ಎಸ್ಸಿ ಎಸ್ಟಿ ಮೀಸಲಾತಿ ಬದಲಿಸಲು ಕಾಂಗ್ರೆಸ್ ಚಿಂತಿಸಿದ್ದಲ್ಲಿ ಕ್ರಾಂತಿ ನಡೆಸಲು ಬಿಜೆಪಿ ಸಿದ್ದ : ಸಿಎಂ ಬಸವರಾಜು ಬೊಮ್ಮಾಯಿ

ಗುಬ್ಬಿ: ದಲಿತ ಪರ ನಿಂತ ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಮುಂದಿನ ಭವಿಷ್ಯಕ್ಕೆ ಅನುವು ಮಾಡಿದೆ. ಆದರೆ ಸಹಿಸದ ಕಾಂಗ್ರೆಸ್ ಮೀಸಲಾತಿ ಬದಲಿಸುವ ಆಲೋಚನೆಯಲ್ಲಿದೆ. ಸಲ್ಲದ ರಾಜಕಾರಣ ಮಾಡಿದಲ್ಲಿ ದೊಡ್ಡ ಮಟ್ಟದ ಕ್ರಾಂತಿ ನಡೆಯಲಿದೆ ಎಂದು ಸಿಎಂ ಬಸವರಾಜು ಬೊಮ್ಮಾಯಿ ಎಚ್ಚರಿಸಿದರು.

ಪಟ್ಟಣದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಹಿನ್ನಲೆ ಒಂದು ಕಿಮೀ ಸಾವಿರಾರು ಬೈಕ್ ಮೆರವಣಿಗೆ ಜೊತೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಬಸ್ ನಿಲ್ದಾಣದ ಬಳಿ ಮಾತನಾಡಿದ ಅವರು ಎಂದಿಗೂ ದೀನ ದಲಿತರ ಪರ ಬಿಜೆಪಿ ಕೆಲಸ ಮಾಡಿದೆ. ಕೇವಲ ಓಟ್ ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ ಮೀಸಲಾತಿ ಬಗ್ಗೆ ಈವರೆವಿಗೂ ಮಾತನಾಡದೆ ಅಹಿಂದ ಪರ ಎನ್ನುವ ನಾಟಕವಾಡುತ್ತಾ ಚುನಾವಣೆಗೆ ಮುಂದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮತ ನೀಡಬಾರದು ಎಂದರು.

ಡಬ್ಬಲ್ ಇಂಜಿನ್ ಬಿಜೆಪಿ ಸರ್ಕಾರ ನೀಡಿದ ಕೊಡುಗೆ ಅಪಾರ. ಈ ಪೈಕಿ ಪ್ರಧಾನ ಮಂತ್ರಿಗಳ ಕಿಸಾನ್ ಸನ್ಮಾನ್ ಮೂಲಕ ನೀಡಿದ ಪ್ರೋತ್ಸಾಹಧನ ಈ ಗುಬ್ಬಿ ಕ್ಷೇತ್ರದಲ್ಲಿ ಸುಮಾರು 50 ಸಾವಿರ ರೈತರಿಗೆ ತಲುಪಿದೆ. ರೈತ ಮಕ್ಕಳ ವಿದ್ಯಾರ್ಥಿ ನಿಧಿ ಯೋಜನೆಯ ಫಲ ಈ ತಾಲ್ಲೂಕಿನಲ್ಲಿ ಮೂರು ಸಾವಿರ ಮಕ್ಕಳಿಗೆ ತಲುಪಿದೆ ಎಂದ ಅವರು ಕೇವಲ ಮತ ಗಳಿಕೆಗೆ ಸಲ್ಲದ ಭರವಸೆ ನೀಡುವ ಕಾಂಗ್ರೆಸ್ ಜೆಡಿಎಸ್ ಬಿಟ್ಟು ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಕಾಯಕ ಯೋಗಿ ಮೂಲಕ ಗುಣಮಟ್ಟದ ಕೃಷಿಗೆ ಅನುವು ಮಾಡಿದ್ದೇವೆ. ಆಯುಷ್ಮನ್ ಕಾರ್ಡ್ ಆರೋಗ್ಯ ಸಲುವಾಗಿ ನೀಡಿದ್ದು, ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ಕೋಟಿ ಲೆಕ್ಕದಲ್ಲಿ ಮನೆಯನ್ನು ಬಡವರಿಗೆ ನೀಡಲಾಗಿದೆ ಎಂದ ಅವರು ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ದುಡಿದ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಆಲೋಚನೆಯೂ ಜನಪರ ಇದೆ. ಇದೇ ಕಾರಣಕ್ಕೆ ಈ ಬಾರಿ ರಾಜ್ಯದಲ್ಲಿ 130 ಕ್ಕೂ ಅಧಿಕ ಸ್ಥಾನ ಗೆದ್ದು ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಈ ನಿಟ್ಟಿನಲ್ಲಿ ಗುಬ್ಬಿಯಲ್ಲಿ ಅತ್ಯಧಿಕ ಮತಗಳನ್ನು ನೀಡಿ ದಿಲೀಪ್ ಕುಮಾರ್ ಅವರನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಗುಬ್ಬಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಹದಗೆಟ್ಟ ರಸ್ತೆಗಳು ಸರಿ ಪಡಿಸುವುದು, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡುವ ಕೆಲಸ ಮಾಡುತ್ತೇನೆ. ನೆನೆಗುದಿಗೆ ಬಿದ್ದ ಹೇಮಾವತಿ ಹರಿಸುವ ಯೋಜನೆಗಳು ಪೂರ್ಣಗೊಳಿಸಲು ಬದ್ದನಾಗಿರುತ್ತೇನೆ. ನನಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಸಂಸದ ಜಿ.ಎಸ್.ಬಸವರಾಜು, ಉಸ್ತುವಾರಿ ಸಂಜಯ್ ಭಾಟಿಯಾ, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ಚಂದ್ರಶೇಖರಬಾಬು, ಜಿ.ಚಂದ್ರಶೇಖರ್, ಪಪಂ ಅಧ್ಯಕ್ಷ ಅಣ್ಣಪ್ಪಸ್ವಾಮಿ ಇತರರು ಇದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!