ಬೆಳಗಾವಿ ನೆರೆಹಾನಿ ವೀಕ್ಷಣೆಗೆ ತೆರಳಿದ ಸಿಎಂ ಯಡಿಯೂರಪ್ಪ

ಸಿಎಂ ರಾಜೀನಾಮೆ ಸಂಬಂಧ ಹೈಕಮಾಂಡ್​ನಿಂದ ಯಾವುದೇ ಕ್ಷಣದಲ್ಲಿ ಸೂಚನೆ ಬರುವ ನಿರೀಕ್ಷೆ ಇದ್ದರೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕರ್ತವ್ಯದಿಂದ ವಿಮುಖರಾಗದೆ ಬೆಳಗಾವಿ ನೆರೆಹಾನಿ ವೀಕ್ಷಣೆಗೆ ತೆರಳಿದ್ದಾರೆ.

ಅಧಿಕೃತ ನಿವಾಸ ಕಾವೇರಿಯಿಂದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಸಿಎಂ ಯಡಿಯೂರಪ್ಪ ತೆರಳಿದರು. ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತೆರಳಿರುವ ಸಿಎಂ, ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.ಪರಿಹಾರ ಕಾರ್ಯಗಳನ್ನು ಖುದ್ದು ಸಿಎಂ ವೀಕ್ಷಣೆ ಮಾಡಲಿದ್ದು, ಸಾಂತ್ವನ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯಲ್ಲಿ ಸಭೆ ನಡೆಸಲಿರುವ ಬಿಎಸ್​ವೈ ಅವರು ಪರಿಸ್ಥಿತಿ ಬಗ್ಗೆ ಸಮಗ್ರ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ. ಹೆಚ್ಚಿನ ಹಾನಿ ತಪ್ಪಿಸಲು ಸೂಚನೆ ನೀಡಲಿದ್ದು, ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸುವ ಭರವಸೆ ನೀಡಲಿದ್ದಾರೆ.

ನಾಳೆ ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಂದೇ ಹೈಕಮಾಂಡ್​ನಿಂದ ರಾಜೀನಾಮೆಗೆ ಸೂಚನೆ ಬರಲಿದೆ ಎನ್ನಲಾಗುತ್ತಿದೆ. ಸ್ವತಃ ಯಡಿಯೂರಪ್ಪ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ. ರಾಜಕೀಯ ಸ್ಥಿತ್ಯಂತರದ ಈ ಸಮಯದಲ್ಲಿಯೂ ಸಿಎಂ ನೆರೆವೀಕ್ಷಣೆಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

You May Also Like

error: Content is protected !!