ಗುಬ್ಬಿ: ಬಿಜೆಪಿ ಪಕ್ಷ ಸಂಘಟಿಸಿ ತೀವ್ರ ಪೈಪೋಟಿಗೆ ಸತತ ಪ್ರಯತ್ನ ಪಟ್ಟ ಎಲ್ಲಾ ಕಾರ್ಯಕರ್ತರ ಬೆನ್ನೆಲುಬಾಗಿ ನಿಂತು ಮುಂದಿನ ಸ್ಥಳೀಯ ಚುನಾವಣೆಗಳಾದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗೆ ಸನ್ನದ್ಧರಾಗಿ ದುಡಿಯೋಣ. ಸೋಲಿಗೆ ಯಾರೂ ಧೃತಿಗೆಡದೆ ಪಕ್ಷ ಸಂಘಟನೆಗೆ ಒತ್ತು ನೀಡಿ ಸೋಲನ್ನು ಗೆಲುವಾಗಿಸೋಣ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಕರೆ ನೀಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ 52 ಸಾವಿರ ಮತಗಳನ್ನು ತಂದು ಕೊಟ್ಟ ಕಾರ್ಯಕರ್ತರಿಗೆ, ನನ್ನ ಆಯ್ಕೆಗೆ ಸ್ಪಂದಿಸಿ ಮತ ನೀಡಿದ ಮತದಾರರಿಗೆ ಹಾಗೂ ನನ್ನ ಜೊತೆ ದುಡಿದ ಮುಖಂಡರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸೋಲು ಗೆಲುವು ಚುನಾವಣೆಯಲ್ಲಿ ಸಾಮಾನ್ಯ. ಜನಾದೇಶವನ್ನು ನಾನು ಒಪ್ಪುತ್ತೇನೆ. ನಮ್ಮಲ್ಲಿನ ನೂನ್ಯತೆ ಸರಿಪಡಿಸಿಕೊಂಡು ಮುಂದಿನ ಎಲ್ಲಾ ಚುನಾವಣೆಗೆ ಸಿದ್ದರಾಗುತ್ತೇವೆ. ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ. ಯಾರ ಮೇಲೂ ದೂರುವ ಅಗತ್ಯವಿಲ್ಲ. ನಮ್ಮ ಸಂಘಟನೆ ಬಲ ಪಡಿಸಿಕೊಂಡು ಸೋಲೇ ಗೆಲುವಿನ ಸೋಪಾನ ಮಾಡಿಕೊಳ್ಳೋಣ ಎಂದ ಅವರು ಪಕ್ಷದ ಸೋಲಿನ ಪರಾಮರ್ಶೆ ಪಕ್ಷವೇ ಮಾಡುತ್ತದೆ. ಮುಂದಿನ ಹೆಜ್ಜೆ ಗೆಲುವಿನತ್ತ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಅನಿವಾರ್ಯ ಸೋಲಿನ ಬಗ್ಗೆ ಯಾರೂ ಧೃತಿಗೆಟ್ಟಿಲ್ಲ. ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರು ಚುರುಕಿನ ಕೆಲಸ ಮಾಡಿ ಸೋಲನ್ನು ಗೆಲುವಾಗಿ ಮಾರ್ಪಾಡು ಮಾಡಲಿದ್ದಾರೆ. ಜಯದ ನಿರೀಕ್ಷೆ ವಿಶ್ವಾಸವಾಗಿಯೇ ಇತ್ತು. ಸಾರ್ವಜನಿಕ ಚರ್ಚೆಗೆ ತುತ್ತಾದ ಒಳೇಟು, ವಿರೋಧಿ ಚಟುವಟಿಕೆಗೆ ಪಕ್ಷವೇ ತೀರ್ಮಾನ ಕೈಗೊಳ್ಳಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಸಾಗರನಹಳ್ಳಿ ನಂಜೇಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಭೈರಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯತೀಶ್, ಪಪಂ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಶಶಿಕುಮಾರ್, ಮುಖಂಡರಾದ ಸಿ.ಎಂ.ಹಿತೇಶ್, ನಾಗೇಂದ್ರಪ್ಪ, ಬಿ.ಲೋಕೇಶ್, ಎನ್.ಲಕ್ಷ್ಮೀರಂಗಯ್ಯ, ಕುಮಾರ್, ಶ್ರೀಧರ್ ಇತರರು ಇದ್ದರು.