ಗುಬ್ಬಿ: ಕೋಮುವಾದ ಮಾಡುತ್ತಾ ಮುಸ್ಲಿಂರನ್ನು ಬೆದರಿಸುವ ಬಿಜೆಪಿ ರಾಜಕೀಯ ಮಾಡಿದರೆ, ಬಿಜೆಪಿಯನ್ನೇ ನಮಗೆ ತೋರಿಸಿ ತೋರಿಸಿ ಓಟು ಪಡೆಯುವ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೊರಟಿದೆ. ಈ ಬಾರಿ ಎಲ್ಲವೂ ತಿಳಿದ ಮುಸಲ್ಮಾನರು ಎಲ್ಲಿ ಗೌರವ ಸಿಕ್ಕಿದೆ. ಎಲ್ಲಿ ರಕ್ಷಣೆ ಇದೆ ತಿಳಿದು ಜೆಡಿಎಸ್ ಪರ ನಿಲ್ಲಲ್ಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಕುನ್ನಾಲ ಗ್ರಾಮದಲ್ಲಿ ಜೆಡಿಎಸ್ ಆಯೋಜಿಸಿದ್ದ ಅಲ್ಪ ಸಂಖ್ಯಾತರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮುಸ್ಲಿಂ ಧರ್ಮೀಯರ ಆಚಾರ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ತಿನ್ನೋ ಆಹಾರ, ಮೈಮೇಲಿನ ಬಟ್ಟೆಗೂ ಕಾನೂನು ತರುತ್ತಿದೆ. ಆದರೆ ನಮ್ಮ ಓಟು ಬ್ಯಾಂಕ್ ಮಾಡಿಕೊಂಡ ಕಾಂಗ್ರೆಸ್ ಮಾತ್ರ ತುಟಿ ಬಿಚ್ಚಲ್ಲ. ಕೇವಲ ಅಧಿಕಾರ ಲಾಲಸೆ ಅಷ್ಟೇ ಕಾಂಗ್ರೆಸ್ ನಲ್ಲಿದೆ ಎಂದು ಛೇಡಿಸಿದರು.

ಅಲ್ಪ ಸಂಖ್ಯಾತರ ಯಾವ ಮುಖಂಡರನ್ನು ಬೆಳೆಸದ ಕಾಂಗ್ರೆಸ್ ಪಕ್ಷ ನಾನು ಬಿಟ್ಟು ಬರಲು ಅದೇ ಕಾರಣ. ನಮಗೆ ದಕ್ಕೆ ಬಂದ ಸಂದರ್ಭದಲ್ಲಿ ಮಾತು ಆಡದ ಕಾಂಗ್ರೆಸ್ ಎಂ ಎಲ್ ಸಿ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದು ಕೊಳ್ಳಲಿಲ್ಲ. ಅತೀ ಹೆಚ್ಚು ಮತ ಪಡೆದ ನನ್ನನ್ನು ಬೆಳೆಸಲಿಲ್ಲ. ಇನ್ನೂ ನಾಲ್ಕು ವರ್ಷ ಇದ್ದಾಗಲೇ ಮುಖದ ಮೇಲೆ ಬಿಸಾಕಿ ಕೆಂಪುಕೋಟೆ ಬಿಟ್ಟ ನಮಗೆ ಇದ್ಯಾವ ಎಂ ಎಲ್ ಸಿ ಪಟ್ಟ ಎಂದು ಉಗಿದು ಪಕ್ಷ ಬಿಟ್ಟೆ ಎಂದ ಅವರು ಜೆಡಿಎಸ್ ವಹಿಸಿದ ಜವಾಬ್ದಾರಿಯಂತೆ ಪಕ್ಷ ಸಂಘಟನೆ ಜೊತೆ ನನ್ನ ಬಾಯಲ್ಲಿ ಬಂದ ಮಾತು ಹಿಡಿದು ಗುಬ್ಬಿ ಶಾಸಕರು ಹೊರಟಿದ್ದಾರೆ. ಪಕ್ಷದಲ್ಲಿ ಬೆಳೆದು ಪಕ್ಷ ಬಿಟ್ಟವರಿಗೆ ತಕ್ಕ ಪಾಠ ಮುಸ್ಲಿಂರೇ ತೋರಿಸುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಹೊರೆ ಹೊತ್ತ ಮಹಿಳೆ ಚಿಹ್ನೆ ಮುಂದೆ ನಾಗರಾಜು ಹೆಸರಿನ ಬಟನ್ ಒತ್ತಿ ಎಂದು ಕರೆ ನೀಡಿದರು.
