ದೇಶದಲ್ಲಿರುವ 12 ಬಿಜೆಪಿ ಮುಖ್ಯಮಂತ್ರಿಗಳಲ್ಲಿ ನಾಲ್ವರು ವಲಸಿಗರು

ದೇಶದಲ್ಲಿ ಬಿಜೆಪಿ ಪಕ್ಷವು ತನ್ನ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್ ನಿಂದ (RSS) ಬಂದವರಿಗಷ್ಟೇ ಸಿಎಂ ಹುದ್ದೆ ಸೇರಿದಂತೆ ಉನ್ನತ ಹುದ್ದೆ ನೀಡುತ್ತದೆ ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ದೇಶದಲ್ಲಿ 12 ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳಿದ್ದಾರೆ. ಆದರೆ, ಇವರಲ್ಲಿ ನಾಲ್ಕು ಮಂದಿ ಬೇರೆ ಪಕ್ಷದ ಹಿನ್ನಲೆಯಿಂದ ಬಂದವರು. ಜೊತೆಗೆ ಕೇಂದ್ರ ಕ್ಯಾಬಿನೆಟ್ ನಲ್ಲೂ ವಲಸಿಗರಿಗೆ ಮಂತ್ರಿ ಪದವಿ ನೀಡಿದೆ.

ಬಿಜೆಪಿಯ 12 ಸಿಎಂಗಳ ಪೈಕಿ ನಾಲ್ವರು ವಲಸಿಗರು
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್.) ಬೇರೆ ಬೇರೆ ಸಂಘಟನೆಗಳನ್ನು ಹೊಂದಿದೆ. ವನ ಭಾರತಿ, ವಿಶ್ವ ಹಿಂದೂ ಪರಿಷತ್, ವಿದ್ಯಾಭಾರತಿ, ಭಾರತೀಯ ಕಿಸಾನ್ ಮಜ್ದೂರ್ ಸಂಘ ಸೇರಿದಂತೆ ಅನೇಕ ಸಂಘಟನೆಗಳನ್ನ ಹೊಂದಿದೆ. ಇವುಗಳ ಪೈಕಿ ರಾಜಕೀಯ ಸಂಘಟನೆಯೇ ಭಾರತೀಯ ಜನತಾ ಪಕ್ಷ. ಬಿಜೆಪಿ ಪಕ್ಷದಲ್ಲಿ ಉನ್ನತ ಹುದ್ದೆ, ಸ್ಥಾನಮಾನ ಸಿಗಬೇಕೆಂದರೇ, ಆರ್‌.ಎಸ್.ಎಸ್ ಹಿನ್ನಲೆಯಿಂದ ಬಂದಿರಬೇಕು. ಅಂಥವರಿಗೆ ಮಾತ್ರವೇ ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ಉನ್ನತ ಹುದ್ದೆ ಸಿಗುತ್ತೆ ಎಂಬ ಲೆಕ್ಕಾಚಾರ, ವಿಶ್ಲೇಷಣೆ ನಡೆಯುತ್ತಿತ್ತು. ಆದರೆ, ಈಗ ಇತ್ತೀಚಿನ ವರ್ಷಗಳಲ್ಲಿ ಸಂಘ ಪರಿವಾರದ ಸಂಘಟನೆಗಳ ಹಿನ್ನಲೆ ಇಲ್ಲದೇ ಇದ್ದರೂ, ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ಉನ್ನತ ಹುದ್ದೆ ನೀಡಲಾಗುತ್ತಿದೆ. ಇದು ಬಿಜೆಪಿಯೊಳಗಾಗಿರುವ ಬದಲಾವಣೆ.

ದೇಶದಲ್ಲಿ ಈಗ 12 ರಾಜ್ಯಗಳಲ್ಲಿ ಬಿಜೆಪಿಯ ಮುಖ್ಯಮಂತ್ರಿಗಳಿದ್ದಾರೆ. ಈ 12 ಮಂದಿಯ ಪೈಕಿ ನಾಲ್ವರು ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದಿರುವವರು. ಸಂಘ ಪರಿವಾರದ ಹಿನ್ನಲೆ ಇಲ್ಲದೇ ಇದ್ದರೂ ನಾಲ್ವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿ ಹೈಕಮಾಂಡ್ ನೀಡಿರುವುದು ವಿಶೇಷ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳನ್ನು ಮಾತ್ರ ಬೇರೆ ಪಕ್ಷಗಳಿಂದ ಬಿಜೆಪಿ ಕರೆ ತಂದಿಲ್ಲ. ಈಗ ಸಿಎಂಗಳನ್ನು ಬೇರೆ ಪಕ್ಷದಿಂದ ಕರೆ ತಂದಿದೆ. ಹೀಗೆ ಬೇರೆ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಬಂದು ಸಿಎಂ ಹುದ್ದೆಗೇರಿದ ನಾಲ್ವರಲ್ಲಿ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಇದ್ದಾರೆ.

