ಗುಬ್ಬಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 91 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಗುಬ್ಬಿ ಜೆಡಿಎಸ್ ಕಚೇರಿ ಬಳಿ ದೇವೇಗೌಡರ ಫ್ಲೆಕ್ಸ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ನಂತರ ಕೇಕ್ ಕತ್ತರಿಸಿ ಸಂಭ್ರಮಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಜೆಡಿಎಸ್ ಯುವ ಘಟಕ ಅಧ್ಯಕ್ಷ ಗಂಗಸಂದ್ರ ಮಂಜಣ್ಣ ಮಾತನಾಡಿ ಕನ್ನಡಿಗರ ಹೆಮ್ಮೆಯ ಪ್ರಧಾನಿ ಮಣ್ಣಿನ ಮಗ ದೇವೇಗೌಡರ ಕೊಡುಗೆ ಅಪಾರ. ನಮ್ಮ ರಾಜ್ಯ ದೇಶ ಕಂಡಂತಹ ಸಜ್ಜನ ರಾಜಕಾರಣಿ ಎನಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಕಟ್ಟಿ ಬೆಳೆಸಿ ರೈತರು ಬಡವರು ಮಧ್ಯಮ ವರ್ಗದ ಕಣ್ಮಣಿ ಎನಿಸಿದ್ದಾರೆ. ಈ ಇಳಿ ವಯಸ್ಸಿನಲ್ಲೂ ರಾಜ್ಯ ಪ್ರವಾಸ ಮಾಡಿ ಚುನಾವಣೆ ನಡೆಸಿದ ಅವರ ಉತ್ಸಾಹ ಯುವಕರನ್ನು ನಾಚಿಸುತ್ತದೆ. ಇಂತಹ ಮೇರು ವ್ಯಕ್ತಿತ್ವದ ದೊಡ್ಡ ಗೌಡರಿಗೆ ಇನ್ನೂ ಆಯಸ್ಸು ದೇವರು ನೀಡಲಿ ಎಂದು ಹಾರೈಸಿದರು.

ಮುಖಂಡ ನಾಗಸಂದ್ರ ವಿಜಯ್ ಕುಮಾರ್ ಮಾತನಾಡಿ ದೇಶ ಮರೆಯದ ಕಾರ್ಯಕ್ರಮ ನೀಡಿದ ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಸೇವೆ ಮತ್ಯಾರೋ ನೀಡಲಾರರು. ದೇಶದಲ್ಲಿ ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಇನ್ನೂ ಜನಪರ ಕಾಳಜಿ ವಹಿಸಿ ಜೆಡಿಎಸ್ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರ ದಿನಚರಿ ಇಂದು ಸಹ ಉತ್ತಮ ಆರೋಗ್ಯಕ್ಕೆ ಕಾರಣ. ಇವರ ಮಾರ್ಗದರ್ಶನದಲ್ಲಿ ಬೆಳೆದ ರಾಜಕಾರಣಿಗಳು ಇಂದು ಎಲ್ಲಾ ರಾಜಕೀಯ ಪಕ್ಷದಲ್ಲಿ ಇದ್ದಾರೆ. ಅವರ ಸಲಹೆ ಸೂಚನೆಗಳನ್ನು ಪಡೆದು ಮುಂದಿನ ಕಾರ್ಯ ಮಾಡುವ ಶಿಷ್ಯರು ಸಹ ಸಾವಿರಾರು ಮಂದಿ ಇದ್ದಾರೆ. ಅವರ ಆರೋಗ್ಯ ಹೆಚ್ಚಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಲಕ್ಷ್ಮೀಕಾಂತ್, ಮುಖಂಡರಾದ ಆಟೋ ಮಂಜಣ್ಣ, ಸುರೇಶ್, ಹೊಸಪಾಳ್ಯ ವೆಂಕಟೇಶ್, ಪ್ರೇಮ್, ಅರುಣ್, ಮಡೇನಹಳ್ಳಿ ದೊಡ್ಡಯ್ಯ, ಶ್ರೀನಿವಾಸ್, ಗುಬ್ಬಿ ದೊಡ್ಡಯ್ಯ ಇತರರು ಇದ್ದರು.