ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಮರು ಆಯ್ಕೆಯ ಇತಿಹಾಸ ಖಚಿತ – ರಾಜ್ಯಸಭಾ ಸದಸ್ಯ ಜಗ್ಗೇಶ್

ಗುಬ್ಬಿ: ತುರುವೇಕೆರೆ ಕ್ಷೇತ್ರದಲ್ಲಿ ಶಾಸಕರು ಸತತ ಆಯ್ಕೆ ಆಗಿಲ್ಲ ಎಂಬ ಕೆಟ್ಟ ಪದ್ಧತಿಗೆ ಈ ಬಾರಿ ತಿಲಾಂಜಲಿ ಇಡುವ ಕೆಲಸ ಬಿಜೆಪಿ ಮಸಾಲಾ ಜಯರಾಮ್ ಮಾಡುತ್ತಾರೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ಹಾಗೂ ಬೈಕ್ ಮೆರವಣಿಗೆಯಲ್ಲಿ ಮಾತನಾಡಿದ ಅವರು ಅಭಿವೃದ್ದಿ ಕೆಲಸದಲ್ಲಿ ಇತಿಹಾಸ ಮಾಡಿದ ತುರುವೇಕೆರೆ ಶಾಸಕರು ಕೆಲಸ ಮಾಡಿದ ಶಾಸಕರ ಪಟ್ಟಿಯಲ್ಲಿ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರ ಮರು ಆಯ್ಕೆ ಶತ ಸಿದ್ದ ಎಂದರು.

ಬಿಜೆಪಿಯ ಕೆಲಸ ಆಲೋಚಿಸಬೇಕಿದೆ. ಮೋದಿ ಆಡಳಿತ ಬರುವ ಮೊದಲು ಕಾಂಗ್ರೆಸ್ ಆಳ್ವಿಕೆಯಲ್ಲಿ ಪಾಕಿಸ್ತಾನ ಮತ್ತು ಚೀನಾ ಅತ್ತೆ ಮನೆಗೆ ಬಂದಂತೆ ನಮ್ಮ ದೇಶಕ್ಕೆ ಮುತ್ತಿಗೆ ಹಾಕುತ್ತಿದ್ದರು. ಕಾಶ್ಮೀರವನ್ನು ತವರೂರು ಮಾಡಿಕೊಂಡವರನ್ನು ಬಗ್ಗು ಬಡಿದ ಬಗ್ಗೆ ತಿಳಿದಿರಬೇಕು. ಈ ಜೊತೆಗೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿ ವಿಶ್ವದ ಐದನೇ ಬಲಿಷ್ಠ ರಾಷ್ಟ್ರವಾಗಿದೆ. ದೊಡ್ಡ ದೇಶಗಳು ನಮ್ಮ ಭಾರತವನ್ನು ಆಹ್ವಾನಿಸುವ ಮಟ್ಟಕ್ಕೆ ತಂದರು. ಇಂತಹ ವಿಚಾರವನ್ನು ಮತದಾರರಿಗೆ ತಲುಪಿಸುವ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ ಕಲ್ಲೂರು ಕೆರೆಗೆ ಹೇಮಾವತಿ ಹರಿಸುವ ವಿಚಾರದಲ್ಲಿ ಭಗೀರಥ ಪ್ರಯತ್ನ ಮಾಡಿ ನಾಲೆ ನಿರ್ಮಿಸಿದ್ದು ಅವರ ಶ್ರದ್ಧೆ ತೋರುತ್ತದೆ. ಯಾವುದೇ ಗ್ರಾಮಕ್ಕೆ ಹೋದರೂ ಸಿಸಿ ರಸ್ತೆಗಳು ಆಹ್ವಾನಿಸುತ್ತದೆ. ಹಾಗೆಯೇ ಕುಡಿಯುವ ನೀರಿನ ಘಟಕ ಎಲ್ಲಾ ಕೆರೆಗೆ ನೀರು, ವಿದ್ಯುತ್ ಪರಿವರ್ತಕ ಹೀಗೆ ಹಲವು ಕೆಲಸ ಮಾಡಿ ಜನರ ಮನಸ್ಸಿನಲ್ಲಿ ನಿಂತಿದ್ದಾರೆ. ಹಾಗೆಯೇ ಮೋದಿ ಅವರ ಹವಾ ಕೂಡಾ ಪ್ರಚಲಿತದಲ್ಲಿದೆ. ಈ ನಿಟ್ಟಿನಲ್ಲಿ 1800 ಕೋಟಿ ಅಭಿವೃದ್ದಿ ಕೆಲಸ ಮಾಡಿದ ಮಸಾಲಾ ಜಯರಾಮ್ ಮರು ಆಯ್ಕೆ ಅತ್ಯಧಿಕ ಮತಗಳಿಂದ ಆಗಬೇಕು. ಈ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ ಅಭಿವೃದ್ದಿ ಕೆಲಸ ಮಾಡಿದಕ್ಕೆ ಸಾಕ್ಷಿಯಾಗಿ ಒಂದು ರೋಡ್ ಶೋನಲ್ಲಿ ಭಾಗವಹಿಸಿದ ಸಹಸ್ರಾರು ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಬಗ್ಗೆ ಜನ ಬೇಸತ್ತಿದ್ದಾರೆ. ಈ ಹಿನ್ನಲೆ 25 ಸಾವಿರಕ್ಕೂ ಅಧಿಕ ಅಂತರದಲ್ಲಿ ಮಸಾಲಾ ಜಯರಾಮ್ ಮರು ಆಯ್ಕೆಯಾಗುತ್ತಾರೆ ಎಂದರು.

ತುರುವೇಕೆರೆ ಬಿಜೆಪಿ ಅಭ್ಯರ್ಥಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಕೋವಿಡ್ ಸಮಯದಲ್ಲಿ ಉಳಿದ ಅಲ್ಪ ಅವಧಿಯಲ್ಲಿ 1850 ಕೋಟಿ ರೂಗಳ ಕೆಲಸ ಮಾಡಿ ಮನೆ ಮಗನಾಗಿದ್ದ ಕಾರಣ ಇಂದು ಸಹಸ್ರಾರು ಕಾರ್ಯಕರ್ತರು ತೋರುತ್ತಿರುವ ಅಭಿಮಾನಕ್ಕೆ ನಾನು ಸದಾ ಋಣಿ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.

ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಮುಖಂಡರಾದ ಭಾನುಪ್ರಕಾಶ್, ಮದುವೆಮನೆ ಕುಮಾರ್, ಇಡಗೂರು ರವಿ, ಲೋಕೇಶ್, ಚಿಕ್ಕ ಚಂಗಾವಿ ಪ್ರಕಾಶ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!