ಗುಬ್ಬಿ: ಕಾಂಗ್ರೆಸ್ ಪಕ್ಷಕ್ಕೆ ದಲಿತರು ಎಂಬ ತಪ್ಪು ಕಲ್ಪನೆ ಹಿಂದಿನಿಂದ ನಡೆದುಬಂದಿದೆ. ಕೇವಲ ಅಧಿಕಾರ ಆಸೆಗೆ ಒಂದು ತಳಮಟ್ಟದ ಮತದಾರರನ್ನು ಬಳಸಿಕೊಳ್ಳುವ ತಂತ್ರಕ್ಕೆ ತಿರುಗೇಟು ನೀಡಿದ ಬಿಜೆಪಿ ನಲವತ್ತು ವರ್ಷದ ಮೀಸಲಾತಿ ಹೋರಾಟಕ್ಕೆ ಸ್ಪಂದಿಸಿ ಒಳ ಮೀಸಲಾತಿ ಸಹ ಶಿಫಾರಸ್ಸು ಮಾಡಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ನಡೆದ ಬುದ್ದ ಬಸವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ದಲಿತರ ಎಲ್ಲಾ ಕುಂದು ಕೊರತೆ ನಿವಾರಿಸಿದೆ. ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಸೂಕ್ತ ಪರಿಹಾರ ನೀಡಿದೆ. ಈ ನಿಟ್ಟಿನಲ್ಲಿ. ಈ ಬಾರಿ ದಲಿತರು ಬಿಜೆಪಿ ಪರ ನಿಲ್ಲಲಿದ್ದಾರೆ. ಇದನ್ನು ಸಹಿಸದ ವಿರೋಧಿ ಪಕ್ಷಗಳು ದಲಿತರನ್ನು ಮರಳಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಒಳ ಮೀಸಲಾತಿ ಜಾರಿಗೆ ಹಲವು ಬಾರಿ ಸಭೆಗಳು ನಡೆದು ಅಂತಿಮವಾಗಿ ಶಿಫಾರಸ್ಸು ಮಾಡಲು ಒಪ್ಪಿಗೆ ಸಿಕ್ಕಿದೆ. ಶೀಘ್ರದಲ್ಲಿ ಕೇಂದ್ರ ಸರ್ಕಾರ ಅಸ್ತು ಸೂಚಿಸಲಿದೆ. ಚುನಾವಣೆ ಸಮಯ ಶಿಫಾರಸ್ಸು ಮಾಡಿದಲ್ಲಿ ತಪ್ಪು ಕಲ್ಪನೆಗೆ ಅವಕಾಶವಿದೆ ಎನ್ನುವ ಅಂಶ ಕೂಡಾ ಚರ್ಚೆಯಾಗಿ ನಂತರ ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ಕೊಡುವುದು ಮುಖ್ಯ. ವಿರೋಧ ಪಕ್ಷದ ಹೇಳಿಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿ ಬಿಜೆಪಿ ಒಳ ಮೀಸಲಾತಿ ಕೊಡಲು ಒಪ್ಪಿದೆ. ಏಕರೂಪ ನಾಗರೀಕ ಸಂಹಿತೆಯಿಂದ ಯಾವುದಕ್ಕೂ ತೊಂದರೆ ಇಲ್ಲ. ಅದು ದೇಶದ ಏಕತೆ ಐಕ್ಯತೆ ಸಂಕೇತವಾಗಲಿದೆ ಎಂದ ಅವರು ವಸುದೈವ ಕುಟುಂಬಕಂ ಎಂಬ ಹಿಂದೂ ಧರ್ಮದಲ್ಲಿ ಅನ್ನ ಹಾಕಿದವರಿಗೆ ಋಣ ತೀರಿಸುವ ಧರ್ಮ ತಿಳಿದಿದೆ. ಈ ನಿಟ್ಟಿನಲ್ಲಿ ಬಿಜೆಪಿಗೆ ದಲಿತರು ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಗುಬ್ಬಿ ಕ್ಷೇತ್ರದಲ್ಲಿ ದಲಿತರ ಮತ ಬಿಜೆಪಿ ಪರ ಬೀಳಲಿದೆ. ಕಾಂಗ್ರೆಸ್ ಪಕ್ಷ ಮತ ಬ್ಯಾಂಕ್ ಎಂದು ಹೇಳಿಕೊಂಡು ಹೊರಟಿದೆ. ಆದರೆ ಕಳೆದ ನಲವತ್ತು ವರ್ಷಗಳ ಮೀಸಲಾತಿ ಹೋರಾಟಕ್ಕೆ ಕಿಂಚಿತ್ತೂ ಬೆಲೆ ನೀಡದ ಕಾಂಗ್ರೆಸ್ ದಲಿತರು ಬೆಳೆದರೆ ಕಾಂಗ್ರೆಸ್ ಪರ ನಿಲ್ಲುವುದಿಲ್ಲ ಎಂದು ಅವರನ್ನು ಕೇವಲವಾಗಿ ನಡೆಸಿಕೊಂಡಿದೆ. ಆದರೆ ಬಿಜೆಪಿ ದಲಿತರ ಸಮಸ್ಯೆ ಎಲ್ಲವನ್ನೂ ಆಲಿಸಿದೆ. ಮುಖ್ಯವಾಹಿನಿಗೆ ತರಲು ಸಹಕರಿಸಿದೆ. ರಾಜಕೀಯ ಶಕ್ತಿ ಸಹ ನೀಡಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಪರ ಎಲ್ಲಾ ದಲಿತ ಮುಖಂಡರು ನಿಂತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಸ್ತುವಾರಿ ಸಂಜಯ್ ಭಾಟಿಯಾ, ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ಬಿ.ಲೋಕೇಶ್, ಟ್ಯಾಂಕರ್ ನರಸಿಂಹಮೂರ್ತಿ, ನಿಟ್ಟೂರು ಗಂಗರಾಂ, ಶ್ರೀಧರ್, ಕೀರ್ತಿ, ಪಿ.ಜಿ.ಜಗದೀಶ್, ಅಶೋಕ್, ಮನು, ವಿದ್ಯಾಸಾಗರ ಇತರರು ಇದ್ದರು.