ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ಆರಂಭ

ಕುಕ್ಕೆ ಶ್ರೀ ದೇವಳದ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಭಿಷೇಕ ಮುಂತಾದ ಸೇವೆಗಳು ಆರಂಭಗೊಳ್ಳಲಿದೆ. ಈ ಸೇವೆಯನ್ನು ನೆರವೇರಿಸುವ ಸೇವಾರ್ಥಿಗಳು ಕನಿಷ್ಠ ಕೊರೋನಾ ಪ್ರಥಮ ಡೋಸ್ ಲಸಿಕೆಯನ್ನು ಪಡೆದಿರಬೇಕು ಮತ್ತು ಆರ್‌.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ನಡೆಸಿದ ವರದಿಯನ್ನು ಹಾಜರು ಪಡಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಬೇಕು. ಈ ಸೇವೆಗಳ ಪ್ರತಿ ಟಿಕೇಟ್ ಕೇವಲ 2 ಭಕ್ತರಿಗೆ ಮಾತ್ರ ಸೇವೆಯಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿದೆ.

2 ಹಂತದಲ್ಲಿ 180 ಸರ್ಪಸಂಸ್ಕಾರ

ಇಷ್ಟರ ತನಕ ಒಂದು ಬ್ಯಾಚ್‌ನಲ್ಲಿ ನಡೆಯುತ್ತಿದ್ದ ಸರ್ಪಸಂಸ್ಕಾರ ಸೇವೆಯು ಗುರುವಾರದಿಂದ ಪ್ರತಿದಿನ ಎರಡು ಬ್ಯಾಚ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಒಂದನೇ ಸರದಿಯ ಸೇವೆ ಹಾಗೂ ಎರಡನೇ ಸರದಿಯ ಸೇವೆಯು 10 ಗಂಟೆಗೆ ಆರಂಭಗೊಳ್ಳಲಿದೆ. ಈಗಾಗಲೇ ಸುಮಾರು 6400 ಮಂದಿ ಭಕ್ತರು ಸರ್ಪಸಂಸ್ಕಾರ ಸೇವೆಗೆ ಆನ್‌ಲೈನ್ ನ ಮೂಲಕ ಮುಂಗಡ ಬುಕ್ ಮಾಡಿರುವ ಕಾರಣ ಇವರಿಗೆ ಪ್ರಥಮ ಆದ್ಯತೆಯನ್ನು ನೀಡಿ ದಿನ ಒಂದಕ್ಕೆ ತಲಾ ಎರಡು ಆವರ್ತನದಂತೆ ತಲಾ 90 ರಂತೆ ಒಟ್ಟು 180 ಸೇವೆಗಳಿಗೆ ಅವಕಾಶವನ್ನು ನೀಡಲಾಗಿದೆ.

4 ಸರದಿಯಲ್ಲಿ 240 ಆಶ್ಲೇಷ ಬಲಿ:

ಪ್ರತಿ ದಿನ 4 ಸರದಿಯಲ್ಲಿ ಒಟ್ಟು 240 ಭಕ್ತರಿಗೆ ಆಶ್ಲೇಷ ಬಲಿ ಸೇವೆಯನ್ನು ನೆರವೇರಿಸಲು ಅವಕಾಶವನ್ನು ಕಲ್ಪಿಸಲಾಗಿದೆ.ಬೆಳಗ್ಗೆ 6 ಗಂಟೆಯಿಂದ 7:30 ತನಕ, 8.15ರಿಂದ 9.30 ತನಕ, 9.45 ರಿಂದ 11.45ರ ತನಕ ಹಾಗೂ ಸಂಜೆ 5 ಗಂಟೆಯಿಂದ 6.30 ತನಕ ಈ ಸೇವೆಯು ನಡೆಯಲಿದೆ. ಪ್ರತಿ ಸರದಿಯಲ್ಲಿ 60 ಭಕ್ತರಂತೆ 4 ಸರದಿಯಲ್ಲಿ 240 ಭಕ್ತರು ಸೇವೆ ನೆರವೇರಿಸಲು ಅವಕಾಶವನ್ನು ನೀಡಲಾಗಿದೆ. ಪ್ರತಿ ಸೇವೆಗೆ 2 ಭಕ್ತರಿಗೆ ಮಾತ್ರ ಅವಕಾಶವನ್ನು ಕಲ್ಪಿಸಿದೆ. ಪ್ರತ್ಯೇಕವಾಗಿ ನಾಗಪ್ರತಿಷ್ಠೆ ಸೇವೆ ನೆರವೇರಿಸುವ ಭಕ್ತರಿಗೆ ದಿನ ಒಂದಕ್ಕೆ 25 ಸೇವಾ ರಶೀದಿಗೆ ಅವಕಾಶವನ್ನು ನೀಡಲಾಗಿದೆ. ಹಾಗೂ.ಪ್ರತಿ ದಿನ 3 ಭಕ್ತರಿಗೆ ಪಂಚಾಮೃತ ಮಹಾಭಿಷೇಕ ಸೇವೆಯನ್ನು ನೆರವೇರಿಸಲು ಅವಕಾಶ ನೀಡಲಾಗಿದೆ.

You May Also Like

error: Content is protected !!