ಮಧುಗಿರಿ : ತಾಲೂಕಿನಲ್ಲಿ ಓ.ಎಫ್.ಸಿ. ಕೇಬಲ್ ಕಾಮಗಾರಿಗೆ ಸಂಬಂದಿಸಿದಂತೆ 5 ಲಕ್ಷ ರೂ ಬೇಡಿಕೆಯಿಟ್ಟು, ಒಂದು ಲಕ್ಷ ರೂಗಳನ್ನು ಪಡೆದಿರುವ ಶಾಸಕ ಎಂ.ವಿ.ವೀರಭದ್ರಯ್ಯನವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಿದ್ದಾಪುರ ಗ್ರಾ.ಪಂ ಮಾಜಿ ಅಧ್ಯಕ್ಷ ವೀರಣ್ಣ ಕರ್ನಾಟಕ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯನವರು ತಾಲೂಕಿನಲ್ಲಿ ಓ.ಎಫ್.ಸಿ.ಕೇಬಲ್ ಕಾಮಗಾರಿಗೆ ಯಾವುದೇ ಅಧಿಕಾರಿಗಳಿಂದ, ಸಾರ್ವಜನಿಕರಿಂದ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು 5 ಲಕ್ಷ ರೂಗಳಿಗೆ ಬೇಡಿಕೆಯಿಟ್ಟು, ಒಂದು ಲಕ್ಷ ರೂಗಳನ್ನು ಖುದ್ದಾಗಿ ಸ್ವೀಕರಿಸಿ ಹಾಗೂ ಕಾಮಗಾರಿ ನಡೆಸಲು ಯಾವುದೇ ಅಡಚಣೆ ಉಂಟಾಗದಂತೆ ಒಪ್ಪಿ 1 ಲಕ್ಷ ರೂಗಳನ್ನು ತಮ್ಮ ಕಿಸೆಯಲ್ಲಿ ಇಟ್ಟುಕೊಂಡ ಚಿತ್ರಣ ಖಾಸಗಿ ವಾಹಿನಿಯಲ್ಲಿ ಈ ಪ್ರಸಾರವಾಗಿದ್ದು, ಮಧುಗಿರಿ ಶಾಸಕರಾದ ಎಂ.ವಿ.ವೀರಭದ್ರರವರು 2018 ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು ಅದಕ್ಕೂ ಮೊದಲು ಇವರು ಒಬ್ಬ ಸರ್ಕಾರಿ ನೌಕರರಾಗಿರುತ್ತಾರೆ. ಈ ರೀತಿಯ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಅಪರಾಧವಾಗಿರುತ್ತದೆ. ಆದುದರಿಂದ ತಾವು ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿ ಕಾನೂನಿನ ಅನ್ವಯ ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