ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿದ್ದು ಹೇಗೆ? ಅವರ ಗಾಡ್ ಪಾದರ್ ಯಾರು?

ಹಾವೇರಿ; ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಾದರ ಲಿಂಗಾಯಿತ ಸಮುದಾಯಕ್ಕೆ ಸೇರಿದ ಅವರು ಬಿ. ಎಸ್. ಯಡಿಯೂರಪ್ಪ ಆಪ್ತರು.

ಜನತಾ ಪರಿವಾರದಲ್ಲಿದ್ದ ಬಸವರಾಜ ಬೊಮ್ಮಾಯಿ 2008ರಲ್ಲಿ ಬಿಜೆಪಿ ಸೇರಿದ್ದರು. ಜಲಸಂಪನ್ಮೂಲ, ಗೃಹ ಸೇರಿದಂತೆ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು. ಕರ್ನಾಟಕದಲ್ಲಿನ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆ ಒಲಿದು ಬಂದಿದೆ. ಜೂನ್ 9ರಂದು ಹಾಕಿದ್ದ ಫೇಸ್ ಬುಕ್ ಪೋಸ್ಟ್‌ನಲ್ಲಿ ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿದ ಬಗ್ಗೆ ನೆನಪು ಹಂಚಿಕೊಂಡಿದ್ದರು.

ಯಡಿಯೂರಪ್ಪ ಭೇಟಿ ಮಾಡಿಸಿದರು
‘ಆಗ ನಾನು ಜನತಾ ಪರಿವಾರದಲ್ಲಿ ಇದ್ದೆ. ಸಿಎಂ ಉದಾಸಿ ಅವರು ಒಂದು ದಿನ ನನ್ನನ್ನು ಹಾನಗಲ್ಲಿಗೆ ಕರೆಯಿಸಿಕೊಂಡರು. ಅಂದು ಅವರ ಹುಟ್ಟುಹಬ್ಬ. ಇಡೀ ದಿನ ಅವರು ನನ್ನನ್ನು ತಮ್ಮ ಜೊತೆ ಇರಿಸಿಕೊಂಡಿದ್ದರು. ಮರುದಿನ ಬೆಂಗಳೂರಿಗೆ ಕರೆದುಕೊಂಡು ಹೋದರು. ಬಿಜೆಪಿ ರಾಷ್ಟ್ರೀಯ ಮುಖಂಡ ರಾಜನಾಥ್ ಸಿಂಗ್ ಹಾಗೂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿದರು.‌ ಭಾರತೀಯ ಜನತಾ ಪಕ್ಷ ಸೇರುವಂತೆ ಸಲಹೆ ನೀಡಿದರು’ ಎಂದು ಬೊಮ್ಮಾಯಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಉದಾಸಿ ಅವರೇ ನನಗೆ ಗಾಡ್ ಫಾದರ್
‘ಆದರೆ ಆಗ ಬಿಜೆಪಿ ಸೇರಲು ಮಾನಸಿಕವಾಗಿ ನಾನು ಅಷ್ಟು ಸಿದ್ಧವಿರಲಿಲ್ಲ. ಆದರೂ ಆಗ ಅವರು ಬಿಜೆಪಿಗೆ ಬರುವಂತೆ ನನ್ನ ಮನಸ್ಸು ಒಲಿಸಿದರು. ಹೀಗಾಗಿ ನಾನು ಬಿಜೆಪಿಗೆ ಬರಲು ಸಿಎಂ ಉದಾಸಿ ಅವರೇ ಕಾರಣೀಭೂತ ವ್ಯಕ್ತಿ ಆದರು. ನನ್ನ ತಂದೆ ಎಸ್ ಆರ್ ಬೊಮ್ಮಾಯಿ ಅವರು ತೀರಿ ಕೊಂಡ ನಂತರ ಸಿಎಂ ಉದಾಸಿ ಅವರೇ ನನಗೆ ಗಾಡ್ ಫಾದರ್ ಆದರು’ ಎಂದು ಬೊಮ್ಮಾಯಿ ಸಿ. ಎಂ. ಉದಾಸಿ ನಿಧನರಾದ ಸಂದರ್ಭದಲ್ಲಿ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.

ಮಾರ್ಗದರ್ಶಕರನ್ನು ಕಳೆದುಕೊಂಡೆ
‘ಸಿಎಂ ಉದಾಸಿ ಅವರು ಇಷ್ಟು ಬೇಗ ನಮ್ಮನ್ನು ಆಗಲುತ್ತಾರೆ ಅಂದುಕೊಂಡಿರಲಿಲ್ಲ. ಮೊದಲ ಬಾರಿಗೆ ಅವರು ಇಲ್ಲದ ಸಂದರ್ಭದಲ್ಲಿ ಹಾನಗಲ್ಲಿಗೆ ಹೋದಾಗ ನನಗೆ ನನ್ನ ಭಾವನೆಗಳನ್ನು ತಡೆಯಲು ಆಗಲಿಲ್ಲ. ಅವರ ನಿಧನದಿಂದ ವೈಯಕ್ತಿಕವಾಗಿ ನನಗೆ ತುಂಬಲಾರದ ಹಾನಿಯಾಗಿದೆ. ಅವರ ಮತ್ತು ನನ್ನ ಸಂಬಂಧ ಬಹಳ ಅನ್ಯೂನ್ಯವಾಗಿತ್ತು. ಅವರ ನಿಧನದಿಂದಾಗಿ ಒಬ್ಬ ಮಾರ್ಗದರ್ಶಕ ಹಾಗೂ ತಂದೆಯನ್ನು ಕಳೆದುಕೊಂಡ ಭಾವ ನನ್ನಲ್ಲಿ ಬರುತ್ತಿದೆ’ ಎಂದು ಸಿ. ಎಂ. ಉದಾಸಿ ಜೊತೆಗಿನ ಒಡನಾಟ ನೆನಪು ಮಾಡಿಕೊಂಡಿದ್ದಾರೆ.

ಹಾವೇರಿ ಜಿಲ್ಲಾ ರಚನೆ ಹೋರಾಟ
‘ಉದಾಸಿ ಅವರದು ಹೋರಾಟದ ಗುಣ. ತಮ್ಮ ವಿಚಾರಧಾರೆಗಳೊಂದಿಗೆ ಅವರು ಎಂದೂ ರಾಜಿ ಆಗಲಿಲ್ಲ . ಯಾವುದಾದರೂ ವಿಷಯಕ್ಕೆ ಅವರು ಬಿಗಿ ನಿಲುವು ತೆಗೆದುಕೊಂಡರೆ, ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಧೀಮಂತ ನಾಯಕ. ಹಾವೇರಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂಬ ಹೋರಾಟದಲ್ಲಿ ಅವರದು ಬಹುದೊಡ್ಡ ಪಾತ್ರ. ಜಿಲ್ಲಾ ಹೋರಾಟಕ್ಕೆ ಆಧಾರವಾಗಿದ್ದರು ಅವರು‌. ಹೀಗಾಗಿ ಬಹುದಿನಗಳ ನಮ್ಮೆಲ್ಲರ ಕನಸು ಈಡೇರಿಸಿದ ಕೀರ್ತಿ ಉದಾಸಿ ಅವರಿಗೆ ಸಲ್ಲುತ್ತದೆ’ ಎಂದು ಬೊಮ್ಮಾಯಿ ಹಳೆಯ ನೆನಪು ಹಂಚಿಕೊಂಡಿದ್ದಾರೆ.

ಕ್ರಾಂತಿಯನ್ನು ಮಾಡಿದ್ದಾರೆ
‘ಬೆಳೆ ವಿಮೆ ಕುರಿತು ಸಿಎಂ ಉದಾಸಿ ಅವರು ಅಪಾರ ಜ್ಞಾನವನ್ನು ಹೊಂದಿದ್ದರು. ಹಾವೇರಿ ಜಿಲ್ಲೆಯ ರೈತರಿಗೆ ಬೆಳೆ ವಿಮೆಯ ಲಾಭವನ್ನು ಮಾಡಿಕೊಡುವ ಕೆಲಸವನ್ನು ಅವರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಕೃಷಿ ಬಗ್ಗೆ ಅವರು ಅಪಾರವಾದ ಆಸಕ್ತಿಯನ್ನು ಹೊಂದಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಲೋಕೋಪಯೋಗಿ ಇಲಾಖೆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಲೋಕೋಪಯೋಗಿ ಸಚಿವರಾಗಿದ್ದ ಉದಾಸಿ ಅವರು ರಾಜ್ಯದಲ್ಲಿ ರಸ್ತೆ ನಿರ್ಮಾಣದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ’ ಎಂದು ಬೊಮ್ಮಾಯಿ ಹಿಂದಿನ ದಿನಗಳ ನೆನಪು ಮಾಡಿಕೊಂಡಿದ್ದಾರೆ

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!