ಗುಬ್ಬಿಯಲ್ಲಿ ಸಹಸ್ರಾರು ಬೈಕ್ ಜೊತೆ ಅದ್ದೂರಿ ರೋಡ್ ಶೋ ನಡೆಸಿದ ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು

ಗುಬ್ಬಿ: ಅಬ್ಬರದ ಪ್ರಚಾರ ನಡೆಸಿದ ಜೆಡಿಎಸ್ ಗುಬ್ಬಿ ಪಟ್ಟಣದಲ್ಲಿ ಸಹಸ್ರಾರು ಜೆಡಿಎಸ್ ಕಾರ್ಯಕರ್ತರು ಬೈಕ್ ಜೊತೆ ಅಭ್ಯರ್ಥಿ ಬಿ.ಎಸ್.ನಾಗರಾಜು ಅವರನ್ನು ತೆರೆದ ವಾಹನದಲ್ಲಿ ಅದ್ದೂರಿಯಾಗಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.

ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತೆರೆದ ವಾಹನದಲ್ಲಿ ಜೆಡಿಎಸ್ ಪಕ್ಷದ ಪ್ರಮುಖ ಮುಖಂಡರ ಜೊತೆ ಅಭ್ಯರ್ಥಿ ಬಿ.ಎಸ್.ನಾಗರಾಜು ಮೆರವಣಿಗೆ ಆರಂಭಿಸಿದರು. ಸುಭಾಷ್ ನಗರ ಮೂಲಕ ಪಟ್ಟಣದ ಹಳೇ ಭಾಗದ ಎಲ್ಲಾ ಬಡಾವಣೆಯಲ್ಲಿ ಮತಯಾಚನೆ ಮಾಡಿದರು. ಜೆಡಿಎಸ್ ಪರ ಘೋಷಣೆ ಕೂಗುತ್ತಾ ತೆರಳಿದ ಕಾರ್ಯಕರ್ತರು ಪಂಚರತ್ನ ಯೋಜನೆ ಬಗ್ಗೆ ಜನರಿಗೆ ತಿಳಿಸುತ್ತಾ ಮತ ನೀಡಲು ಮನವಿ ಮಾಡಿದರು.

ರೋಡ್ ಶೋನಲ್ಲಿ ಮಾತನಾಡಿದ ಬಿ.ಎಸ್.ನಾಗರಾಜು, ಜೆಡಿಎಸ್ ಪಕ್ಷದ ಕಾರ್ಯಕ್ರಮ ಇಂದಿಗೂ ಜನಮನದಲ್ಲಿದೆ. ಪಂಚರತ್ನ ಯೋಜನೆ ಬಗ್ಗೆ ಆಕರ್ಷಿತರಾದ ಮತದಾರರು ಬಡವರು, ದೀನ ದಲಿತರ ಪರ ಪ್ರಾದೇಶಿಕ ಪಕ್ಷ ಯಾವುದೇ ಗೊಂದಲ ಸೃಷ್ಟಿಸದೆ ಆಡಳಿತ ಮಾಡಲಿದೆ ಎಂದ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಅಭಿವೃದ್ದಿ ಕಾಣದ ಗುಬ್ಬಿ ಕ್ಷೇತ್ರದಲ್ಲಿ ಬದಲಾವಣೆ ತಂದು ಕೆಲಸ ಮಾಡಿ ಅಭಿವೃದ್ದಿ ಮಾಡುವ ಹಂಬಲದಲ್ಲಿ ಬಂದಿದ್ದೇನೆ. ನನ್ನ ಈ ಒತ್ತಾಸೆಗೆ ಹಲವು ಮುಖಂಡರು ಸಾಥ್ ನೀಡಿದ್ದಾರೆ. ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಬರುತ್ತಿದ್ದಾರೆ. ಅವರ ಶ್ರಮದ ಫಲ ಸಿಕ್ಕೇ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ ರಾಷ್ಟ್ರೀಯ ಪಕ್ಷಗಳ ತಂತ್ರ ಕುತಂತ್ರ ಜನರಿಗೆ ಅರಿವಿಗೆ ಬಂದಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಜನರ ಕಷ್ಟ ತಿಳಿದು ಮಹತ್ವದ ಯೋಜನೆ ಸಿದ್ದ ಪಡಿಸಿದೆ. ಇದು ಈ ಬಾರಿ ಬಹುಮತ ಸಾಧನೆಗೆ ಮೆಟ್ಟಿಲಾಗಿದೆ. ಈ ಜೊತೆಗೆ ಗುಬ್ಬಿಯಲ್ಲಿ ಬದಲಾವಣೆ ಬಯಸಿದ ಜನರಿಗೆ ಉತ್ತಮ ಅಭ್ಯರ್ಥಿ ಸಿಕ್ಕಿದಂತಾಗಿದೆ. ಅಭಿವೃದ್ಧಿಗಾಗಿ ಬದಲಾವಣೆ ತನ್ನಿ ಎಂದು ಕರೆ ನೀಡಿದರು.

ಮುಖಂಡ ಹೊನ್ನಗಿರಿಗೌಡ ಮಾತನಾಡಿ ಕಾಂಗ್ರೆಸ್ ಬಿಜೆಪಿಯಿಂದ ಬೇಸತ್ತ ಜನರು ಪ್ರಾದೇಶಿಕ ಪಕ್ಷ ಜೆಡಿಎಸ್ ಬಗ್ಗೆ ಒಲವು ತೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಭಿವೃದ್ದಿ ಮಾಡದ ಗುಬ್ಬಿ ಶಾಸಕರ ಬಗ್ಗೆ ಎದ್ದಿರುವ ಅಸಮಾಧಾನ ಅಲೆ ಜೆಡಿಎಸ್ ನತ್ತ ಬರುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೋಡ್ ಶೋನಲ್ಲಿ ಕೆಲ ಪ್ರಮುಖ ಸರ್ಕಲ್ ಬಳಿ ಕ್ರೇನ್ ಮೂಲಕ ಬೃಹತ್ ಹೂವಿನ ಹಾರವನ್ನು ಅಭಿಮಾನಿಗಳು ಹಾಕಿದರು. ಪಟಾಕಿ ಸಿಡಿಸಿ ಬೈಕ್ ಮೆರವಣಿಗೆ ಅದ್ದೂರಿಯಾಗಿ ನಡೆಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಯೋಗಾನಂದಕುಮಾರ್, ಎಸ್.ಎಲ್.ನರಸಿಂಹಯ್ಯ, ಸಿದ್ದಗಂಗಮ್ಮ, ಜಿ.ಡಿ.ಸುರೇಶಗೌಡ, ಜಿ.ಎಂ.ಶಿವಲಿಂಗಯ್ಯ, ಕೆ.ಬಿ.ಕೃಷ್ಣಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕವೀರಯ್ಯ, ಯುವ ಜೆಡಿಎಸ್ ಅಧ್ಯಕ್ಷ ಗಂಗಸಂದ್ರ ಮಂಜಣ್ಣ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!