ಕಾಂಗ್ರೆಸ್ ಗೆ ವೋಟ್ ಹಾಕುದ್ರೆ ಮಾತ್ರ ಅಕ್ಕಿ ; ಮಾಲೀಕನ ಧಮ್ಕಿ

ಮಧುಗಿರಿ; ತಲೆಗೆ 1 ಕೆಜಿ ಅಕ್ಕಿ ಕಡಿಮೆ ಕೊಡುವುದಲ್ಲದೆ ಕಾಂಗ್ರೆಸ್ ಗೆ ಮಾತ್ರ ಓಟ್ ಹಾಕಬೇಕು ಇಲ್ಲವಾದರೆ ಅಕ್ಕಿ ನೀಡುವುದಿಲ್ಲ ಎಂದ ಅಂಗಡಿ ಮಾಲೀಕನ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿದ್ದು ಸ್ಥಳಕ್ಕೆ ಬಂದ ಇಲಾಖೆ ಅಧಿಕಾರಿಗಳಿಗೆ ದಾಖಲೆ ನೀಡಿ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಗೊಳಿಸುವಂತೆ ಆಗ್ರಹಿಸಿದ ಘಟನೆ ನಡೆದಿದೆ.

ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ವಿ ಎಸ್ ಎಸ್ ಎನ್ ಅಧ್ಯಕ್ಷ ಅಶ್ವಥ್ ನಾರಾಯಣ ಮಾಲೀಕತ್ವದ ಹನುಮಂತಪುರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಈ ವಂಚನೆ ನಡೆದಿದ್ದು ಸುಮಾರು 31 ಕ್ವಿಂಟಲ್ ಅಕ್ಕಿ ಹಾಗೂ 65 ಕೆಜಿ ರಾಗಿ ಉಳಿಸಿಕೊಂಡಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಅಂಗಡಿ ಮಾಲೀಕ ಅಶ್ವಥ್ ನಾರಾಯಣ್ ಬೇಡತ್ತೂರು ವಿ ಎಸ್ ಎಸ್ ಎಲ್ ಬ್ಯಾಂಕಿನ ಅಧ್ಯಕ್ಷರಾಗಿದ್ದು ಹನುಮಂತಪುರ ನ್ಯಾಯಬೆಲೆ ಅಂಗಡಿಗೂ ಮಾಲೀಕ. ಈತ ಕಾಂಗ್ರೆಸ್ ಗೆ ಮತ ಹಾಕಲು ಧಮ್ಕಿ ಹಾಕುತಿದ್ದು ಪಡಿತರ ನೀಡುವಾಗ ಅಳತೆ ಸರಿಯಿಲ್ಲ ಎಂದರೆ ನಿಮ್ಮ ದಾಖಲೆ ಸರಿಯಿಲ್ಲ ಎಂದು ಕಿರುಕುಳ ನೀಡುತ್ತಿದ್ದು ಹೆಣ್ಣು ಮಕ್ಕಳು ಬಂದಾಗ ಕಾಂಗ್ರೆಸ್‌ಗೆ ಮತ ಹಾಕಬೇಕು ಇಲ್ಲವಾದರೆ ಅಕ್ಕಿ ಕೊಡುವುದಿಲ್ಲ ಎಂದು ಧಮ್ಕಿ ಆಗುತ್ತಿದ್ದಾನೆ ಎಂದು ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ನಾಗರಾಜು ಆರೋಪಿಸಿದ್ದು, ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ ಸರ್ಕಾರ ನೀಡುವ ಅಕ್ಕಿಯನ್ನು ಸ್ವಂತ ಮನೆಯಿಂದ ನೀಡುವಂತೆ ದಬ್ಬಾಳಿಕೆ ನಡೆಸುತ್ತಿದ್ದಾನೆ ಈತನ ಮೇಲೆ ಕಠಿಣ ಕ್ರಮ ಕೈಗೊಂಡು ಅಂಗಡಿ ಪರವಾನಗಿ ರದ್ದುಗೊಳಿಸುವಂತೆ ಒತ್ತಾಯಿಸಿದರು.

