ಗುಬ್ಬಿ: ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿ 10 ಮಂದಿ ಅಭ್ಯರ್ಥಿಗಳಿದ್ದರೂ ಪ್ರಮುಖ ಮೂರೂ ಪಕ್ಷದಲ್ಲಿ ಕೋಟ್ಯಾಧಿಪತಿಗಳೇ ಅಭ್ಯರ್ಥಿಯಾಗಿರುವುದು ವಿಶೇಷ ಎನಿಸಿದೆ.
ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಗಿದು ಕೊನೆಗೆ ಗುಬ್ಬಿ ಕ್ಷೇತ್ರದ ಕಣದಲ್ಲಿ ಎಸ್.ಡಿ.ದಿಲೀಪ್ ಕುಮಾರ್(ಬಿಜೆಪಿ), ಬಿ.ಎಸ್.ನಾಗರಾಜು(ಜೆಡಿಎಸ್), ಎಸ್.ಆರ್.ಶ್ರೀನಿವಾಸ್ (ಕಾಂಗ್ರೆಸ್), ಬಿ.ಎಸ್.ಪ್ರಭುಸ್ವಾಮಿ(ಎ ಎ ಪಿ), ಶಿವಣ್ಣ(ಬಹುಜನ ಪಾರ್ಟಿ), ಪ್ರವೀಣ್.ಎಸ್.ಆರ್.(ಕೆ ಆರ್ ಎಸ್), ಎಚ್.ಎಚ್.ಗಿರಿಯಪ್ಪ(ಪಕ್ಷೇತರ), ಡಾ.ಭಾವನ ಆರ್.ಗಿರಿಧರ್(ಪಕ್ಷೇತರ), ವೀರೇಶ್ ಪ್ರಸಾದ್.ಆರ್.(ಪಕ್ಷೇತರ), ಶ್ರೀನಿವಾಸ್.ಟಿ.ವಿ.(ಪಕ್ಷೇತರ)
ಒಟ್ಟು ಹತ್ತು ಮಂದಿ ಕಣದಲ್ಲಿ ಉಳಿದ ಕಲಿಗಳಾಗಿದ್ದಾರೆ.
ಸ್ವಯಂ ಆಸ್ತಿ ಘೋಷಣೆ ಮಾಡಿಕೊಳ್ಳುವ ಈ ಚುನಾವಣೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಅತ್ಯಧಿಕ 88.98 ಕೋಟಿ ರೂಗಳನ್ನು ತನ್ನ ಕುಟುಂಬದ ಆಸ್ತಿ ಎಂದು ಘೋಷಿಸಿಕೊಂಡಿದ್ದಾರೆ.
ಬಿಜೆಪಿಯ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ 43.76 ಕೋಟಿ ರೂಗಳ ಕುಟುಂಬ ಆಸ್ತಿ ವಿವರಿಸಿದ್ದಾರೆ. ನಾಲ್ಕು ಬಾರಿ ಶಾಸಕರಾದ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ 20.94 ಕೋಟಿಗಳ ಕುಟುಂಬ ಆಸ್ತಿ ಘೋಷಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರ ಚರಾಸ್ತಿ 37.99 ಕೋಟಿ, ಸ್ಥಿರಾಸ್ತಿ 32.51 ಕೋಟಿ ರೂಗಳಲ್ಲಿ ಅಭ್ಯರ್ಥಿ ಹೆಸರಲ್ಲಿ 70.51 ಕೋಟಿ, ಪತ್ನಿ ಗಾಯತ್ರಿದೇವಿ ಹೆಸರಲ್ಲಿ 18.47 ಕೋಟಿ ಘೋಷಿಸಿಕೊಂಡಿದ್ದು ಒಟ್ಟು ಸಾಲ 26.83 ಕೋಟಿ ಆಗಿದೆ. ಎರಡನೇ ಅತ್ಯಧಿಕ ಘೋಷಣೆ ಮಾಡಿಕೊಂಡ ಬಿಜೆಪಿ ಅಭ್ಯರ್ಥಿ ದಿಲೀಪ್ ಕುಮಾರ್ ಅವರ ಆಸ್ತಿಯಲ್ಲಿ ಚರಾಸ್ತಿ 6.26 ಕೋಟಿ, ಸ್ಥಿರಾಸ್ತಿ 14.71 ಕೋಟಿ ರೂಗಳಿದ್ದು ಅಭ್ಯರ್ಥಿ ಹೆಸರಲ್ಲಿ 20.98 ಕೋಟಿ, ಪತ್ನಿ ಶಿಲ್ಪಾ ಅವರ ಹೆಸರಲ್ಲಿ 22 ಕೋಟಿಗಳಿದ್ದು ಒಟ್ಟು ಸಾಲ 12.13 ಕೋಟಿ ಘೋಷಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ ಅವರ ಚರಾಸ್ತಿ 3.75 ಕೋಟಿ, ಸ್ಥಿರಾಸ್ತಿ 7.64 ಕೋಟಿ ರೂಗಳಾಗಿದೆ. ಅಭ್ಯರ್ಥಿ ಹೆಸರಲ್ಲಿ 11.39 ಕೋಟಿ, ಪತ್ನಿ ಭಾರತಿ ಶ್ರೀನಿವಾಸ್ ಅವರ ಹೆಸರಲ್ಲಿ 5.38 ಕೋಟಿ ಹಾಗೂ ಮಕ್ಕಳ ಹೆಸರಲ್ಲಿ 3.60 ಲಕ್ಷ ಇದ್ದು, ಒಟ್ಟು ಸಾಲ 5.99 ಕೋಟಿ ಎಂದು ಘೋಷಿಸಿದ್ದಾರೆ.