ಗ್ರಾಮೀಣ ಜನರ ಸಮಸ್ಯೆಗೆ ಸ್ಪಂದಿಸುವ ಜಿಲ್ಲಾಧಿಕಾರಿಗಳ ನಡೆ ಕಾರ್ಯಕ್ರಮ : ಉಪ ವಿಭಾಗಾಧಿಕಾರಿ ಹೊಟೇಲ್ ಶಿವಪ್ಪ.

ಗುಬ್ಬಿ : ಗ್ರಾಮೀಣ ಭಾಗದ ಜನರು ಸಮಸ್ಯೆ ಹೊತ್ತು ತಾಲ್ಲೂಕು ಕೇಂದ್ರದ ಕಚೇರಿಗೆ ಅಲೆದಾಡುವ ಪರಿಸ್ಥಿತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಡೀ ತಾಲ್ಲೂಕು ಆಡಳಿತ ವ್ಯವಸ್ಥೆಯನ್ನು ಗ್ರಾಮೀಣ ಭಾಗದಲ್ಲಿ ಜನರ ಮನೆ ಬಾಗಿಲಿಗೆ ತಂದು ಸೂಕ್ತ ಪರಿಹಾರ ನೀಡಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ತಿಳಿಸಿದರು.

ತಾಲ್ಲೂಕಿನ ಕಸಬ ಹೋಬಳಿ ಅಮ್ಮನಘಟ್ಟ ಗ್ರಾಪಂ ವ್ಯಾಪ್ತಿಯ ಗೊಲ್ಲಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಉಳಿದು ಜನರ ಸಮಸ್ಯೆ ಆಲಿಸಲಿದ್ದಾರೆ. ಇದರ ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು.

ಮುಗ್ದ ಜನರಿಗೆ ತಮ್ಮ ಸಮಸ್ಯೆಗೆ ಯಾರ ಬಳಿ ತೆರಬೇಕು ಎಂಬ ಅರಿವು ಸಹ ಇರುವುದಿಲ್ಲ. ಅಂತಹ ಜನರ ಸಮಸ್ಯೆಯನ್ನು ಲಿಖಿತ ರೂಪದಲ್ಲಿ ಪಡೆದು ಅದಕ್ಕೆ ಸ್ಥಳದಲ್ಲೇ ಪರಿಹಾರ ನೀಡಲಾಗುತ್ತದೆ. ತಾಂತ್ರಿಕ ಸಮಸ್ಯೆ ಇದ್ದಲ್ಲಿ ಹಿಂಬರಹ ನೀಡಿ ಮತ್ತೊಂದು ಮಾರ್ಗ ಸೂಚಿಸುವ ಕೆಲಸ ಮಾಡಲಾಗುತ್ತದೆ ಎಂದ ಅವರು ಹಳ್ಳಿಗಾಡಿನಲ್ಲಿ ಸಮಸ್ಯೆಗಳ ಸರಮಾಲೆ ಇರುತ್ತದೆ. ಜೊತೆಗೆ ಹಲವು ಇಲಾಖೆಗಳ ಸೌಕರ್ಯ ಕಲ್ಪಿಸಲು ಈ ಕಾರ್ಯಕ್ರಮ ಅನುವು ಮಾಡಲಾಗುತ್ತದೆ ಎಂದರು.

ತಹಶೀಲ್ದಾರ್ ಬಿ.ಆರತಿ ಮಾತನಾಡಿ ಈ ಕಾರ್ಯಕ್ರಮ ಆಶಯದಂತೆ ತಾಲ್ಲೂಕಿನ ಕುಗ್ರಾಮಗಳನ್ನು ಗುರುತಿಸಿ ಅಲ್ಲಿನ ಜನರ ಸಮಸ್ಯೆ ಆಲಿಸಲಾಗುತ್ತದೆ. ಕಂದಾಯದ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಲಾಗುತ್ತದೆ. ಪವತಿ ಖಾತೆ, ಪಹಣಿ, ತಿದ್ದುಪಡಿ, ಸರ್ವೇ ಕಾರ್ಯ ಎಲ್ಲಾ ಅರ್ಜಿಗಳಿಗೆ ಸೂಕ್ತ ಉತ್ತರ ಸ್ಥಳದಲ್ಲೇ ನೀಡಲಾಗುತ್ತದೆ ಎಂದು ತಿಳಿಸಿ, ತಾಲ್ಲೂಕಿನ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಮಳಿಗೆ ನಿರ್ಮಿಸಿಕೊಂಡು ತಮ್ಮ ಸವಲತ್ತು, ಯೋಜನೆ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿಂದುಮಾಧವ, ಬಿಇಓ ಸೋಮಶೇಖರ್ ತಮ್ಮ ಇಲಾಖೆಯ. ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಸ್ ಎಸ್ ವೈ ಯೋಜನೆಯ ಅರ್ಹ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಿಸಲಾಯಿತು.

ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಮಮ್ತಜ್ ಬೇಗಂ, ಸದಸ್ಯರಾದ ರಮೇಶ್, ರಾಜಣ್ಣ, ಜಯಣ್ಣ, ತಾಪಂ ಯೋಜನಾಧಿಕಾರಿ ಜಗನ್ನಾಥ್ ಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವೀಣಾ, ಕಂದಾಯ ನಿರೀಕ್ಷಕ ರಮೇಶ್ ಕುಮಾರ್, ಪಿಡಿಓ ಯು.ರಾಜಣ್ಣ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!