ದೊಡ್ಡಕಾಯಪ್ಪ ದೇವಾಲಯಕ್ಕೆ ಅರ್ಚಕರಿಂದ ಬೀಗ: ಅರ್ಚಕರ ವಿರುದ್ದ ಕ್ರಮಕ್ಕೆ ತಹಶೀಲ್ದಾರ್‌ಗೆ ದೂರು

ಕೊರಟಗೆರೆ: ದೊಡ್ಡಕಾಯಪ್ಪ ದೇವಾಲಯದ ಅರ್ಚಕರ ನೇಮಕಾತಿಯ ವಿಚಾರದಲ್ಲಿ ಮುಜರಾಯಿ ಇಲಾಖೆ, ಸೇವಾಸಮಿತಿ, ಸ್ಥಳೀಯರು ಮತ್ತು ಪ್ರಸ್ತುತ ಅರ್ಚಕರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿ ಗರ್ಭಗುಡಿ ಮತ್ತು ದೇವಾಲಯಕ್ಕೆ ಜೀಗ ಜಡಿಯಲಾಗಿದೆ. ಪವಿತ್ರ ಪುಣ್ಯಕ್ಷೇತ್ರಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಭಕ್ತಾಧಿಗಳಿಗೆ ದೊಡ್ಡಕಾಯಪ್ಪನ ದರ್ಶನ ಸೀಗದೇ ನಿರಾಸೆಯಿಂದ ಹಿಂದಿರುಗುತ್ತೀರುವ ಘಟನೆ ಸೋಮವಾರ ನಡೆದಿದೆ.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮದ ಸುಪ್ರಸಿದ್ದ ಪುಣ್ಯಕ್ಷೇತ್ರ ಶ್ರೀದೊಡ್ಡಕಾಯಪ್ಪ ಸ್ವಾಮಿ ದೇವಾಲಯದಲ್ಲಿ ಇತಿಹಾಸದ ಮೊದಲ ಸಲ ದುರ್ಘಟನೆ ನಡೆದಿದೆ. ಏ.2ರ ಭಾನುವಾರ ಮಧ್ಯಾಹ್ನ ದೊಡ್ಡಕಾಯಪ್ಪ ಸ್ವಾಮಿಯ ಪೂಜೆ ಕೈಂಕರ್ಯ ನಡೆಯುತ್ತೀರುವಾಗಲೇ ಸ್ಥಳೀಯರು, ಸೇವಾಸಮಿತಿ ಮತ್ತು ಅರ್ಚಕರ ನಡುವೆ ಜಗಳವಾಗಿ ಅರ್ಚಕ ಶ್ರೀನಿವಾಸಮೂರ್ತಿ ದೇವಾಲಯಕ್ಕೆ ಬೀಗ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಕುರಂಕೋಟೆಯ ದೊಡ್ಡಕಾಯಪ್ಪ ಸ್ವಾಮಿ ದೇವಾಲಯಕ್ಕೆ ಕರ್ನಾಟಕದ ವಿವಿಧ ಕಡೆಗಳಿಂದ ಪ್ರತಿನಿತ್ಯ ಸಾವಿರಾರು ಜನ ಭಕ್ತಾಧಿಗಳು ದರ್ಶನಕ್ಕೆ ಆಗಮಿಸುವ ಮತ್ತು ದೊಡ್ಡಕಾಯಪ್ಪ ಸ್ವಾಮಿಗೆ ಹರಕೆವೊತ್ತ ೫೦ಕ್ಕೂ ಅಧಿಕ ಭಕ್ತರು ದೇವಾಲಯದಲ್ಲೇ ಉಳಿದುಕೊಂಡು ಪ್ರತಿನಿತ್ಯ ಮುಂಜಾನೇ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲು ಅಡಚಣೆ ಆಗಿದೆ. ಅರ್ಚಕರ ನೇಮಕಾತಿ ಮತ್ತು ಬೀಗ ಹಸ್ತಾಂತರದ ವಿಚಾರದಲ್ಲಿ ಮುಜರಾಯಿ ಇಲಾಖೆಯ ವೈಫಲ್ಯದಿಂದ ಈಗ ಭಕ್ತರಿಗೆ ಸಮಸ್ಯೆ ಸೃಷ್ಟಿಯಾಗಿದ್ದು ತಕ್ಷಣ ಜಿಲ್ಲಾಧಿಕಾರಿ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಅರ್ಚಕನ ವಿರುದ್ದ ತಹಶೀಲ್ದಾರ್‌ಗೆ ದೂರು..

