ಗುಬ್ಬಿ: ಯಾವುದೇ ತಂತ್ರ ಕುತಂತ್ರ ಫಲಿಸದ ಪರಿಣಾಮ ವಿರೋಧಿಗಳು ಸೋಲಿನ ಭೀತಿಯಲ್ಲಿ ಅಪಪ್ರಚಾರಕ್ಕೆ ಸಲ್ಲದ ವದಂತಿ ಹಬ್ಬಿಸುತ್ತಾರೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಕಿವಿಗೊಡಬೇಡಿ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮನವಿ ಮಾಡಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಪಕ್ಷದ ಎಲ್ಲಾ ಪ್ರಮುಖ ಮುಖಂಡರು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಒಗ್ಗಟ್ಟಿನ ಕಾರ್ಯತಂತ್ರ ಕಂಡು ವಿರೋಧಿಗಳು ಅಸಮಾಧಾನಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೊನೆಯ ಅಸ್ತ್ರವಾಗಿ ಅಪಪ್ರಚಾರ ಆರಂಭಿಸುತ್ತಾರೆ. ಹೆಚ್ಚು ತಲೆ ಕೆಡಿಸಿಕೊಳ್ಳದೆ ಮತದಾರರನ್ನು ತಲುಪುವ ಕೆಲಸ ಮಾಡಿ ಎಂದು ಕರೆ ನೀಡಿದರು.
ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಒಂದು ಹಂತದಲ್ಲಿ ಗೆಲುವಿನತ್ತ ಸಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಅಭಿವೃದ್ದಿ ಕೆಲಸ ಆಗದ ಹಿನ್ನಲೆ ಈ ಬಾರಿ ಬದಲಾವಣೆ ಬಯಸಿ ಹೊಸ ಮುಖ ಬಯಸಿ ನನಗೆ ಆಶೀರ್ವದಿಸಲಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಎಲ್ಲಾ ಸಮುದಾಯ ನನ್ನ ಕೈ ಹಿಡಿದಿದೆ. ಈ ಪ್ರಚಾರ ಕಂಡು ಕಂಗೆಟ್ಟ ವಿರೋಧಿಗಳು ಮನಬಂದಂತೆ ವದಂತಿ ಹಬ್ಬಿಸುತ್ತಾರೆ. ಯಾವುದೇ ವಿಷಯಕ್ಕೂ ಮಾತನಾಡದೆ ಮತ ಕ್ರೋಢೀಕರಣ ಕೆಲಸ ಮಾಡಿ ಎಂದು ಕರೆ ನೀಡಿದರು.
ಮುಖಂಡ ಹೊನ್ನಗಿರಿಗೌಡ ಮಾತನಾಡಿ ಜೆಡಿಎಸ್ ಪಕ್ಷದ ಎಲ್ಲಾ ಪ್ರಮುಖ ಮುಖಂಡರು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ಒಬ್ಬೊಬ್ಬರು ಒಂದು ಭಾಗದಲ್ಲಿ ಕೆಲಸ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಮುಖಂಡರು ಎಲ್ಲೂ ಕಾಣುತ್ತಿಲ್ಲ, ನಾಪತ್ತೆಯಾದರು, ಕ್ಷೇತ್ರದಲ್ಲಿಲ್ಲ ಹೀಗೆ ಅಪಪ್ರಚಾರ ಮಾಡುತ್ತಾರೆ. ಸದ್ಯ ಜೆಡಿಎಸ್ ನಾಗಲೋಟದಲ್ಲಿ ಓಡುತ್ತಿದೆ. ಇದನ್ನು ಸಹಿಸದ ಎದುರಾಳಿಗಳು ಕುತಂತ್ರ ಮಾಡುತ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ತಿಳಿಸಿದರು.
ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ ನೂರಕ್ಕೆ ನೂರು ಜೆಡಿಎಸ್ ಗೆಲುವು ಶತಸಿದ್ಧ. ಜೆಡಿಎಸ್ ಭದ್ರಕೋಟೆ ಎಂದು ಪ್ರಚಾರ ವೇಳೆ ತಿಳಿದು ಮತಗಳನ್ನು ತನ್ನತ್ತ ಸೆಳೆಯಲು ಸಲ್ಲದ ವದಂತಿ ಹಬ್ಬಿಸುತ್ತಾರೆ. ಈ ಬಗ್ಗೆ ಗೊಂದಲಗೊಳ್ಳದೆ ಉಳಿದ ನಾಲ್ಕು ದಿನ ಮನೆ ಮನೆ ತಲುಪಿ ಪಕ್ಷ ಪರ ಪ್ರಚಾರ ಮಾಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯೋಗಾನಂದಕುಮಾರ್, ಕಳ್ಳಿಪಾಳ್ಯ ಲೋಕೇಶ್, ಸಿದ್ದಗಂಗಮ್ಮ, ಜಿ.ಡಿ.ಸುರೇಶಗೌಡ ಇತರರು ಇದ್ದರು.