ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಡೂಪ್ಲಿಕೇಟ್ ಕಾರ್ಡ್ : ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪ.

ಗುಬ್ಬಿ: ಭ್ರಷ್ಟಾಚಾರದಲ್ಲಿ ಖ್ಯಾತಿ ಪಡೆದ ಕಾಂಗ್ರೆಸ್ ಸರ್ಕಾರ ಈ ಹಿಂದೆ ಮಾಡಿರುವ ಅವ್ಯವಹಾರಗಳು ಜನಕ್ಕೆ ಚೆನ್ನಾಗಿಯೇ ತಿಳಿದಿದೆ. ಇಂತಹ ಸಂದರ್ಭದಲ್ಲಿ ಗ್ಯಾರೆಂಟಿ ಕಾರ್ಡ್ ಎಂಬ ಡೂಪ್ಲಿಕೇಟ್ ಕಾರ್ಡ್ ವಿತರಿಸಿದ ಕಾಂಗ್ರೆಸ್ ಪಕ್ಷ ಅಪಹಾಸ್ಯಕ್ಕೀಡಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ದೂರಿದರು.

ಪಟ್ಟಣದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಹಗಲು ಕನಸು ಎಂದೂ ಈಡೇರುವುದಿಲ್ಲ. ಅವರಲ್ಲೇ ಇರುವ ಒಡಕು ಗುಂಪುಗಾರಿಕೆ ಅವರನ್ನೇ ಪ್ರಪಾತಕ್ಕೆ ತಳ್ಳಲಿದೆ. ಇಂತಹ ದುಸ್ಥಿತಿಯಲ್ಲಿ ಸಲ್ಲದ ಆಸೆ ತೋರಿಸುವ ನಿಟ್ಟಿನಲ್ಲಿ ಗ್ಯಾರೆಂಟಿ ಕಾರ್ಡ್ ತೋರಿದ್ದಾರೆ ಎಂದು ಲೇವಡಿ ಮಾಡಿದರು.

ಪಕ್ಷದಲ್ಲಿ ಒಮ್ಮತ ಇಲ್ಲದೆ ಕಾಂಗ್ರೆಸ್ ಈಗಾಗಲೇ ಎರಡು ಬಣಗಳಾಗಿ ಗುರುತಿಸಿಕೊಂಡಿದೆ. ಡಿಕೆಶಿ ಸಿದ್ದರಾಮಯ್ಯ ಎರಡು ಹೆಸರು ಸಿಎಂ ಹುದ್ದೆಗೆ ಚಾಲ್ತಿಯಲ್ಲಿದೆ. ಒಬ್ಬರಿಗೊಬ್ಬರು ಅವರೇ ಕಾಲು ಎಳೆದುಕೊಂಡು ಈಗ ಮಹಿಳೆಯರನ್ನು ಓಲೈಸುವ ಪ್ರಯತ್ನ ಫಲ ನೀಡದು ಎಂದು ಟೀಕಿಸಿದ ಅವರು ಬಿಜೆಪಿ ನುಡಿದಂತೆ ನಡೆದು ಘೋಷಿಸಿದ ಎಲ್ಲಾ ಯೋಜನೆಗಳನ್ನು ಸಾಕಾರಗೊಳಿಸಿದೆ. ನಡೆಸಿಕೊಡಲು ಸಾಧ್ಯವಾಗುವ ಕಾರ್ಯಕ್ರಮ ಘೋಷಿಸಬೇಕು. ಸಲ್ಲದ ಆಸೆ ತೋರುವ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ನಲ್ಲಿ ಘೋಷಿಸಿದ ಯಾವುದೇ ಕಾರ್ಯಕ್ರಮ ಯಶಸ್ವಿ ಮಾಡಲಾಗದು ಎಂದು ತಿಳಿಸಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಕೃಷಿಕ ವರ್ಗ, ಜನ ಸಾಮಾನ್ಯರ ಸಮಸ್ಯೆ ಅರಿತು ರೂಪಿಸಿದ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಿದ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ನೀಡಿದ ನೀರಾವರಿ ಯೋಜನೆ ಹಾಗೂ ಹೆದ್ದಾರಿ ರಸ್ತೆ , ರೈಲ್ವೇ ಹಾಗೂ ವಿಮಾನ ನಿಲ್ದಾಣಗಳು ಸಾಕ್ಷಿಯಾಗಿದೆ. ಈ ಜೊತೆಗೆ ಸಾಮಾನ್ಯ ಜನರ ಕಷ್ಟ ಕಾರ್ಪಣ್ಯ ಆಲಿಸಿದ ಮೋದಿ ಅವರು ದೇಶವನ್ನು ಬಲಿಷ್ಠಗೊಳಿಸಿದರು. ಮುಂದುವರೆದ ದೇಶಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ ಸದೃಢ ಆರ್ಥಿಕ ವ್ಯವಸ್ಥೆ ನಮ್ಮ ದೇಶದಲ್ಲಿದೆ ಎಂದು ತಿಳಿಸಿದರು.

ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಮಾತನಾಡಿ ಎಲ್ಲಾ ವರ್ಗದ ಜನರ ಕೈ ಹಿಡಿದ ಬಿಜೆಪಿ ಸರ್ಕಾರ ಘೋಷಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಅವಧಿಯಲ್ಲೇ ಪೂರ್ಣಗೊಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಘೋಷಿಸಿರುವ ಪ್ರಣಾಳಿಕೆ ಈಡೇರಿಸುವುದು ಸತ್ಯ ಎಂಬುದು ಈಗಾಗಲೇ ರುಜುವಾತು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ.ದಿಲೀಪ್ ಕುಮಾರ್, ಪಿ.ಬಿ.ಚಂದ್ರಶೇಖರಬಾಬು, ಪಪಂ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಶಶಿಕುಮಾರ್ ಇತರರು ಇದ್ದರು.

ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.

You May Also Like

error: Content is protected !!