ರಾಜಕೀಯಕ್ಕೆ ಅಂಬಿ ಪುತ್ರ ಅಭಿಷೇಕ್ : ಕ್ಷೇತ್ರ ಇದೇ ನೋಡಿ?

 ಮಂಡ್ಯ :  ಜನ ಬಯಸಿದರಷ್ಟೇ ರಾಜಕಾರಣಕ್ಕೆ ಬರುತ್ತೇನೆಯೇ ಹೊರತು ವೈಯಕ್ತಿಕವಾಗಿ ರಾಜಕಾರಣಕ್ಕೆ ಬರಲು ಯಾವುದೇ ಮನಸ್ಸಿಲ್ಲ. ಒಂದು ವೇಳೆ ರಾಜಕೀಯ ಪ್ರವೇಶಿಸಿದರೆ ಅಂದು ತಂದೆ ಅಂಬರೀಷ್‌ ಅವರ ತವರು ಕ್ಷೇತ್ರವಾದ ಮದ್ದೂರಿನಿಂದಲೇ ಎಂದು ಚಿತ್ರನಟ ಅಭಿಷೇಕ್‌ ಅಂಬರೀಶ್‌ ಹೇಳಿದರು.

ತಾಲೂಕಿನ ಹುಳಗನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ನನಗೆ ರಾಜಕಾರಣಕ್ಕೆ ಬರುವ ಆಸಕ್ತಿ ಇಲ್ಲ. ನನ್ನ ಆಸೆ ಚಿತ್ರರಂಗದ ಮೇಲಿದೆ. ಒಂದು ವೇಳೆ ಜಿಲ್ಲೆಯ ಜನತೆ ಮತ್ತು ನನ್ನ ತಂದೆಯ ಅಭಿಮಾನಿಗಳು, ಬೆಂಬಲಿಗರು ಬಯಸಿದಲ್ಲಿ ಮಾತ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಬೇಕೇ ಅಥವಾ ಬೇಡವೇ ಎನ್ನುವುದನ್ನು ಆಲೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು. ನನ್ನ ತಾಯಿ ಸುಮಲತಾ ಅಂಬರೀಷ್‌ ಈಗಾಗಲೇ ರಾಜಕಾರಣದಲ್ಲಿದ್ದು ಸಂಸದೆಯಾಗಿ ಮಂಡ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜನರೂ ಸಹ ಅವರ ಕೆಲಸ ಮೆಚ್ಚಿಕೊಂಡಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯ ಜನರ ಹಿತ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ಜನಪ್ರತಿನಿಧಿಗಳು ಜಿಲ್ಲೆಯ 7 ತಾಲೂಕುಗಳಿಗೂ ಬೇಕಿದೆ. ನಾನು ರಾಜಕೀಯ ಪ್ರವೇಶ ಮಾಡುವುದಾದರೆ ನನ್ನ ತಂದೆ ಅಂಬರೀಷ್‌ ಅವರ ತವರು ಕ್ಷೇತ್ರವಾದ ಮದ್ದೂರಿನಿಂದಲೇ ಪ್ರವೇಶ ಮಾಡುತ್ತೇನೆ ಎಂದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತಂತೆ ನನ್ನ ತಾಯಿ ಸಂಸದೆ ಸುಮಲತಾ ಅಂಬರೀಷ್‌ ಹೋರಾಟ ನಡೆಸುತ್ತಿದ್ದಾರೆ. ಅವರ ವಿರುದ್ಧ ಕೆಲವು ರಾಜಕಾರಣಿಗಳು ಟೀಕೆ -ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಒಂದು ಬಾರಿ ತಕ್ಕ ಉತ್ತರ ನೀಡಿದ್ದೇನೆ. ಪದೇ ಪದೆ ಈ ವಿಷಯವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!