ದೇವೇಗೌಡರು ಪ್ರಧಾನಿ ಆದಾಗ ಮುಸಲ್ಮಾನರಿಗೆ ಶೇಕಡಾ 4 ರಷ್ಟು ಮೀಸಲಾತಿ ಒದಗಿಸಿದ್ದರು. ಅದರ ಪರಿಣಾಮ ನಮ್ಮ ಸಮಾಜ ಮುಖ್ಯವಾಹಿನಿಗೆ ಬಂತು. ಆ ಸಮಯ ಜೊತೆಗೆ ಇದ್ದ ನಾನು ಈಗ ಅವರ ಪಕ್ಷ ಮುನ್ನೆಡೆಸುವ ಜವಾಬ್ದಾರಿ ಇದೆ. ನಾಗರಾಜು ಅವರಿಗೆ ಮತ ಹಾಕಿದರೆ ನನಗೆ ಮತ ನೀಡಿದಂತೆ ಎಂದು ಹುರಿದುಂಬಿಸಿದ ಅವರು ಗೋಮಾತೆ ಎಂದು ಹೇಳಿ ಕಾಯಿದೆ ತರುತ್ತಿರುವ ಸರ್ಕಾರ ಮೊದಲು ರೈತನ ಕಷ್ಟ ಕೇಳಬೇಕು. ಹಸು, ಎತ್ತುಗಳು ಐದು ವರ್ಷದ ಮೇಲೆ ಕೆಲಸಕ್ಕೆ ಬರುವುದಿಲ್ಲ. ಆಗ ಏನು ಮಾಡಬೇಕು. ರಾಸುಗಳು ಮಾರಂಗಿಲ್ಲ. ಸರ್ಕಾರ ಅದನ್ನು ಖರೀದಿ ಮಾಡೋದಿಲ್ಲ. ಗೋಶಾಲೆ ತೆರೆದು ಅಂತಹ ರಾಸುಗಳನ್ನು ಸಾಕಿ ನಂತರ ಕಾನೂನು ತನ್ನಿ ಎಂದು ಛೇಡಿಸಿದರು.
ಜೆಡಿಎಸ್ ಮಹಿಳಾ ಘಟಕರ ರಾಜ್ಯ ಕಾರ್ಯಾಧ್ಯಕ್ಷೆ ನಜ್ಮಾ ಮಾತನಾಡಿ ಕುಕ್ಕರ್, ಲಿಕ್ಕರ್, ಸೀರೆ ಕೊಟ್ಟರೇ ಮತ ಬರುತ್ತೆ ಎನ್ನುವ ಮನೋಭಾವ ರಾಜಕಾರಣಿಗಳಲ್ಲಿದೆ. ಎರಡು ದಿನದಲ್ಲಿ ಬ್ಲಾಸ್ಟ್ ಆಗುವ ಕುಕ್ಕರ್, ಬಣ್ಣ ಹೋಗುವ ಸೀರೆ ನಮಗೆ ಬೇಕಿಲ್ಲ. ಮಕ್ಕಳಿಗೆ ಉತ್ತಮ ಭವಿಷ್ಯ ಕೊಡುವ ಪಂಚರತ್ನ ಯೋಜನೆಯ ಕುಮಾರಣ್ಣ ಸರ್ಕಾರ ಬಂದರೆ ಮಾತ್ರ ನಮಗೆ ಉಳಿಗಾಲ ಎಂದ ಅವರು ಹಿಜಾಬ್ ಮುಂದಿಟ್ಟು ಬಿಜೆಪಿ ರಾಜಕಾರಣ ಮಾಡಿದರೆ ಏನೋ ಮಾತಾಡದ ಕಾಂಗ್ರೆಸ್ ಗೆ ಮುಸ್ಲಿಂ ಮತ ಬೇಕು ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮಾತನಾಡಿ ಗುಬ್ಬಿ ಕ್ಷೇತ್ರ ಕೃಷಿ ಮೂಲಕ ಶ್ರೀಮಂತ ಎನಿಸಿದೆ. ಆದರೆ ಅಭಿವೃದ್ದಿಯಲ್ಲಿ ಹಿಂದುಳಿದ ತಾಲ್ಲೂಕು ಎನಿಸಿದೆ. ಸುಸಜ್ಜಿತ ಆಸ್ಪತ್ರೆ ಇಲ್ಲ, ಶಾಲಾ ಕಾಲೇಜು ಇಲ್ಲ, ಬಸ್ ಸ್ಟ್ಯಾಂಡ್ ಇಲ್ಲ, ಡಿಪೋ ಇಲ್ಲ ಯಾವ ಕೆಲಸ ಮಾಡದೆ ಈಗ ಕುಕ್ಕರ್ ಹಿಡಿದು ಹೊರಟಿದ್ದಾರೆ. ಸಾಮಾನ್ಯ ರೈತನ ಮಗನಾದ ನನಗೆ ಸಾಮಾನ್ಯರ ಬದುಕು ತಿಳಿದಿದೆ. ಒಬ್ಬ ಶಾಸಕನ ಕೆಲಸ ನಾನು ತೋರಿಸ್ತೀನಿ ಆಶೀರ್ವದಿಸಿ ಎಂದ ಅವರು ಕುನ್ನಾಲ ಗ್ರಾಮದಲ್ಲಿ ಅವಶ್ಯ ಇರುವ ಒಂದು ಶಾದಿ ಮಹಲ್ ನಾನು ಕಟ್ಟಿಸಿಕೊಡಿಸಿತ್ತೇನೆ ಎಂದು ಭರವಸೆ ನೀಡಿದರು.
ಜೆಡಿಎಸ್ ನಲ್ಲಿ ಮುಸ್ಲಿಂರಿಗೆ ಗೌರವವಿದೆ. ಇದಕ್ಕೆ ಇಬ್ರಾಹಿಂ ಸಾಹೇಬರ ಜವಾಬ್ದಾರಿ ಕೆಲಸವೇ ಸಾಕ್ಷಿ. ಈ ನಿಟ್ಟಿನಲ್ಲಿ ಈ ಬಾರಿ ಮುಸಲ್ಮಾನರ ಮತ ಜೆಡಿಎಸ್ ಪರ ಬರಲಿದೆ. ಗುಬ್ಬಿಯಲ್ಲಿ ಶೇಕಡಾ 75 ರಷ್ಟು ಮುಸ್ಲಿಂ ಮತ ನಾಗರಾಜು ಪರ ಬರುವಂತೆ ಮಾಡುತ್ತೇವೆ ಎಂದು ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಶಭಿವುಲ್ಲಾ ಖಾನ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನೂರಾರು ಮಂದಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾದರು.
ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ತನ್ವೀರ್ ರೆಹಮಾನ್, ತಾಲ್ಲೂಕು ಅಧ್ಯಕ್ಷ ತೋಫಿಕ್ ಅಹಮದ್, ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಜಿ.ಡಿ.ಸುರೇಶಗೌಡ, ಸಿದ್ದಗಂಗಮ್ಮ, ಶಿವಲಿಂಗಯ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕವೀರಯ್ಯ, ಯುವ ಜೆಡಿಎಸ್ ಅಧ್ಯಕ್ಷ ಗಂಗಸಂದ್ರ ಮಂಜುನಾಥ್, ಗ್ರಾಪಂ ಸದಸ್ಯರಾದ ಆಯಿಷಾ, ನೂರ್ ಜಾನ್, ಗುರುಗಳಾದ ಸೈಯದ್ ಗಫಾರ್ ಷಾ, ಸೈಯದ್ ಲತೀಫ್, ವಹೀದಾ, ಅಲಂಸಾಬ್, ಖಲಂದರ್ ಸಾಬ್, ಸಲೀಂ ಪಾಷ, ನಾಗಸಂದ್ರ ವಿಜಯ್ ಕುಮಾರ್ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.