ಸಂವಿಧಾನ ಬದಲಿಸಿ ಮೀಸಲಾತಿ ರದ್ದು ಮಾಡುವ ಬಿಜೆಪಿ ಸೋಲಿಸಲು ದಲಿತರ ಪಣ : ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್

ಗುಬ್ಬಿ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಿಸಲು ಮುಂದಾದ ಮನುವಾದಿ ಪಕ್ಷ ಬಿಜೆಪಿ ಸೋಲಿಸಲು ರಾಜ್ಯದಲ್ಲಿ ದಲಿತ ಸಂಘಟನೆಗಳು ಒಗ್ಗೂಡಿ ಕಾಂಗ್ರೆಸ್ ಪರ ಮತ ನೀಡಲು ಕರೆ ನೀಡಲಾಗಿದೆ ಎಂದು ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಲಿತರು ಮುಸ್ಲಿಮರ ವಿರೋಧಿಯಾಗಿ ನಡೆದುಕೊಂಡ ಬಿಜೆಪಿ ನಮ್ಮ ಸಂವಿಧಾನ ಬದಲಿಸುವ ಹಾಗೂ ಮೀಸಲಾತಿ ರದ್ದು ಮಾಡುವ ಪ್ರಕ್ರಿಯೆಗೆ ಮುಂದಾಗಿದೆ. ಇಂತಹ ಪಕ್ಷಕ್ಕೆ ಬೆಂಬಲ ದಲಿತರು ನೀಡಬಾರದು. ನಮ್ಮ ಉಳಿವಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ರಾಜ್ಯ ಸಂಚಾಲಕರ ಒಕ್ಕೂಟ ತೀರ್ಮಾನಿಸಿ ಬಿಜೆಪಿ ಸೋಲಿಸುವ ಶಕ್ತಿ ಇರುವ ಕಾಂಗ್ರೆಸ್ ಪರ ನಾವುಗಳು ನಿಲ್ಲಬೇಕು ಎಂದು ಕರೆ ನೀಡಿದರು. ಅದರಂತೆ ಇಡೀ ಜಿಲ್ಲೆಯಲ್ಲಿ ಸಂಘಟನೆ ಕೆಲಸ ನಡೆದಿದೆ. ಗುಬ್ಬಿಯಲ್ಲಿ ಸಹ ಕಾಂಗ್ರೆಸ್ ಪರ ಅತೀ ಹೆಚ್ಚು ಮತ ದಲಿತರು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

