ವಾಲ್ಮೀಕಿ ಸಮಾಜ ಕಾಂಗ್ರೆಸ್ ಪರ : ಗುಬ್ಬಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರ ಒಕ್ಕೊರಲಿನ ಅಭಿಪ್ರಾಯ

ಗುಬ್ಬಿ: ವಾಲ್ಮೀಕಿ ಜನಾಂಗಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ ಮಾಜಿ ಸಚಿವ ಶ್ರೀನಿವಾಸ್ ಪರ ನಿಂತು ಮರಳಿ ಐದನೇ ಬಾರಿಗೆ ಶಾಸಕರಾಗಿ ಆಯ್ಕೆ ಮಾಡಲು ಗುಬ್ಬಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ಬದ್ಧವಾಗಿದೆ ಎಂದು ವಾಲ್ಮೀಕಿ ನಾಯಕ ಸಂಘದ ಗೌರವಾಧ್ಯಕ್ಷ ಎ.ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಇಪ್ಪತ್ತು ವರ್ಷಗಳಿಂದ ವಾಲ್ಮೀಕಿ ಸಮಾಜದ ಅಗತ್ಯತೆ ಅರಿತು ಸಹಕಾರ ನೀಡಿದ ವಾಸಣ್ಣ ಅವರಿಗೆ ನಮ್ಮ ಸಮಾಜ ಶೇಕಡಾ 90 ರಷ್ಟು ಮತ ನೀಡಲಿದೆ ಎಂದು ತಿಳಿಸಿದರು.

ಗುಬ್ಬಿ ಪಟ್ಟಣದಲ್ಲಿ ವಾಲ್ಮೀಕಿ ಸಮಾಜದ ಅಭಿವೃದ್ದಿಗೆ ನಿವೇಶನ ನೀಡಿ ಸಮುದಾಯ ಭವನ ಹಾಗೂ ಹಾಸ್ಟೆಲ್ ನಿರ್ಮಾಣಕ್ಕೆ ಅನುವು ಮಾಡಿದೆ. ತಾಲ್ಲೂಕಿನ ಎಲ್ಲಾ ಗ್ರಾಮದ ನಮ್ಮ ಬೀದಿಗಳಿಗೆ ಸಿಸಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಚರಂಡಿ ಹೀಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ. ಪ್ರತಿ ಬಾರಿ ನಾವು ಶ್ರೀನಿವಾಸ್ ಅವರಿಗೆ ಮತ ನೀಡಿದ್ದ ನಾವು ಮತ್ತೇ ಈ ಬಾರಿ ಸಹ ಮತ ನೀಡುತ್ತೇವೆ ಎಂದರು.

ಸಂಘದ ಕಾರ್ಯದರ್ಶಿ ರಾಮಚಂದ್ರಪ್ಪ ಮಾತನಾಡಿ ಶೋಷಿತ ವರ್ಗಗಳನ್ನು ಒಗ್ಗೂಡಿಸಿಕೊಂಡು ಸಾಗುವ ಶಕ್ತಿ ಇರುವ ಶ್ರೀನಿವಾಸ್ ಅವರನ್ನು ಐದನೇ ಬಾರಿ ಗೆಲ್ಲಿಸುವ ಅವಶ್ಯಕತೆ ನಮ್ಮ ಸಮುದಾಯಕ್ಕೆ ಇದೆ. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರಲಿದೆ. ಸಚಿವರಾಗುವ ಅವಕಾಶ ಇರುವ ವಾಸಣ್ಣ ನಮ್ಮ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ. ರಾಜಕೀಯ ಶಕ್ತಿ ಕೂಡ ನೀಡಿ ಉತ್ತಮ ಸ್ಥಾನಮಾನ ನೀಡಿದ್ದಾರೆ. ವಾಲ್ಮೀಕಿ ಸಮಾಜಕ್ಕೆ ಬರುವ ಎಲ್ಲಾ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿ ನಮ್ಮ ಸಮಾಜಕ್ಕೆ ಬೆನ್ನಲುಬು ಆಗಿದ್ದಾರೆ. ಈ ನಿಟ್ಟಿನಲ್ಲಿ ಅವರ ಆಯ್ಕೆ ಸೂಕ್ತ ಎಂದು ನಮ್ಮ ಸಮಾಜ ನಿರ್ಧರಿಸಿ ಒಗ್ಗೂಡಿ ಕಾಂಗ್ರೆಸ್ ಪರ ದುಡಿಯುತ್ತಿದೆ ಎಂದರು.

ಬಗರ್ ಹುಕುಂ ಸಮಿತಿಯ ಮಾಜಿ ಸದಸ್ಯ ಸಣ್ಣರಂಗಯ್ಯ ಮಾತನಾಡಿ ಕೆ.ಎನ್.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪರ ನಿಂತ ವಾಲ್ಮೀಕಿ ಸಮಾಜ ಈ ಬಾರಿ 90 ರಷ್ಟು ಮತಗಳನ್ನು ವಾಸಣ್ಣ ಅವರಿಗೆ ನೀಡುತ್ತೇವೆ. ನಮ್ಮ ಸಮಾಜಕ್ಕೆ ಅವರ ಕೊಡುಗೆ ಅಪಾರ. ನಾವುಗಳು ಕೂಡಾ ಪ್ರಾಮಾಣಿಕವಾಗಿ ಗೆಲ್ಲಿಸುವತ್ತ ಸಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಅಡವೀಶ್, ರವೀಶ್, ಡಿ.ದೇವರಾಜ್, ಲಕ್ಷ್ಮಣಪ್ಪ, ಸೌಭಾಗ್ಯಮ್ಮ, ಹೇರೂರು ನಾಗರಾಜು, ರಂಗನಾಥ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!