ಗ್ರಾಮದಲ್ಲಿ 600 ಕ್ಕೂ ಹೆಚ್ಚು ಕಾರ್ಡುಗಳಿದ್ದು ಪ್ರತಿ ವ್ಯಕ್ತಿಗೆ ಬರುವ ಅಕ್ಕಿಯಲ್ಲಿ ತಲಾ ಒಂದು ಕೆಜಿ ಅಕ್ಕಿಯನ್ನು ಅಶ್ವತ್ ನಾರಾಯಣ್ ಕಡಿಮೆ ನೀಡುತ್ತಿದ್ದು ತಲಾ 2 ಕೆಜಿ ರಾಗಿಯ ಬದಲು ಅಳತೆ ಇಲ್ಲದ ಡಬ್ಬದಲ್ಲಿ ರಾಗಿಯನ್ನು ನೀಡುತ್ತಿದ್ದಾರೆ. 20 ಕೆಜಿ ಬದಲಿಗೆ 18 ಕೆಜಿ ಅಕ್ಕಿ ಕೊಟ್ಟಿದ್ದು ಕೇಳಿದರೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಗ್ರಾಮದ ರಂಗಮ್ಮ ಆರೋಪಿಸಿದರು. ಇದಲ್ಲದೆ ಜನರಿಂದ ಉಳಿದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ವೃದ್ಧರು, ಅಸಹಾಯಕರು ಬಂದರೆ ಹೆಬ್ಬೆಟ್ಟು ಬರುತ್ತಿಲ್ಲ ಎಂಬ ನೆಪ ಹೇಳಿ ಅಕ್ಕಿ ನೀಡುತ್ತಿಲ್ಲ ಈ ಬಗ್ಗೆ ಮಹಜರ್ ವರದಿಯಲ್ಲಿ ಎಲ್ಲಾ ನಮೂದಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.

ಅಧಿಕಾರಿಗಳ ದ್ವಂದ್ವ ಹೇಳಿಕೆ
ಪ್ರತಿ ತಿಂಗಳು ನೀಡುವ ಪಡಿತರವು ಅಂಕಿ ಅಂಶಗಳಿಂದ ಕೂಡಿರುತ್ತದೆ. ಉಳಿದ ಪಡಿತರವನ್ನು ಲೆಕ್ಕಹಾಕಿ ಮುಂದಿನ ಬಾರಿಗೆ ಬಿಡುಗಡೆ ಮಾಡುತ್ತಾರೆ. ಆದರೆ ಸದ್ಯ ಅಂಗಡಿಯಲ್ಲಿ 31 ಕ್ವಿಂಟಲ್ ಅಕ್ಕಿ ಉಳಿಕೆಯಾಗಿದ್ದು ರಾಗಿ 65 ಕೆಜಿ ಉಳಿಕೆಯಾಗಿದೆ. ಇದು ಯಾವ ಲೆಕ್ಕ. ಇದರಲ್ಲಿ 6 ಕ್ವಿಂಟಲ್ ಅಕ್ಕಿ ಪಿಎಂಜಿಕೆವೈ ಯೋಜನೆಯದ್ದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪಿಎಂಜಿಕೆ ವೈ ಯೋಜನೆಯ ನವಂಬರ್ ತಿಂಗಳಲ್ಲೇ ನಿಂತಿದ್ದು ಈಗ ಈ ಬಗ್ಗೆ ಮಾತನಾಡುವ ಅಧಿಕಾರಿಗಳ ಹೇಳಿಕೆ ಅನುಮಾನ ಹುಟ್ಟಿಸುತ್ತದೆ. ಇದು ಅಂಗಡಿ ಮಾಲೀಕನ ರಕ್ಷಣೆಗೆ ಅಧಿಕಾರಿಗಳು ನಿಂತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದು ಗ್ರಾಮದ ಮಂಜುನಾಥ್ ಆರೋಪಿಸಿದರು.
ಶೀಘ್ರ ಕ್ರಮಕ್ಕೆ ಶಿಫಾರಸ್ಸು

ಸ್ಥಳಕ್ಕೆ ಆಗಮಿಸಿದ ಆಹಾರ ನಿರೀಕ್ಷಕರಾದ ಹರೀಶ್ ಹಾಗೂ ಮಹಮ್ಮದ್ ನಸ್ರುದ್ದೀನ್ ಮಾತನಾಡಿ ಗ್ರಾಮಸ್ಥರ ಆರೋಪಗಳೆಲ್ಲ ಸತ್ಯವೆಂದು ಕಂಡುಬಂದಿದ್ದು ಎಲ್ಲರಿಂದ ಹೇಳಿಕೆ ಪಡೆಯಲಾಗಿದೆ. ಅಂಗಡಿಯಲ್ಲಿ 31 ಕ್ವಿಂಟಲ್ ಅಕ್ಕಿ, 65 ಕೆಜಿ ರಾಗಿ ಹೆಚ್ಚುವರಿ ಉಳಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸಲು ಹಾಗೂ ಅಗತ್ಯ ಕ್ರಮ ಕೈಗೊಳ್ಳಲು ಇಂದೇ ಮೇಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಹಾಗೂ ಸಾರ್ವಜನಿಕರಿಂದ ತಲಾ ಒಂದು ಕೆಜಿ ಅಕ್ಕಿಯನ್ನು ಕಡಿತಗೊಳಿಸಿರುವ ಬಗ್ಗೆ ಪರಿಶೀಲಿಸಿ ಅದನ್ನು ಸಾರ್ವಜನಿಕರಿಗೆ ಮತ್ತೆ ವಿತರಿಸಲು ಅಧಿಕಾರಿಗಳ ಬಳಿ ಅನುಮತಿ ಪಡೆಯಲು ವರದಿ ನೀಡಲಿದ್ದೇವೆ ಎಂದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!