ದೊಡ್ಡಕಾಯಪ್ಪ ದೇವಾಲಯದ ಅರ್ಚಕ ಶ್ರೀನಿವಾಸಮೂರ್ತಿ ಗರ್ಭದ ಗುಡಿ ಮತ್ತು ದೇವಾಲಯಕ್ಕೆ ಏಕಾಏಕಿ ವಿನಾಕಾರಣ ಬೀಗ ಜಡಿದು ಭಕ್ತರಿಗೆ ಸಮಸ್ಯೆಯನ್ನ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಕೊರಟಗೆರೆ ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆಗೆ ಆಂಜನೇಯ ಸೇವಾಸಮಿತಿ ಮತ್ತು ಕುರಂಕೋಟೆ ಗ್ರಾಮಸ್ಥರು ನೀಡಿದ ದೂರಿನ ಅನ್ವಯ ಕೊರಟಗೆರೆ ತಹಶೀಲ್ದಾರ್ ಕ್ರಮಕ್ಕಾಗಿ ಮಧುಗಿರಿ ಎಸಿ ಮತ್ತು ತುಮಕೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ನಮ್ಮ ಹಿರಿಯರ ಸಲಹೆಯಂತೆ 2ಜನ ಅರ್ಚಕರಿಗೆ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಅರ್ಚಕ ಶ್ರೀನಿವಾಸಮೂರ್ತಿ ಏಕಪಕ್ಷಿಯವಾಗಿ ಗರ್ಭಗುಡಿ ಮತ್ತು ದೇವಾಲಯಕ್ಕೆ ಬೀಗ ಹಾಕಿದ್ದಾರೆ. ಇತಿಹಾಸದ ಮೊದಲ ಸಲ ದೇವಾಲಯಕ್ಕೆ ಬೀಗ ಹಾಕಿದ್ದು ನಮ್ಮೂರಿಗೆ ಕಪ್ಪುಚುಕ್ಕೆಯಾಯ್ತು. ಮುಜರಾಯಿ ಇಲಾಖೆ ಅರ್ಚಕನ ವಿರುದ್ದ ಕ್ರಮ ಕೈಗೊಂಡು ಭಕ್ತರಿಗೆ ಅನುಕೂಲ ಕಲ್ಪಿಸಬೇಕಿದೆ.

ಸಿದ್ದರಾಜು. ಅಧ್ಯಕ್ಷ. ಆಂಜನೇಯ ಸೇವಾ ಸಮಿತಿ. ಕುರಂಕೋಟೆ

ತಹಶೀಲ್ದಾರ್ ಆದೇಶವಿದ್ರು 2022ರಲ್ಲಿ ನನಗೇ ಅಧಿಕೃತವಾಗಿ ಬೀಗ ಹಸ್ತಾಂತರ ಮಾಡಿಲ್ಲ. ಮುಜರಾಯಿ ಇಲಾಖೆ ಈಗ ನೊಟೀಸ್ ನೀಡಿದರೇ ತಕ್ಷಣ ದೇವಾಲಯದ ಕೀ ಹಸ್ತಾಂತರ ಮಾಡ್ತೇನೆ. ಅರ್ಚಕರ ನೇಮಕಾತಿ ವಿಚಾರದಲ್ಲಿ ನಾಲ್ಕೈದು ಜನ ಸ್ಥಳೀಯರಿಂದ ಭಾನುವಾರ ನನ್ನ ಮೇಲೆ ಹಲ್ಲೇ ನಡೆದಿದೆ. ತುಮಕೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಹಶೀಲ್ದಾರ್‌ಗೆ ದೂರು ನೀಡಿದ್ದೇನೆ.

ಶ್ರೀನಿವಾಸಮೂರ್ತಿ. ಅರ್ಚಕ. ದೊಡ್ಡಕಾಯಪ್ಪ ದೇವಾಲಯ. ಕುರಂಕೋಟೆ.

ಮುಜರಾಯಿ ಇಲಾಖೆ ಅನುಮತಿ ಪಡೆಯದೇ ಅರ್ಚಕ ಶ್ರೀನಿವಾಸಮೂರ್ತಿ ಏಕಾಏಕಿ ದೇವಾಲಯದ ಖಾಸಗಿ ಬೀಗ ಹಾಕಿರುವುದೇ ಕಾನೂನು ಬಾಹಿರ. ದೊಡ್ಡಕಾಯಪ್ಪ ದೇವಾಲಯದ ಅರ್ಚಕರಿಗೆ ಈಗಾಗಲೇ ನೊಟೀಸ್ ಜಾರಿಮಾಡಿ ಬೀಗ ತೆಗೆಯಲು ಮಧುಗಿರಿ ಎಸಿಗೆ ಪತ್ರ ಬರೆದಿದ್ದೇನೆ. ಕುರಂಕೋಟೆ ದೇವಾಲಯಕ್ಕೆ ವಿಶೇಷ ಪೊಲೀಸ್ ಬಂದೋಬಸ್ತ್ ನೀಡಲು ಸೂಚಿಸಿದ್ದೇನೆ.

ಮುನಿಸ್ವಾಮಿರೆಡ್ಡಿ. ತಹಶೀಲ್ದಾರ್. ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!