ಗುಬ್ಬಿ: ತಾಲ್ಲೂಕಿನಲ್ಲಿ ಹೇಮಾವತಿ ನೀರು ಹರಿಸುವ ಹಲವು ಯೋಜನೆಗಳ ಪೈಕಿ ಬಹು ಮುಖ್ಯವಾದ ಹಾಗಲವಾಡಿ ಕೆರೆ, ಮಠ ಗಂಗಯ್ಯನಪಾಳ್ಯ ಕೆರೆ ಹಾಗೂ ಬಿಕ್ಕೇಗುಡ್ಡ ನೀರಾವರಿ ಯೋಜನೆಗೆ ಚಾಲನೆ ನೀಡುವುದು ನನ್ನ ಮೊದಲ ಆದ್ಯತೆಯಾಗಿದೆ. ಈ ಜೊತೆಗೆ ಇನ್ನೂ ಹೇಮಾವತಿ ನೀರು ಕಾಣದ ಕೆರೆಗಳಿಗೆ ಸೂಕ್ತ ನಾಲಾ ವ್ಯವಸ್ಥೆ ಮಾಡುವ ಜೊತೆಗೆ ಕೃಷಿ ಬಳಕೆಗೆ ಪ್ರಾಶಸ್ತ್ಯ ನೀಡುವ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಭರವಸೆ ನೀಡಿದರು.
ತಾಲ್ಲೂಕಿನ ಜಿ.ಹೊಸಹಳ್ಳಿ ಹಾಗೂ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮದಲ್ಲಿ ಜೆಡಿಎಸ್ ಪರ ಮತಯಾಚನೆ ಹಾಗೂ ರೋಡ್ ಶೋ ಮಾಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಅಭಿವೃದ್ದಿ ಎಂಬುದು ಮರೀಚಿಕೆಯಾಗಿದೆ. ಮೂಲ ಸವಲತ್ತುಗಳನ್ನು ಒದಗಿಸುವಲ್ಲಿ ಸಹ ವಿಫಲರಾಗಿದ್ದಾರೆ. ಶಾಸಕರ ಕೆಲಸ ಏನೋ ಎಂಬುದು ನಾನು ತೋರಿಸುತ್ತೇನೆ. ನನಗೆ ಹೆಚ್ಚು ಮತಗಳನ್ನು ನೀಡಿ ಆಶೀರ್ವದಿಸಿ ನಂತರ ನನ್ನ ಕೆಲಸವನ್ನು ನೀವೇ ಖುದ್ದು ಪರಿಶೀಲಿಸಿ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಡಳಿತ ಜನ ಮೆಚ್ಚುಗೆ ಗಳಿಸಿದೆ. ಜೆಡಿಎಸ್ ಪ್ರಾದೇಶಿಕ ಪಕ್ಷ ಎಂದಿಗೂ ಬಡವರ ಪರ ನಿಂತಿದೆ. ಕುಮಾರಣ್ಣ ನೀಡಿದ ಭರವಸೆಯನ್ನು ಯಥಾವತ್ತಾಗಿ ಈಡೇರಿಸಿದ್ದಾರೆ. ಸಾಲ ಮನ್ನಾ ಅಂತಹ ದೊಡ್ಡ ಕಾರ್ಯಕ್ರಮ ಅನುಷ್ಠಾನಕ್ಕೆ ತಂದು 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ಇದರ ಫಲ ತಾಲ್ಲೂಕಿನಲ್ಲಿ 16 ಸಾವಿರ ರೈತರು ಅನುಭವಿಸಿದ್ದಾರೆ. ಈ ಬಾರಿ ಮಹಿಳಾ ಸಂಘಗಳ ಸಾಲ ಮನ್ನಾ ಕೂಡಾ ಕೊಟ್ಟ ಮಾತಿನಂತೆ ಈಡೇರಿಸುವರು ಎಂದ ಅವರು ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಬೇಕಿದೆ. ಈ ಹಿನ್ನಲೆ 123 ಮಿಷನ್ ಯೋಜನೆ ಸಾಕಾರಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಅವರ ಕಷ್ಟಕ್ಕೆ ತಕ್ಕ ಫಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಗ್ರಾಮೀಣ ಭಾಗದ ರೈತರ ಸಮಸ್ಯೆ ಅರಿತ ಏಕೈಕ ಸಿಎಂ ಅಭ್ಯರ್ಥಿ ಕುಮಾರಸ್ವಾಮಿ ಅವರ ಕನಸು ಸಾಕಾರಕ್ಕೆ ರೈತರೇ ಜೆಡಿಎಸ್ ಪರ ನಿಲ್ಲಬೇಕು. ಕೃಷಿ ಪೂರಕ ಕಾರ್ಯಕ್ರಮಗಳನ್ನು ಸಾಲು ಸಾಲು ಘೋಷಿಸಿ ರೈತರ ಪರ ಜೆಡಿಎಸ್ ಎಂಬುದು ರುಜುವಾತು ಮಾಡಿದ್ದಾರೆ. ಸಾಲ ಮನ್ನಾದಂತಹ ಕಾರ್ಯಕ್ರಮ ದೇಶದಲ್ಲೇ ಅತ್ಯುತ್ತಮ ಎನಿಸಿದೆ. ಯಾವುದೇ ರಾಜ್ಯ ಮಾಡದ ಕೆಲಸ ಮಾಡಿದ್ದು ಕುಮಾರಣ್ಣ ಅವರ ಜೆಡಿಎಸ್ ಸರ್ಕಾರ. ಈ ಹಿನ್ನಲೆ ಗ್ರಾಮೀಣ ಜನರು ಜೆಡಿಎಸ್ ಕೈ ಹಿಡಿದು ನಾಗರಾಜು ಅವರ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಆಯೋಗ ಮಾಜಿ ಸದಸ್ಯ ಯೋಗಾನಂದ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕವೀರಯ್ಯ, ಮುಖಂಡ ಪಂಚಣ್ಣ, ತೋರೆಹಳ್ಳಿ ರಾಜಣ್ಣ, ಗಂಗಾಧರ್ ಇತರರು ಇದ್ದರು.