ಗುಬ್ಬಿ: ರೈತ ಪರ ಕೆಲಸ ಮಾಡುವ ಏಕೈಕ ವ್ಯಕ್ತಿ ಕುಮಾರಸ್ವಾಮಿ ಎನ್ನುವುದು ಕೃಷಿಕ ವರ್ಗಕ್ಕೆ ತಿಳಿದಿದೆ. ಹಿಂದೂಸ್ತಾನದ ಯಾವುದೇ ರಾಜ್ಯದಲ್ಲಿ ಕೈಗೊಳ್ಳದ ಪಂಚರತ್ನ ಯೋಜನೆ ಸಾಕಾರಕ್ಕೆ ಗುಬ್ಬಿಯಲ್ಲಿ ನಮ್ಮ ಅಭ್ಯರ್ಥಿ ನಾಗರಾಜು ಅವರನ್ನು ಗೆಲ್ಲಿಸಿ ಎಂದು ನೆರೆದಿದ್ದ ಜನರಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು..
ತಾಲ್ಲೂಕಿನ ಕೆ.ಜಿ.ಟೆಂಪಲ್ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರ ಸಾಲ ಮನ್ನಾ, ಸ್ತ್ರೀಶಕ್ತಿ ಸಂಘದ ಸಾಲ ಮನ್ನಾ, ವೃದ್ಧರಿಗೆ ಐದು ಸಾವಿರ ಮಾಸಾಶನ ಹೀಗೆ ಅನೇಕ ಕಾರ್ಯಕ್ರಮ ಜನರಿಗೆ ಹತ್ತಿರವಾಗಿದೆ. ಇಂತಹ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಟಾನಕ್ಕೆ ಈ ಜಿಲ್ಲೆಯಲ್ಲಿ ಕನಿಷ್ಠ 7 ಸ್ಥಾನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
1995 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅಲ್ಪ ಸಂಖ್ಯಾತರಿಗೆ ಶೇಕಡಾ 4 ರ ಮೀಸಲಾತಿ ನೀಡಲಾಗಿತ್ತು. ಮಹಿಳೆಯರಿಗೆ ಮೊದಲ ಬಾರಿ ಮೀಸಲು ನಿಗದಿ, ವಾಲ್ಮೀಕಿ ಜನಾಂಗಕ್ಕೆ ಮೀಸಲು ಹೀಗೆ ಅನೇಕ ಕೆಲಸ ಮಾಡಿ ಸಾಮಾಜಿಕ ನ್ಯಾಯ ತರುವಲ್ಲಿ ಈ ಜಾತ್ಯತೀತ ಪಕ್ಷ ದುಡಿದಿತ್ತು ಎಂದ ಅವರು ಜೆಡಿಎಸ್ ಭದ್ರಕೋಟೆ ಎನಿಸಿದ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಉಳಿಸುವ ಕೆಲಸ ಪ್ರತಿ ಕಾರ್ಯಕರ್ತರು ಮಾಡುತ್ತಾರೆ. ಈ ತಿಂಗಳ 10 ನೇ ತಾರೀಖುವರೆಗೆ ಮನೆ ಮನೆ ತೆರಳಿ ಪಂಚರತ್ನ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮ ಬಗ್ಗೆ ತಿಳಿಸಿ ಮತಯಾಚನೆ ಮಾಡಬೇಕು. ನಂತರ ಈ ಶ್ರಮಕ್ಕೆ ಫಲವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ. ಇಲ್ಲಿ ನಾಗರಾಜು ಶಾಸಕರಾಗಿ ಐದು ವರ್ಷದಲ್ಲಿ ಎಲ್ಲಾ ಅಭಿವೃದ್ದಿ ಕೆಲಸ ಮಾಡಲಿದ್ದಾರೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮಾತನಾಡಿ ಜೆಡಿಎಸ್ ನಲ್ಲಿ ಗೆದ್ದು ಶಾಸಕರಾಗಿ ಪಕ್ಷ ದ್ರೋಹ ಮಾಡಿದ್ದ ಬಗ್ಗೆ ತಿಳಿದಿದೆ. ಕುಮಾರಸ್ವಾಮಿ ಅವರನ್ನು ಟೀಕಿಸಿ ನಮ್ಮ ವರಿಸ್ಥರಾದ ದೇವೇಗೌಡರ ಸೋಲಿಗೆ ಕಾರಣವಾಗಿದ್ದ ಮಾಜಿ ಶಾಸಕರ ಅಭಿವೃದ್ದಿ ಕೆಲಸ ತೀರಾ ಹಿಂದುಳಿದಿದೆ. ರಸ್ತೆಗಳು ಇಲ್ಲಿಲ್ಲ, ನೀರಾವರಿ ವ್ಯವಸ್ಥೆ ಮಾಡಲಿಲ್ಲ, ಶಾಲೆ, ಕಾಲೇಜು, ಬಸ್ ವ್ಯವಸ್ಥೆ ಯಾವುದೂ ಮಾಡದೆ ಕೇವಲ ಮದ್ಯದಂಗಡಿ ಅಭಿವೃದ್ಧಿ ಮಾಡಿದ್ದಾರೆ. ಇದೇ ದೊಡ್ಡ ಸಾಧನೆ ಎಂದ ಅವರು ನನಗೆ ಆಶೀರ್ವಾದ ಮಾಡಿ ಕೇವಲ ಐದು ವರ್ಷದಲ್ಲಿ 20 ವರ್ಷದಿಂದ ಆಗಿರದ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಷಷಿ ಅಹಮದ್ ಮಾತನಾಡಿ ಅಹಿಂದ ಏಳಿಗೆಗೆ ದುಡಿದ ಜೆಡಿಎಸ್ ಪಕ್ಷ ಮಾತ್ರ ಜಾತ್ಯತೀತ ನಿಲುವು ತಾಳಿದೆ. ಈ ಹಿಂದೆ ಅಲ್ಪ ಸಂಖ್ಯಾತರ ಮೀಸಲು ಕರುಣಿಸಿ ಉದ್ಯೋಗ ಶಿಕ್ಷಣದ ಮೂಲಕ ನಮ್ಮ ಸಮುದಾಯ ಮುಖ್ಯವಾಹಿನಿಗೆ ತಂದಿದ್ದರು. ಇಡೀ ಜಿಲ್ಲೆಯಲ್ಲಿ ಈ ಹಿಂದೆ 9 ಸ್ಥಾನ ಗೆದ್ದ ನಿದರ್ಶನವಿದೆ. ಮತ್ತೊಮ್ಮೆ ಅದೇ ಫಲಿತಾಂಶ ಬರುವ ನಿರೀಕ್ಷೆ ಕಾಣುತ್ತಿದೆ. ಇಡೀ ಜಿಲ್ಲೆಯ ಪ್ರವಾಸ ಮಾಡುತ್ತಿದ್ದೇನೆ. ಸ್ವಯಂ ಪ್ರೇರಿತವಾಗಿ ಜನರು ಬರುತ್ತಿರುವ ಕಾರ್ಯಕ್ರಮ ಜೆಡಿಎಸ್ ಮಾತ್ರ ಮಾಡುತ್ತಿದೆ ಎಂದರು.
ಮುಖಂಡ ಹೊನ್ನಗಿರಿಗೌಡ ಮತ್ತು ಬೆಟ್ಟಸ್ವಾಮಿ ಮಾತನಾಡಿ ರಾಷ್ಟ್ರೀಯ ಪಕ್ಷಗಳಿಂದ ಆಗಿರುವ ಅನ್ಯಾಯ ತಿಳಿಸಿದರು. ಗುಬ್ಬಿ ಕ್ಷೇತ್ರದಲ್ಲಿ ಮಾಜಿ ಶಾಸಕರು ಮಾಡಿರುವ ತಂತ್ರ ಕುತಂತ್ರ ಈ ಬಾರಿ ಫಲಿಸುವುದಿಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್ ಮರಳಿ ಗುಬ್ಬಿಯಲ್ಲಿ ವಿಜೃಂಭಿಸಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಮುಖಂಡರಾದ ಯೋಗಾನಂದಕುಮಾರ್, ಸಿದ್ದಗಂಗಮ್ಮ, ಕರಿಯಪ್ಪ, ಕಳ್ಳಿಪಾಳ್ಯ ಲೋಕೇಶ್, ಶಿವಲಿಂಗಯ್ಯ, ಸುರೇಶಗೌಡ, ಅಲಿಂಸಾಬ್, ಸೌದ್, ಯಲ್ಲಪ್ಪ, ಗಂಗಣ್ಣ, ನಾಗಸಂದ್ರ ವಿಜಯ್ ಕುಮಾರ್ ಇತರರು ಇದ್ದರು.