ನಂಬರ್ ಗೇಮ್ ನಲ್ಲಿ ಸ್ವಲ್ಪ ಇದ್ದೇವೆ ಅಷ್ಟೇ : ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎಸ್.ನಾಗರಾಜು

ಗುಬ್ಬಿ: ಗುಬ್ಬಿಯಲ್ಲಿ ಜೆಡಿಎಸ್ ಮುಗಿಸುವ ಮಾತುಗಳಾಡಿದವರಿಗೆ ತಕ್ಕ ಉತ್ತರ ನೀಡಿದ 43 ಸಾವಿರ ಜನತೆಯನ್ನು ಒಕ್ಕೊರಲಿನಲ್ಲಿ ಸೇರಿಸಿದ ಪ್ರಾಮಾಣಿಕ ಜೆಡಿಎಸ್ ಕಾರ್ಯಕರ್ತರಿಗೆ ನಾನು ಚಿರಋಣಿ. ಯಾರೂ ಎದೆಗುಂದುವ ಅಗತ್ಯವಿಲ್ಲ. ನಂಬರ್ ಗೇಮ್ ನಲ್ಲಿ ಕೊಂಚ ಹಿಂದೆ ಇದ್ದೇವೆ ಅಷ್ಟೇ. ಎಲ್ಲವೂ ಸರಿ ಪಡಿಸಿಕೊಂಡು ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗಳಿಸೋಣ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎಸ್.ನಾಗರಾಜು ಕಾರ್ಯಕರ್ತರಿಗೆ ಹುರಿದುಂಬಿಸಿದರು.

ಪಟ್ಟಣದ ಬಯಲಾಂಜನೇಯ ದೇವಾಲಯದ ಬಳಿ ನಡೆದ ಜೆಡಿಎಸ್ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು ಹೊಸ ಮುಖವಾಗಿ ಕ್ಷೇತ್ರಕ್ಕೆ ಬಂದ ವೇಳೆ ಸ್ಥಳೀಯ ಸಮಸ್ಯೆ ಎದುರಿಸಿಕೊಂಡು ನನ್ನ ಜೊತೆ ಹೆಜ್ಜೆ ಹಾಕಿದ ಪ್ರಾಮಾಣಿಕ ಕಾರ್ಯಕರ್ತರು, ಮುಖಂಡರಿಗೆ ನೋವು ಆಗಿದೆ. ಆದರೂ 43 ಸಾವಿರ ಜನರ ಆಶೀರ್ವಾದ ಹೆಚ್ಚಿನ ಶಕ್ತಿ ತಂದಿದೆ. ಈ ಶಕ್ತಿಯಿಂದ ಜನ ಸೇವೆ ಮಾಡುತ್ತೇನೆ. ಕ್ಷೇತ್ರದಲ್ಲಿ ಉಳಿದು ಜನಪರ ನಿಲ್ಲುತ್ತೇನೆ ಎಂದರು.

ಪಕ್ಷ ಕಟ್ಟುವ ಕೆಲಸ ಮಾಡಿದ ಕಾರ್ಯಕರ್ತರ ಕಷ್ಟ ಕಾರ್ಪಣ್ಯಗಳಿಗೆ ಜೊತೆಗಿದ್ದು 24 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ಶಾಸಕರಾಗಿ ಆಯ್ಕೆಯಾದವರಿಗೆ ಅಭಿನಂದಿಸುತ್ತೇನೆ. ಇನ್ಮುಂದೆ ಅಭಿವೃದ್ದಿ ಕೆಲಸಗಳನ್ನು ಮಾಡಲಿ. ಕಾಲಹರಣ, ಕಳಪೆ ಕೆಲಸ ನಡೆದಲ್ಲಿ ಖಂಡಿಸಿ ಹೋರಾಟ ಮಾಡೋಣ. ಸಮಾನ ಮನಸ್ಕರ ತಂಡ ಜೆಡಿಎಸ್ ನಲ್ಲಿದೆ. ಇದೇ ಒಗ್ಗಟ್ಟು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಶಕ್ತಿ ನೀಡಲಿದೆ ಎಂದ ಅವರು ಮುಂಬರುವ ಜಿಪಂ ತಾಪಂ ಎಪಿಎಂಸಿ ಚುನಾವಣೆ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡೋಣ. ಓಡಿ ಹೋಗುತ್ತಾನೆ ಎಂದವರಿಗೆ ತಕ್ಕ ಉತ್ತರ ನೀಡೋಣ. 43 ಸಾವಿರ ಜನರ ಆಶೀರ್ವಾದದ ಜೊತೆ ದೊಡ್ಡ ಹೆಜ್ಜೆ ಹಾಕಿ ಕ್ಷೇತ್ರದಲ್ಲಿ ಸೇವೆ ಮಾಡಲು ಪ್ರಾಮಾಣಿಕ ಕಾರ್ಯಕರ್ತರು ಸಾಥ್ ನೀಡುವಂತೆ ಮನವಿ ಮಾಡಿದರು.

ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ ಹಿಂದೆ ಎರಡು ಬಾರಿ ಸೋತ ನನಗೆ ಇದು ಮೂರನೇ ಸೋಲು ಎನಿಸಿದೆ. ಆದರೆ ಈ ಸೋಲು ಗೆಲುವಾಗಿಸಲು ಹೋರಾಡೋಣ. ಇಲ್ಲಿ ಯಾರೂ ಹೇಡಿಗಳಲ್ಲ. ಚುನಾವಣೆ ನಾವು ಮಾಡಿದ್ದೇವೆ. ಎದುರಾಳಿಗಳು ಕುತಂತ್ರಗಾರಿಕೆಯಿಂದ ಗೆದ್ದಿದ್ದಾರೆ. ನಾಗಣ್ಣ ಊರು ಖಾಲಿ ಮಾಡುತ್ತಾರೆ ಎಂಬ ವದಂತಿ ಹಬ್ಬಿಸಿದ ಎದುರಾಳಿಗಳಿಗೆ ಬಿಜೆಪಿ ವೈಫಲ್ಯ ವರದಾನವಾಯಿತು. ಈ ಜೊತೆಗೆ ಮುಸ್ಲಿಂ ಸಮಾಜದ ಒಂದು ತೀರ್ಮಾನ ಜೆಡಿಎಸ್ ಗೆ ಹಿನ್ನಡೆ ತಂದಿದೆ. ಏನೇ ಆದರೂ ಚುನಾವಣೆ ಬಳಿಕ ಜೆಡಿಎಸ್ ಪಕ್ಷಕ್ಕೆ ಬರಲು ಪ್ರಮುಖ, ಬಲಾಢ್ಯ ಮುಖಂಡರು ಇಚ್ಛೆ ವ್ಯಕ್ತಪಡಿಸಿದ್ದಾರೆ. ಅವರ ಆಗಮನದಿಂದ ಪಕ್ಷ ಮತ್ತಷ್ಟು ಬಲವರ್ಧನೆಗೊಳ್ಳಲಿದೆ ಎಂದರು.

ಮುಖಂಡ ತೋಫಿಕ್ ಅಹಮದ್ ಮಾತನಾಡಿ ಬಿಜೆಪಿ ವಿರೋಧಿ ಅಲೆಯನ್ನು ಕಾಂಗ್ರೆಸ್ ನತ್ತ ತಿರುಗಿಸಿ ಇಡೀ ರಾಜ್ಯದಲ್ಲಿ ಶೇಕಡಾ 88 ರಷ್ಟು ಮತ ಪಡೆದಿದ್ದಾರೆ. ಇದು ನಮ್ಮಲ್ಲಿ ಕೂಡಾ ಎಫೆಕ್ಟ್ ಆಗಿದೆ. ಆದರೆ ಜೆಡಿಎಸ್ ಪಕ್ಷಕ್ಕೆ ನೀಡಬೇಕಿತ್ತು ಎಂಬ ಪಶ್ಚಾತಾಪ ಶೀಘ್ರದಲ್ಲಿ ಅರಿವಿಗೆ ಬರಲಿದೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಮಾಜಿ ಸದಸ್ಯ ಜಿ.ಎಂ.ಶಿವಲಿಂಗಯ್ಯ, ಪಪಂ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶಗೌಡ, ಹಿಂದುಳಿದ ವರ್ಗಗಳ ಆಯೋಗ ಮಾಜಿ ಸದಸ್ಯ ಯೋಗಾನಂದ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕವೀರಯ್ಯ, ಯುವ ಘಟಕ ಅಧ್ಯಕ್ಷ ಗಂಗಸಂದ್ರ ಮಂಜಣ್ಣ, ಪೂಜಾರ್ ಯರ್ರಪ್ಪ, ಆಟೋ ಮಂಜಣ್ಣ, ಬಸವರಾಜು, ದೊಡ್ಡಯ್ಯ, ಫಿಲಿಪ್ಸ್ ಮನು ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!