ಸಿಎಂ ಬಿ.ಎಸ್.ವೈ ಗೆ ‘ಜುಲೈ ಕಂಟಕ’?

ಬೆಂಗಳೂರು: ಜುಲೈ ತಿಂಗಳು ಅದರಲ್ಲೂ ಆಷಾಢ ಮಾಸ ಯಡಿಯೂರಪ್ಪ ಅವರಿಗೆ ಕಂಟಕ ಎಂಬ ಮಾತು ಹಿಂದಿನಿಂದಲೂ ಇದೆ. ಅದು ಕೇವಲ ವದಂತಿ ಅಥವಾ ಸುಮ್ಮನೇ ಕೇಳಿ ಬರುತ್ತಿರುವ ಮಾತಲ್ಲ. ಅದಕ್ಕೆ ಕಾರಣವೂ ಇದೆ. ಅದೂ ರಾಜೀನಾಮೆ ವಿಚಾರಕ್ಕೆ ಬಂದಾಗ, ಜುಲೈ ತಿಂಗಳು ಯಡಿಯೂರಪ್ಪ ಅವರಿಗೆ ಈ ಮೊದಲೂ ಇನ್ನಿಲ್ಲದಂತೆ ಕಾಡಿದೆ. ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂಬ ವಿಶ್ವಾಸ ಇದ್ದಾಗಲೇ ಯಡಿಯೂರಪ್ಪ ಅವರಿಗೆ ಹಿನ್ನಡೆ ಆಗುತ್ತದೆ. ಅದು ಜುಲೈ ತಿಂಗಳಿನಲ್ಲಿಯೇ ಆಗುತ್ತದೆ ಎಂಬುದು ಗಮನಿಸಬೇಕಾದ ಅಂಶ.

ಪ್ರತಿ ವರ್ಷವೂ ಜುಲೈ ತಿಂಗಳಿನಲ್ಲಿಯೇ ಹೆಚ್ಚಾಗಿ ಆಷಾಢ ಮಾಸ ಬರುತ್ತದೆ. ವಿಚಿತ್ರ ಎಂದರೆ ಈ ಆಷಾಢ ಮಾಸ ಒಂದರ್ಥದಲ್ಲಿ ಯಡಿಯೂರಪ್ಪ ಅವರಿಗೆ ಸಹಾಯಕವೂ ಆಗಿದೆ. ಇದೇ ಆಷಾಢವೇ ಯಡಿಯೂರಪ್ಪ ಅವರನ್ನು ಎರಡೇರಡು ಬಾರಿ ರಾಜೀನಾಮೆ ಕೊಡುವುದರಿಂದ ತಪ್ಪಿಸಿದೆ. ಆದರೆ ಜುಲೈ ಎಂಬುದು ಯಡಿಯೂರಪ್ಪ ಅವರಿಗೆ ಸಂಕಷ್ಟ ತಂದೊಡ್ಡಿರುವುದು ಈ ಹಿಂದೆಯೂ ಕಂಡು ಬಂದಿದೆ. ಅದಕ್ಕೆ ಕಾರಣ ಮೊದಲ ಸಲ ಬಿಜೆಪಿ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಆಷಾಡ ಮುಗಿದ ಬಳಿಕ ಜುಲೈ ತಿಂಗಳಿನಲ್ಲಿ. ಹೌದು 2011ರ ಜುಲೈ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದರು. ಆಗಲೂ ಅವರು ರಾಜೀನಾಮೆ ಕೊಡುವುದನ್ನು ಸ್ವಲ್ಪ ಕಾಲ ವಿಳಂಬ ಮಾಡಿದ್ದು ಆಷಾಢ.

ಹತ್ತು ವರ್ಷಗಳ ಹಿಂದೆಯೂ ಜುಲೈ ಕಂಟಕ!
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಪತನದ ಬಳಿಕ 2008ರಲ್ಲಿ ಮೊದಲ ಬಾರಿ ಕರ್ನಾಟಕದಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆಗಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಎನ್ನುವುದರಲ್ಲಿ ಎರಡು ಮಾತಿಲ್ಲ. 2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ 2011ರಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಆಗಲೂ ಕೂಡ ಜುಲೈ ತಿಂಗಳಿನಲ್ಲಿಯೇ ರಾಜೀನಾಮೆ ಕೊಟ್ಟಿದ್ದು ಕಾಕತಾಳೀಯ. ಜುಲೈ 31, 2011ರಂದು ಆಗ ಅವರು ವಾಸವಾಗಿದ್ದ ಸಿಎಂ ಅಧಿಕೃತ ನಿವಾಸವಾಗಿದ್ದ ರೇಸ್‌ಕೋರ್ಸ್‌ ರಸ್ತೆಯ ಕೃಷ್ಣಾದಿಂದ ರಾಜಭವನಕ್ಕೆ ಪಾದಯಾತ್ರೆಯಲ್ಲಿ ತೆರಳಿ, ಆಗಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಆಗಲೂ ಅವರನ್ನು ಕೆಲ ದಿನಗಳ ಕಾಲ ರಾಜೀನಾಮೆ ಕೊಡದಂತೆ ಕಾಪಾಡಿದ್ದು ಆಷಾಡವೇ.

ಹತ್ತು ವರ್ಷಗಳ ಹಿಂದಿನಂತೆ ಮತ್ತೆ ರಾಜೀನಾಮೆ ಕೊಡಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಳೆದ ಜುಲೈ 10 ರಂದು ಮಣ್ಣೆತ್ತಿನ ಅಮವಾಸ್ಯೆಂದು ಆಷಾಢ ನಾಸ ಬಂದಿದೆ. ಆಗಸ್ಟ್‌ 8 ರಂದು ನಾಗರ ಅಮವಾಸ್ಯೆಯಂದು ಆಷಾಢ ಮಾಸ ಮುಗಿಯಲಿದೆ. ಹೀಗಾಗಿ ಈ ಸಲವೂ ಆಷಾಢ ಮಾಸದ ಕಾರಣಕೊಟ್ಟು ಯಡಿಯೂರಪ್ಪ ಅವರು ರಾಜೀನಾಮೆ ಕೊಡುವುದನ್ನು ಮುಂದಕ್ಕೆ ಹಾಕುತ್ತಾರಾ? ಅದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಕೊಡಲಿದೆಯಾ? ಎಂಬುದು ಕುತೂಹಲ ಮೂಡಿಸಿದೆ.

ಒಟ್ಟಾರೆ ಜುಲೈ ತಿಂಗಳು ಮಾತ್ರ ಯಡಿಯೂರಪ್ಪ ಅವರಿಗೆ ಸಂಕಷ್ಟ ತಂದೊಡ್ಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಎರಡೂ ಬಾರಿಯೂ ತಾವೇ ಗಳಿಸಿಕೊಂಡಿದ್ದ ಮುಖ್ಯಮಂತ್ರಿ ಹುದ್ದೆಯನ್ನು ಜುಲೈ ತಿಂಗಳಿನಲ್ಲಿ ತಾವೇ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ!

You May Also Like

error: Content is protected !!