ಗುಬ್ಬಿ: ಸಂವಿಧಾನ ಬದಲಿಸುವ ಮಾತುಗಳಾಡಿದ ಮನುವಾದಿ ಪಕ್ಷ ಬಿಜೆಪಿಗೆ ಇಡೀ ರಾಜ್ಯದಲ್ಲಿ ದಲಿತರು ವಿರೋಧಿಸುತ್ತಾರೆ. ಈ ನಿಟ್ಟಿನಲ್ಲಿ 28 ಜಿಲ್ಲೆಯ ದಸಂಸ ಸಂಚಾಲಕರ ಸಭೆ ನಡೆಸಿ ರಾಜ್ಯ ಸಮಿತಿ ನಿರ್ಧರಿಸಿ ಬಿಜೆಪಿ ಸೋಲಿಸುವ ಶಕ್ತಿ ಇರುವ ಯಾವುದೇ ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ತಿಳಿಸಿದರು.
ಪಟ್ಟಣದ ಎಸ್ ಎಲ್ ವಿ ಕಂಫರ್ಟ್ ನಲ್ಲಿ ಆಯೋಜಿಸಿದ್ದ ದಸಂಸ ತಾಲ್ಲೂಕು ಘಟಕದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಸೋಲಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಹಾಗಾಗಿ ಕಾಂಗ್ರೆಸಿಗೆ ನಮ್ಮ ಬೆಂಬಲ ನಿರ್ಧರಿಸಿದ್ದೇವೆ ಎಂದರು.
ನಮ್ಮ ಸಮಿತಿಯ ಪ್ರಮುಖ ಹೋರಾಟಗಾರರನ್ನು ಕರೆದು ಕ್ಷೇತ್ರದ ವಿಚಾರ ನಿರ್ಧರಿಸಿ ಬಿಜೆಪಿ ಸೋಲಿಸುವ ಶಕ್ತಿ ಇರುವ ಕಾಂಗ್ರೆಸ್ ಅಥವಾ ಜೆಡಿಎಸ್ ಇಲ್ಲವೇ ಮತ್ಯಾವ ಪಕ್ಷದ ಅಭ್ಯರ್ಥಿಗೆ ಇದ್ದರೂ ನಮ್ಮ ಬೆಂಬಲ ಸಿಗಲಿದೆ. ಇದೇ ರೀತಿ ನಮ್ಮ ತಾಲ್ಲೂಕು ಘಟಕ ಸರ್ವೇ ಮೂಲಕ ತಿಳಿದು ಕಾಂಗ್ರೆಸ್ ಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದ ಅವರು ಮನು ಸಂಸ್ಕೃತಿ ಮೂಲಕ ಧರ್ಮ ಜಾತಿಗಳ ನಡುವೆ ಕಂದಕ ಸೃಷ್ಟಿಸಿದ ಬಿಜೆಪಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದೆ. ಚುನಾವಣೆ ಹಿನ್ನಲೆ ಮೀಸಲಾತಿ ನೀಡುವ ನಾಟಕವಾಡಿದೆ. ನಮ್ಮ ಹೋರಾಟ ಸದಾಶಿವ ಆಯೋಗ ವರದಿ ಯಥಾವತ್ತಾಗಿ ಜಾರಿಗೆ ನಡೆದಿದೆ. ಆದರೆ ಇಲ್ಲಿ ಬಿಜೆಪಿ ತಮ್ಮ ಚುನಾವಣೆಯಲ್ಲಿ ಗೆಲುವು ಸಾಧಿಸಲು ಲೆಕ್ಕಾಚಾರ ಮಾಡಿದೆ. ಇದೆಲ್ಲಾ ನಾಟಕಕ್ಕೆ ದಲಿತರು ಮಾರು ಹೋಗುವುದಿಲ್ಲ. ನಮ್ಮ ಸಮಿತಿ ಎಲ್ಲಾ ಕ್ಷೇತ್ರದಲ್ಲೂ ವ್ಯವಸ್ಥಿತವಾಗಿ ಪ್ರಚಾರ ನಡೆಸಲಿದೆ ಎಂದರು.
ಕೋಮು ದಳ್ಳುರಿ ಹಚ್ಚುವ ಬಿಜೆಪಿ ಸಾಮಾಜಿಕ ನ್ಯಾಯವನ್ನು ಕಿತ್ತು ಕೊಂಡಿದೆ. ಸರ್ವ ಜನಾಂಗಕ್ಕೂ ಅಗತ್ಯ ಸಂವಿಧಾನ ಬದಲಾವಣೆ ಮಾಡಲು ಬಿಜೆಪಿ ಆಲೋಚಿಸಿದೆ. ಇಂತಹ ಪಕ್ಷಕ್ಕೆ ನಮ್ಮ ಸಮಿತಿ ಬೆಂಬಲ ನೀಡುವುದಿಲ್ಲ. ಈ ನಡುವೆ ಬಿಜೆಪಿಗೆ ಬೆಂಬಲ ನೀಡಿದ ಬಗ್ಗೆ ಗುಬ್ಬಿ ಕ್ಷೇತ್ರದಲ್ಲಿ ತಿಳಿದು ಬಂದಿದೆ. 22 ಮಂದಿ ಸಮಿತಿಯಲ್ಲಿ ಇಬ್ಬರು ಮಾತ್ರ ಬಿಜೆಪಿಯತ್ತ ಹೋಗಿದ್ದಾರೆ. ಅಂತಹವರನ್ನು ಅಮಾನತು ಮಾಡುತ್ತೇವೆ ಎಂದ ಅವರು ಪ್ರಸ್ತುತ ಚುನಾವಣೆಯಲ್ಲಿ ದಸಂಸ ಯಾವುದೇ ಪಕ್ಷಕ್ಕೆ ಬೆಂಬಲ ನೀಡದೇ ಬಿಜೆಪಿ ಹಠಾವೋ ದೇಶ್ ಬಚಾವೋ ಎಂಬ ಘೋಷಣೆ ಮಾಡಿ ಬಿಜೆಪಿ ಸರ್ಕಾರ ತೆಗೆಯಲು ನಿರ್ಧರಿಸಿದ್ದೇವೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ನಮ್ಮ ಸಂಘಟನೆ ಇದೇ ಕೆಲಸ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ತುಮಕೂರಿನ ಜಾಗೃತ ಮತದಾರರ ಬಳಗ ಮತ ವಚನ ಎಂಬ ಕರಪತ್ರ ಹೊರಡಿಸಿ ಸಾಮಾಜಿಕ ನ್ಯಾಯಕ್ಕೆ ನಮ್ಮ ಮತ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ರಂಗಧಾಮು, ಡಾ.ಬಸವರಾಜು, ನಟರಾಜಪ್ಪ, ಮಾರುತಿ ಪ್ರಸಾದ್, ವಿರೂಪಾಕ್ಷ, ಮುರುಳಿ, ಕೊಡಿಯಾಲ ಮಹದೇವು, ಚೇಳೂರು ಶಿವನಂಜಪ್ಪ, ದೊಡ್ಡಯ್ಯ ಇತರರು ಇದ್ದರು.