ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ ಸರಳವಾಗಿ ಆಚರಣೆ

ತುಮಕೂರು: ಕೋವಿಡ್ ಮಾರ್ಗಸೂಚಿಯ ಪ್ರಕಾರ ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ನಗರದಲ್ಲಿ ಸರಳವಾಗಿ ಆಚರಿಸಲಾಯಿತು.

ನಗರದ ಈದ್ಗಾ ಮೈದಾನದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಹೀಗಾಗಿ ಈ ಬಾರಿ ಈದ್ಗಾ ಮೈದಾನದಲ್ಲಿ ಯಾವುದೇ ರೀತಿಯ ಹಬ್ಬದ ಚಟುವಟಿಕೆಗಳು ನಡೆಯಲಿಲ್ಲ. ಬದಲಾಗಿ ಬಾರ್‌ಲೈನ್ ರಸ್ತೆಯಲ್ಲಿರುವ ಮಕ್ಕಾ ಮಸೀದಿ, ಈದ್ಗಾ ಮೊಹಲ್ಲಾ ಪಕ್ಕದಲ್ಲಿರುವ ಕೌಸರ್ ಮಸೀದಿ ಸೇರಿದಂತೆ ನಗರದ ವಿವಿಧ ಮಸೀದಿಯಲ್ಲಿ ಶೇ. 50 ರಷ್ಟು ಜನರೊಂದಿಗೆ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.

ಬಾರ್‌ಲೈನ್ ರಸ್ತೆಯಲ್ಲಿರುವ ಮಕ್ಕಾ ಮಸೀದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಅವರು ಭೇಟಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸುತ್ತಾ ಬರಲಾಗುತ್ತಿದೆ. ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಹಿಂದಿನಂತೆ ಬಕ್ರೀದ್ ಹಬ್ಬವನ್ನು ಆಚರಿಸಲು ಮುಸ್ಲಿಂ ಬಾಂಧವರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಜೀವಕ್ಕೆ ಅತ್ಯಂತ ಮಹತ್ವ ಕೊಡಬೇಕಾಗಿರುವುದರಿಂದ ಸರಳ ಆಚರಣೆ ಅನಿವಾರ್ಯವಾಗಿದೆ ಎಂದರು.

ಜೀವ ಇದ್ದರೆ ಜೀವನ. ಹಾಗಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವುದು ಅತ್ಯಗತ್ಯ. ಎಲ್ಲ ಮುಖಂಡರು, ಮುಸ್ಲಿಂ ಬಾಂಧವರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದಕ್ಕೆ ಅಭಿನಂದನೆಗಳು ಎಂದರು.

ಜಿಲ್ಲೆಯಲ್ಲಿ ಎಲ್ಲ ಕೋಮಿನವರು ಅತ್ಯಂತ ಸೌಹಾರ್ದತೆಯಿಂದ ಒಟ್ಟಾಗಿ ಹಬ್ಬವನ್ನು ಆಚರಿಸುತ್ತಿರುವುದು ಕಂಡು ಬರುತ್ತಿದೆ. ಇದು ಸಂತಸದ ಸಂಗತಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರವಾಡ್ ಮಾತನಾಡಿ, ಎಲ್ಲ ಮುಸ್ಲಿಂ ಬಾಂಧವರಿಗೆ ಪೊಲೀಸ್ ಇಲಾಖೆ ವತಿಯಿಂದ ಬಕ್ರೀದ್ ಹಬ್ಬದ ಶುಭಕೋರುವುದಾಗಿ ಹೇಳಿದರು.

ಮಾಜಿ ಶಾಸಕ ಎಸ್. ಷಫಿ ಅಹಮದ್ ಮಾತನಾಡಿ, ಕಳೆದ ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶಾಂತಿ-ಸೌಹಾರ್ದತೆಯಿಂದ ಬಾಳ್ವೆ ನಡೆಸಲಾಗುತ್ತಿದೆ ಎಂದರು.

ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ನೀಡಿರುವ ಆದೇಶದಂತೆ ಮುಸ್ಲಿಂ ಸಮುದಾಯದವರು ನಡೆದುಕೊಳ್ಳುತ್ತಿದ್ದು, ಕೋವಿಡ್ ನಿಯಮಗಳ ಪ್ರಕಾರ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.

ಮಕ್ಕಾ ಮಸೀದಿ ಬ್ರಿಟೀಷರ ಕಾಲದಿಂದಲೂ ಇದ್ದು, ಅಂದಿನಿಂದಲೂ ಜಿಲ್ಲಾಡಳಿತ ಹೊಣೆ ಹೊತ್ತಿರುವ ಅಧಿಕಾರಿಗಳು ಇಲ್ಲಿಗೆ ಬಂದು ಶುಭ ಕೋರುವುದು, ಅವರಿಗೆ ಸಮುದಾಯದಿಂದ ಅಭಿನಂದನೆ ಸಲ್ಲಿಸುವುದು ರೂಢಿಗತವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ. ಎಸ್. ರಫೀಕ್ ಅಹಮದ್, ಮುಖಂಡರಾದ ಮುರುಳೀಧರ ಹಾಲಪ್ಪ, ಅಫ್ತಾಬ್ ಅಹಮದ್, ಮುನೀರ್ ಅಹಮದ್, ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!