ಮೂರನೇ ಅಲೆಯ ಮುನ್ಸೂಚನೆಯೇ..? ಕೇರಳದಲ್ಲಿ ಒಂದೇ ದಿನ 22,000 ಪಾಸಿಟಿವ್​ ಕೇಸ್​​ ಪತ್ತೆ

ಕೇರಳ : ದೇಶದಲ್ಲಿ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವ ಕಾರ್ಯದಲ್ಲಿ ಕೇರಳ ಸರ್ಕಾರ ಅನುಸರಿಸಿದ ಕ್ರಮಗಳ ಬಗ್ಗೆ ದೇಶಾದ್ಯಂತ ಮೆಚ್ಚುಗೆಗೆ ಕಾರಣವಾಗಿತ್ತು. ಆದರೆ ಕೊರೊನಾ ಎರಡನೇ ಅಲೆಯ ಪ್ರಕರಣಗಳು ಇಂದು ದೇಶಾದ್ಯಂತ ಕಡಿಮೆಯಾಗುತ್ತಿದ್ದರೆ, ಕೇರಳದಲ್ಲಿ ಮಾತ್ರ ದೇಶದ ಶೇ.40 ರಷ್ಟು ಪಾಸಿಟಿವ್​​ ಪ್ರಕರಣಗಳು ವರದಿಯಾಗುತ್ತಿವೆ.


ಕೇರಳದಲ್ಲಿ ಮಂಗಳವಾರ ಒಂದೇ ದಿನ 22,129 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ದರ 12ಕ್ಕೇರಿದೆ. ಕಳೆದ 50 ದಿನಗಳಲ್ಲಿ ಒಂದೇ ದಿನ 20 ಸಾವಿರಕ್ಕೂ ಹೆಚ್ಚು ಪಾಸಿಟಿವ್​ ವರದಿಯಾದ ರಾಜ್ಯದಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡಿದ್ದು, ಜೂನ್​ 06 ರಂದು ತಮಿಳುನಾಡಿನಲ್ಲಿ ಒಂದೇ ದಿನ 20 ಸಾವಿರ ಪ್ರಕರಣಗಳು ವರದಿಯಾಗಿತ್ತು.


ಇನ್ನು ಕೇರಳದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಶೇ.20.9 ಮಂದಿಗೆ ಎರಡು ಡೋಸ್ ಲಸಿಕೆಯನ್ನು ನೀಡಲಾಗಿದೆ. ಪಾಸಿಟಿವ್​ ಪ್ರಕರಣಗಳು ಹೆಚ್ಚಳವಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವೆ ವೀನಾ ಜಾರ್ಜ್​​, ಪಾಸಿಟಿವ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಅನಿರೀಕ್ಷಿತ ಸಂಗತಿ ಏನೂ ಇಲ್ಲ. ಇಂತಹದ್ದೇ ಟ್ರೆಂಡ್​​ಅನ್ನು ಕೋವಿಡ್ ಮೊದಲ ಅಲೆಯಲ್ಲೂ ಕಂಡು ಬಂದಿತ್ತು. ನಾವು ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.


ಆದರೆ ಸಚಿವೆ ವಿಶ್ವಾಸದ ಹೇಳಿಕೆಯ ಬಳಿಕವೂ ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಹೆಚ್ಚಿನ ಪಾಸಿಟಿವ್​​ ಪ್ರಕರಣಗಳು ವರದಿಯಾದರೇ ರೂಪಾಂತರಿ ವೈರಸ್​​ಗಳ ಸಂಖ್ಯೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಎಚ್ಚರ ವಹಿಸುವುದು ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!