65 ಲಕ್ಷ ದಲಿತ ಮಕ್ಕಳ ಶಿಕ್ಷಣಕ್ಕೆ ದಕ್ಕೆ ತರಲು ವಿದ್ಯಾರ್ಥಿ ವೇತನ ರದ್ದು ಮಾಡಿದ್ದು ಬಿಜೆಪಿ ತಂತ್ರಕ್ಕೆ ಸಾಕ್ಷಿಯಾಗಿದೆ. ಈ ಜೊತೆಗೆ ಉನ್ನತ ಶಿಕ್ಷಣ ಮಾಡುವ ದಲಿತ ಯುವಕರಿಗೆ ಹಾಸ್ಟೆಲ್ ವ್ಯವಸ್ಥೆ ನಿಲ್ಲಿಸಿದ್ದಾರೆ. ಕಾರಣ ದಲಿತ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿದಲ್ಲಿ ಮುಖ್ಯವಾಹಿನಿಗೆ ಬರುತ್ತಾರೆ ಎಂಬ ಧೋರಣೆ ಬಿಜೆಪಿಯಲ್ಲಿದೆ. ಇದೆಲ್ಲದರ ಜೊತೆ ಆಶ್ರಯ ಯೋಜನೆಯಲ್ಲಿ ದಲಿತರಿಗೆ ನೀಡುತ್ತಿದ್ದ ಮನೆಗಳನ್ನು ನಿಲ್ಲಿಸಿ ಬೀದಿಗೆ ತಂದು ನಿಲ್ಲಿಸಿದ್ದಾರೆ. ಹೀಗೆ ದಲಿತ ವಿರೋಧಿತನ ಮಾಡುವ ಬಿಜೆಪಿ ಸೋಲಿಗೆ ಕ್ಷೇತ್ರದ 38 ಸಾವಿರಕ್ಕೂ ಅಧಿಕ ದಲಿತರು ನಿರ್ಣಾಯಕರಾಗಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ದಸಂಸ ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅವರನ್ನು ನಿಂದಿಸಿದ ನಿಟ್ಟೂರು ಗಂಗಾರಾಂ ಅವರು ಸಂಘಟನೆಯ ವಿರೋಧಿಯಾಗಿದ್ದರು. ತಮ್ಮ ಸ್ವಾರ್ಥಕ್ಕೆ ಸಂಘಟನೆ ಬಳಸಿಕೊಳ್ಳಲು ಮುಂದಾಗಿ ದಲಿತ ವಿರೋಧಿ ಪಕ್ಷ ಬಿಜೆಪಿ ಸೇರಿದ್ದಾರೆ. ಸಂವಿಧಾನ ಸುಟ್ಟು ಅಂಬೇಡ್ಕರ್ ಅವಮಾನಿಸಿದ ಬಿಜೆಪಿ ಪಕ್ಷ ಸೋಲಿಸುವ ಪಣ ದಲಿತರು ಮಾಡಬೇಕು. ಸ್ವಾರ್ಥಿ ದಲಿತ ಮುಖಂಡರಿಗೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಿ.ವಿ.ಮಂಜುನಾಥ್ ಮಾತನಾಡಿ ಮೀಸಲಾತಿ ನೀಡುವ ನಾಟಕವಾಡಿದ ಬಿಜೆಪಿ ರಾಷ್ಟ್ರಪತಿಗಳಿಂದ ಅಂಕಿತ ಮಾಡಿಸಿ ಮೀಸಲಾತಿ ಜಾರಿ ಮಾಡಬೇಕಿತ್ತು. ಆದರೆ ಕೇವಲ ಚುನಾವಣೆಯ ಹಿನ್ನಲೆ ಬಣ್ಣ ಇಲ್ಲದ ನಾಟಕ ಆಡಿದೆ. ಗುಬ್ಬಿ ಬಿಜೆಪಿ ಮೋಸಗಾರರು, ದಲ್ಲಾಳಿಗಳನ್ನು ಸೇರಿಸಿಕೊಂಡು ಇಡೀ ಸಮುದಾಯ ತಮ್ಮ ಹಿಡಿತದಲ್ಲಿದೆ ಎಂಬಂತೆ ಬಿಂಬಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 18 ಮತ ಪಡೆದವರು ಅಲ್ಲಿ ಲೀಡರ್ ಆಗಿದ್ದಾರೆ ಎಂದು ಲೇವಡಿ ಮಾಡಿದರು.

ದಲಿತ ಮುಖಂಡ ಈಶ್ವರಯ್ಯ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ದಲಿತರ ಓಟು ಅತೀ ಹೆಚ್ಚು ಬರಲಿದೆ. ಮೊದಲಿನಿಂದ ದಲಿತರನ್ನು ಕಾಪಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಈ ನಿಟ್ಟಿನಲ್ಲಿ ಸಂಘಟನೆಯ ಆದೇಶದಂತೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೂರಕ್ಕೆ ನೂರರಷ್ಟು ದಲಿತರು ಮತ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕೊಡಿಯಾಲ ಮಹದೇವು, ಎನ್.ಎ.ನಾಗರಾಜು, ರವಿವರ್ಮ, ನಾಗಭೂಷಣ್, ಕೃಷ್ಣಪ್ಪ, ಕಿರಣ್ ಕೌಷಿಕ್, ಶಿವಸ್ವಾಮಿ, ಅರುವೆಸಂದ್ರ ಕೃಷ್ಣಪ್ಪ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!