಕೃತಿ ಅನ್ವಯ ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯ ಮಾಡಿರುವುದು ಸ್ವಾಗತಾರ್ಹ. ಆದರೆ ಹಲವು ಹೋರಾಟದ ಮುಖಂಡರನ್ನು ಆಹ್ವಾನಿಸದೇ ಕಡಿಮೆ ಸಂಖ್ಯೆಯಲ್ಲಿ ಹೋರಾಟ ನಡೆದು ರೂಪುರೇಷೆಗಳ ವ್ಯವಸ್ಥೆ ಹದಗೆಟ್ಟಿದೆ ಎನಿಸಿದೆ ಎಂದ ಅವರು ಬೆಟ್ಟಸ್ವಾಮಿ ಅವರಿಗೆ ಗೊಲ್ಲರ ಮತ ಬರೋಲ್ಲ ಎಂಬ ತಿರುಚಿದ ಸುದ್ದಿ ದುರುದ್ದೇಶದ್ದಾಗಿದೆ. ಕಳೆದ ಎರಡು ಬಾರಿ ಸಮೀಪ ಅಂತರದಲ್ಲಿ ಸೋತಿರುವ ಅವರಿಗೆ ಕಾಡು ಗೊಲ್ಲರ ಮತ ಬಂದಿದೆ. ಕಣದಲ್ಲಿ ಬರಬಾರದು ಎನ್ನುವ ಉದ್ದೇಶದಲ್ಲಿ ನಡೆದ ತಂತ್ರ ಫಲಿಸುವುದಿಲ್ಲ. ಬಿಜೆಪಿಯ ವರಿಷ್ಠರಿಗೆ ತಪ್ಪು ಮಾಹಿತಿ ರವಾನಿಸಿ ಗೆದ್ದೇ ಎನ್ನುವ ಭ್ರಮೆ ಕೆಲವರಲ್ಲಿದೆ ಎಂದು ಛೇಡಿಸಿದರು.
ಕಾಡು ಗೊಲ್ಲರ ಜಿಲ್ಲಾ ಸಂಘದ ನಿರ್ದೇಶಕ ಪೂಜಾರ್ ಯರ್ರಪ್ಪ ಮಾತನಾಡಿ ಮೀಸಲಾತಿ ವಿಚಾರದಲ್ಲಿ ನಡೆದ ಹೋರಾಟಕ್ಕೆ ನಾನು ಸಹ ಭಾಗವಹಿಸಿದ್ದೆ. ಒಳ ಪಂಗಡ ಹಕ್ಕೊತ್ತಾಯ ಹೋರಾಟದ ಕಾರಣ ಬೆಟ್ಟಸ್ವಾಮಿ ಅವರಿಗೆ ಆಹ್ವಾನ ಮಾಡಿರಲಿಲ್ಲ ಅಷ್ಟೇ. ಆದರೆ ಅದನ್ನೇ ಬೆನ್ನತ್ತಿ ನಮ್ಮಲ್ಲೇ ಒಡಕು ಮೂಡಿಸುವ ಕುತಂತ್ರ ಸರಿಯಲ್ಲ. ನಮ್ಮಲ್ಲಿ ಒಡಕು ಮೂಡಿಸುವವರಿಂದ ದೂರ ಉಳಿದು ಒಗ್ಗಟ್ಟು ಪ್ರದರ್ಶನ ಈ ಬಾರಿ ಮಾಡಬೇಕಿದೆ. ರಾಜಕೀಯ ಚುನಾವಣೆ ವಿಚಾರ ಬಂದಾಗ ನಾವೆಲ್ಲ ಒಂದೇ ಎನ್ನುವ ಘೋಷಣೆ ಕೂಗುತ್ತೇವೆ. ನಮ್ಮ ಗೊಲ್ಲ ಸಮುದಾಯದ ಅಭ್ಯರ್ಥಿಯ ಕೈ ಹಿಡಿಯುತ್ತೇವೆ ಎಂದರು.
ಕಾಡು ಗೊಲ್ಲರ ಸಂಘದ ಜಿಲ್ಲಾ ನಿರ್ದೇಶಕ ಶಿವಗಂಗಯ್ಯ ಮಾತನಾಡಿ ಕೆಲ ಮಾಧ್ಯಮ ಕೆಲವರ ಹೇಳಿಕೆಯನ್ನು ತಿರುಚಿ ಬರೆದು ಪ್ರಬಲ ಮುಖಂಡ ಬೆಟ್ಟಸ್ವಾಮಿ ವಿರುದ್ದ ತಂತ್ರ ಮಾಡಿದ್ದು ಸರಿಯಲ್ಲ. ಒಳ ಪಂಗಡ ಕೇವಲ ಮೀಸಲಾತಿ ಹೋರಾಟಕ್ಕೆ ಸೀಮಿತ. ಕೆಲ ರಾಜಕಾರಣಿಗಳು ಹಟ್ಟಿಗಳಲ್ಲಿ ಅಪಪ್ರಚಾರಕ್ಕೆ ಮುಂದಾಗಿರುವ ಮಾಹಿತಿ ಇದೆ. 2800 ಅರ್ಜಿಗಳು ಬರೆದಿದ್ದಾರೆ ಎಂದು ಸಲ್ಲದ ಆರೋಪ ಮಾಡುತ್ತಾ ಸ್ವಾರ್ಥ ಸಾಧನೆಗೆ ಮುಂದಾಗಿದ್ದಾರೆ. ಇವೆಲ್ಲವನ್ನೂ ದೂರವಿಟ್ಟು ಈ ಬಾರಿ ಕಾಡು ಗೊಲ್ಲರು ಬೆಟ್ಟಸ್ವಾಮಿ ಅವರ ಹಿಂದೆ ಇದ್ದು ನೂರಕ್ಕೆ ನೂರು ಗೆಲುವಿಗೆ ಸಹಕಾರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಡು ಗೊಲ್ಲರ ಸಂಘದ ಜಿಲ್ಲಾ ನಿರ್ದೇಶಕ ಶಿವರಾಜು, ಮುಖಂಡರಾದ ಕಾಳಯ್ಯ, ಬಸವರಾಜು, ಗುಬ್ಬಿಹಟ್ಟಿ ಮಹಾಲಿಂಗಯ್ಯ, ರಾಮಯ್ಯ, ಮಹದೇವ್, ಮಹಾಲಿಂಗಯ್ಯ, ಅಜ್ಜಣ್ಣ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.