ಕೋಮು ಸೌಹಾರ್ದ ಕದಡುವ ಬಿಜೆಪಿ ಸೋಲಿಸಲು ಸಿದ್ದವಾಗಿ : ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಕರೆ

ಗುಬ್ಬಿ: ನಾಲ್ಕು ಬಾರಿ ನಿರಂತರ ಶಾಸಕರಾಗಿ ಗುಬ್ಬಿ ಕ್ಷೇತ್ರದಲ್ಲಿ ವಾಸಣ್ಣ ಎಂದೇ ಹೆಸರುವಾಸಿಯಾಗಿರುವ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಸದ್ಯ ಗುಬ್ಬಿಯಲ್ಲಿ ಬಿಜೆಪಿ ಪ್ರತಿಸ್ಪರ್ಧಿ ಎನಿಸಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ವಾಸಣ್ಣ ಅವರನ್ನು ಗೆಲ್ಲಿಸಿ ಮರಳಿ ಕಾಂಗ್ರೆಸ್ ಸರ್ಕಾರ ಬರಲಿದೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ವಿಶ್ವಾಸ ವ್ಯಕ್ತಪಡಿಸಿದರು.

ಗುಬ್ಬಿ ತಾಲ್ಲೂಕು ಕುನ್ನಾಲ ಗ್ರಾಮದಲ್ಲಿ ರೋಡ್ ಶೋ ಮೂಲಕ ಕಾಂಗ್ರೆಸ್ ಪ್ರಚಾರ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಸಚಿವನಾಗಿ ರಾಜ್ಯದ ಪ್ರತಿ ತಾಲ್ಲೂಕು ತಲುಪಿ ಅಭಿವೃದ್ದಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಮುಸ್ಲಿಂ ಸಮಾಜವನ್ನು ಟಾರ್ಗೆಟ್ ಮಾಡಿ ಸಲ್ಲದ ಧಾರ್ಮಿಕ ಕಾಯಿದೆ ಹೇರುವ ಕೆಲಸ ಮಾಡುವ ಬಿಜೆಪಿ ಕೋಮು ಸೌಹಾರ್ದ ಕದಡುತ್ತಿದೆ. ಹಲಾಲ್ ಕಟ್, ಹಿಜಾಬ್, ಜೊತೆಗೆ ಲೌಡ್ ಸ್ಪೀಕರ್ ಹೀಗೆ ಅನೇಕ ವಿಚಾರ ಮುಂದಿಟ್ಟು ನಮ್ಮಲ್ಲೇ ಒಡಕು ತಂದಿದ್ದಾರೆ. ಇಂತಹ ರಾಜಕಾರಣ ಮಾಡುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಜೆಡಿಎಸ್ ಈಗಾಗಲೇ ಕುಗ್ಗುತ್ತಿದೆ. ಗುಬ್ಬಿಯಲ್ಲಿ ನಾಲ್ಕು ಬಾರಿ ಗೆದ್ದು ಭದ್ರಕೋಟೆ ರಚಿಸಿದ್ದ ವಾಸಣ್ಣ ಅವರನ್ನು ಹೊರಗಿಟ್ಟ ಜೆಡಿಎಸ್ ಗುಬ್ಬಿಯಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಇಲ್ಲಿ ಪ್ರತಿಸ್ಪರ್ಧಿ ಎನಿಸಿದೆ ಎಂದರು.

ಜೆಡಿಎಸ್ ನಿಂದ ವಾಸಣ್ಣ ಅಲ್ಲ. ವಾಸಣ್ಣನಿಂದ ಜೆಡಿಎಸ್ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಸುಮಾರು 30 ಸಾವಿರ ಮತಗಳ ಅಂತರ ಗೆಲುವು ಸಾಧಿಸಲಿದ್ದಾರೆ. ಜೆಡಿಎಸ್ ನಲ್ಲಿ ಇಬ್ರಾಹಿಂ ಕೇವಲ ಪ್ಲೇ ಕಾರ್ಡ್ ಜೋಕರ್ ಇದ್ದಂತೆ. ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವ್ಯಂಗ್ಯವಾಡಿದರು.

ಸ್ಟಾರ್ ಪ್ರಚಾರಕರು, ರಾಷ್ಟ್ರೀಯ ನಾಯಕರನ್ನು ಮುಂದಿಟ್ಟು ಮತಯಾಚನೆ ಮಾಡುವ ಬಿಜೆಪಿ ಹೇಳಿಕೊಳ್ಳಲು ಸಾಧನೆ ಮಾಡಿಲ್ಲ. ಮೋದಿ ಮುಂದಿಟ್ಟು ಮತ ಕೇಳುವ ಬಿಜೆಪಿ ಗುಬ್ಬಿಗೆ ಅಮಿತ್ ಷಾ ಕರೆಸುತ್ತಿದೆ. ಆದರೆ ಕಾಂಗ್ರೆಸ್ ಈ ಹಿಂದೆ ಮಾಡಿದ ಸಾಧನೆ ಕೈ ಹಿಡಿಯಲಿದೆ. ಸಿದ್ದರಾಮಯ್ಯ ಅವರ ಸರ್ಕಾರ ನೀಡಿದ 65 ಅಂಶದ ಕಾರ್ಯಕ್ರಮ ಅನುಷ್ಠಾನ ಇಂದಿಗೂ ಪ್ರಸಿದ್ದಿಯಾಗಿದೆ ಎಂದ ಅವರು ರಾಜ್ಯದಲ್ಲಿ 160 ಸ್ಥಾನ ಕಾಂಗ್ರೆಸ್ ಗೆದ್ದರೂ ಅಚ್ಚರಿ ಪಡುವಂತಿಲ್ಲ. ಇಂತಹ ಸಂದರ್ಭದಲ್ಲಿ ಹಿರಿಯ ಮುಖಂಡ ಷಫಿ ಅಹಮದ್ ಪಕ್ಷ ಬಿಡಬಾರದಿತ್ತು. ಅವರ ಜೊತೆ ಮಾತನಾಡುವೆ. ಪರಮೇಶ್ವರ್ ಮೇಲೆ ಕಲ್ಲು ಎಸೆತ ಕೂಡಾ ನಡೆಯಬಾರದ ಘಟನೆ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್, ಮುಖಂಡರಾದ ರೆಹಮತವುಲ್ಲಾ, ವಾಜೀದ್, ಮಹಮದ್ ಸಾದಿಕ್, ಆಲಿಯಾ, ಸಮೀರ್, ಫಯ್ಯಾಜ್ ಖಾನ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!