ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ನಾಲಿಗೆಗೂ ಬ್ರೈನ್ ಗೂ ಲಿಂಕ್ ಇಲ್ಲ : ತುರುವೇಕೆರೆ ಶಾಸಕ ಮಸಾಲಾ ಜಯರಾಮ್.

ಗುಬ್ಬಿ: ತುರುವೇಕೆರೆ ಕ್ಷೇತ್ರದಲ್ಲಿ ನಾನು ಬರೆದ ಪತ್ರದ ಕೆಲಸ ನಡೆದಿದೆ ಎನ್ನುವ ಮಾಜಿ ಶಾಸಕ ಕೃಷ್ಣಪ್ಪ ಅವರ ನಾಲಿಗೆ ಬ್ರೈನ್ ಮಧ್ಯೆ ಲಿಂಕ್ ಇಲ್ಲ. 75 ವರ್ಷ ವಯಸ್ಸಿನಲ್ಲಿ ಆರುಳೋ ಮರುಳೋ ಎಂಬಂತಾಗಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ವ್ಯಂಗ್ಯ ಮಾಡಿದರು.

ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಮಣೆಕುಪ್ಪೆ, ಗದ್ದೇಹಳ್ಳಿ ಗ್ರಾಮದಲ್ಲಿ ನಡೆದ ಸುಮಾರು 24 ಕೋಟಿ ರೂಗಳ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪ್ರಸ್ತಾವನೆ ಎಲ್ಲಾ ಶಾಸಕರು ಸಲ್ಲಿಸುತ್ತಾರೆ. ಆದರೆ ಸರ್ಕಾರದಿಂದ ಅನುದಾನ ತಂದು ಕೆಲಸ ಮಾಡಿ ಜನ ಮೆಚ್ಚುಗೆ ಸಲ್ಲಿಸಬೇಕಿದೆ. ಮಾಜಿ ಶಾಸಕರ ಪತ್ರ ಇನ್ನೂ ನಡೆದಿದೆ ಎನ್ನುವ ಕೃಷ್ಣಪ್ಪನವರು ಒಳ್ಳೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದೆ ಎಂದು ಲೇವಡಿ ಮಾಡಿದರು.

ಹಿಂದಿನ ಮಾಜಿ ಶಾಸಕರ ಪತ್ರ ಕೆಲಸ ಮಾಡಿದ್ದೆ ಆದರೆ ವೀರಣ್ಣಗೌಡರು, ಬಾಣಸಂದ್ರ ಹುಚ್ಚೆಗೌಡರು, ತಾಳಕೆರೆ ಸುಬ್ರಹ್ಮಣ್ಯ ಅವರ ಕೆಲಸ ಎಂದೇ ಹೇಳಬಹುದಿತ್ತು ಅಲ್ಲವೇ ಎಂದು ಹಾಸ್ಯ ಮಾಡಿದ ಅವರು ನಾನು ಪೂಜೆ ಸಲ್ಲಿಸಿದ ಕೆಲಸಗಳ ವಸ್ತು ಸ್ಥಿತಿ ಮಾಧ್ಯಮ ಸ್ನೇಹಿತರೇ ಅವಲೋಕಿಸಬಹುದು. ಚುನಾವಣಾ ಸಂದರ್ಭದಲ್ಲಿ ಪೂಜೆ ಎನ್ನುವ ಆರೋಪ ಮಾಡುವವರು ಆಯಾ ಸ್ಥಳಕ್ಕೆ ಭೇಟಿ ನೀಡಿ ಜನರನ್ನೇ ಕೇಳಬಹುದು. ಬುದ್ದಿಭ್ರಮಣೆಯ ಮಾತು ಮೊದಲು ಬಿಡಿ ಎಂದು ತಿಳಿಸಿದರು.

ನನ್ನ ರಾಜಕೀಯ ಗುರುಗಳು ಮಾಜಿ ಸಿಎಂ ಯಡಿಯೂರಪ್ಪ ಅವರು ಇದೇ ತಿಂಗಳ 21 ರಂದು ತುರುವೇಕೆರೆಗೆ ಆಗಮಿಸಲಿದ್ದಾರೆ. ವಿಜಯ ಸಂಕಲ್ಪ ಯಾತ್ರೆ ಪಟ್ಟಣದಲ್ಲಿ ನಡೆಯಲಿದ್ದು ಸುಮಾರು 25 ಸಾವಿರ ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಿ.ಎಸ್.ಪುರ ಹೋಬಳಿ ಜನತೆ ಈ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದ ಅವರು ಕಾಂಗ್ರೆಸ್ ತುರುವೇಕೆರೆಯಲ್ಲಿ ನನ್ನ ಎದುರಾಳಿ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಎರಡು ಬಣ ಕಿತ್ತಾಟ ಎಲ್ಲೆಡೆ ಕಂಡಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣ ಕಣ್ಣಿಗೆ ಕಾಣುವಂತೆ ನಡೆದಿದೆ. ಒಂದೇ ವೇದಿಕೆಯಲ್ಲಿ ಇಬ್ಬರನ್ನೂ ಮುಂದಿನ ಸಿಎಂ ಎಂದು ಹೇಳಲಾಗುತ್ತಿದೆ. ನೆನ್ನೆ 120 ಸೀಟ್ ಘೋಷಣೆ ಎಂದು ಅದರಲ್ಲಿ 35 ಕಡೆ ಇಬ್ಬರ ಹೆಸರು ಇದೆ. ಇಲ್ಲೇ ತಿಳಿಯುತ್ತೆ ಅವರ ಮುಸುಕಿನ ಗುದ್ದಾಟ. ಸ್ಪಷ್ಟ ಬಹುಮತ ಮತ್ತೊಮ್ಮೆ ಬಿಜೆಪಿಗೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಣೆಕುಪ್ಪೆಯಿಂದ ಮಾವಿನಹಳ್ಳಿ ರಸ್ತೆ, ಮಾವಿನಹಳ್ಳಿಯಿಂದ ಅಂಕಳಕೊಪ್ಪ ರಸ್ತೆ ಹಾಗೂ ಅಂಕಳಕೊಪ್ಪದಿಂದ ಗದ್ದೆಹಳ್ಳಿ ಗಡಿ ಭಾಗದ ರಸ್ತೆ ಒಟ್ಟು 24 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಶುದ್ಧ ನೀರಿನ ಘಟಕ ಲೋಕಾರ್ಪಣೆ ಗೊಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಲೋಕೇಶ್, ತಾಪಂ ಮಾಜಿ ಸದಸ್ಯ ಭಾನುಪ್ರಕಾಶ್, ಮುಖಂಡರಾದ ಬೆಳ್ಳಳ್ಳಿ ಗೋವಿಂದರಾಜ್, ನರಸೇಗೌಡ, ರಾಮಲಿಂಗೇಗೌಡ, ಚನ್ನಿಗಪ್ಪ, ಮದುವೆಮನೆ ಕುಮಾರ್, ಬಂಡಿ ಕುಮಾರ್, ದಯಾನಂದ್, ಕಿರಣ್, ಸದಾಶಿವ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!