ಜನತಾ ಪರಿವಾರದಿಂದ ಬಂದು ಸಿಎಂ ಆದ ಬಸವರಾಜ ಬೊಮ್ಮಾಯಿ
ಜುಲೈ 28 ರಂದು ಕರ್ನಾಟಕದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ, ಮೂಲತಃ ಬಿಜೆಪಿ ನಾಯಕರಲ್ಲ. ಬಸವರಾಜ ಬೊಮ್ಮಾಯಿ ಜನತಾ ಪರಿವಾರದ ನಾಯಕರು. ಬಸವರಾಜ ಬೊಮ್ಮಾಯಿ ತಂದೆ ಎಸ್.ಆರ್‌.ಬೊಮ್ಮಾಯಿ ಜನತಾ ಪರಿವಾರದಿಂದ 1989 ರಲ್ಲಿ ಕರ್ನಾಟಕದಲ್ಲಿ 9 ತಿಂಗಳು ಕಾಲ ಮುಖ್ಯಮಂತ್ರಿಯಾಗಿದ್ದರು. ಬಸವರಾಜ ಬೊಮ್ಮಾಯಿ ಎರಡು ಬಾರಿ ಜನತಾದಳದಿಂದಲೇ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದಾದ ಬಳಿಕ 2004 ರಲ್ಲಿ ಜೆಡಿಯು ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರು. 2008ರ ವಿಧಾನಸಭೆ ಚುನಾವಣೆ ವೇಳೆಗೆ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷ ಸೇರಲು ಕೂಡ ಯತ್ನಿಸಿದ್ದರು. ಆಗ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದರು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆಗೆ ಟಿಕೆಟ್ ನೀಡಬೇಕೆಂದು ಕೇಳಿದ್ದರು. ಆದರೇ, ಕಾಂಗ್ರೆಸ್ ಪಕ್ಷ ಶಿಗ್ಗಾಂವ್ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲು ಸಿದ್ದವಿರಲಿಲ್ಲ. ಹೀಗಾಗಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಬಿಜೆಪಿ ಪಕ್ಷ ಸೇರಿದ್ದರು. ಶಿಗ್ಗಾಂವಿ ಕ್ಷೇತ್ರದಿಂದ 2008ರಿಂದ ಮೂರು ಬಾರಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಪಕ್ಷದಲ್ಲಿ ವಂಶಪಾರಂಪರ್ಯ ಆಳ್ವಿಕೆ ವಿರೋಧಿ ಸಿದ್ದಾಂತ ಇದೆ. ಆದರೆ, ಬಸವರಾಜ ಬೊಮ್ಮಾಯಿ ಕೂಡ ವಂಶಪಾರಂಪರ್ಯ ಆಳ್ವಿಕೆಯ ಕುಡಿ, ಫಲಾನುಭವಿ. ಆದರೂ, ಇದ್ಯಾವುದನ್ನ ಈಗ ಪರಿಗಣನೆಗೆ ತೆಗೆದುಕೊಳ್ಳದೇ ಬಿಜೆಪಿ ಹೈಕಮಾಂಡ್ , ಲಿಂಗಾಯತ ಸಮುದಾಯ ಅಸಮಾಧಾನಗೊಳ್ಳದಂತೆ ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಹುದ್ದೆ ನೀಡಿದೆ.

ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಮೂಲತಃ ಕಾಂಗ್ರೆಸ್ಸಿಗ
ಅರುಣಾಚಲ ಪ್ರದೇಶದಲ್ಲಿ ಈಗ ಬಿಜೆಪಿ ಪಕ್ಷದ ಸರ್ಕಾರ ಇದೆ. ಪೆಮಾ ಖಂಡು ಸಿಎಂ ಆಗಿದ್ದಾರೆ. ಆದರೇ, ಪೆಮಾ ಖಂಡು ಮೂಲತಃ ಬಿಜೆಪಿಗರಲ್ಲ. ಪೆಮಾ ಖಂಡು ತಂದೆ ದೋರ್ಜಿ ಖಂಡು ಕಾಂಗ್ರೆಸ್ ಪಕ್ಷದಿಂದ 2 ಬಾರಿ ಸಿಎಂ ಆಗಿದ್ದರು. 2011 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ದೋರ್ಜಿ ಖಂಡು ಸಾವನ್ನಪ್ಪಿದ್ದರು. ತಂದೆಯ ವಿಧಾನಸಭಾ ಕ್ಷೇತ್ರವಾದ ಮುಕ್ತವೋ ಕ್ಷೇತ್ರದಿಂದ ಪೆಮಾ ಖಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು.
2016ರಲ್ಲಿ ಕಾಂಗ್ರೆಸ್ ಪಕ್ಷದ ನಬಮ್ ಟುಕಿ ಸರ್ಕಾರವನ್ನೇ ಸುಪ್ರೀಂಕೋರ್ಟ್ ತನ್ನ ಆದೇಶದ ಮೂಲಕ ಮರುಸ್ಥಾಪಿಸಿತ್ತು. ಆದರೆ, ಕಾಂಗ್ರೆಸ್ ಶಾಸಕರೇ 2016ರ ಜುಲೈ ತಿಂಗಳಿನಲ್ಲಿ ಪೆಮಾ ಖಂಡುರನ್ನು ಸಿಎಂ ಆಗಿ ಆಯ್ಕೆ ಮಾಡಿಕೊಂಡರು. ಆದರೆ, 2 ತಿಂಗಳ ಬಳಿಕ 43 ಮಂದಿ ಶಾಸಕರೊಂದಿಗೆ ಪೆಮಾ ಖಂಡು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪಕ್ಷಕ್ಕೆ ಸಾಮೂಹಿಕವಾಗಿ ಪಕ್ಷಾಂತರ ಮಾಡಿದ್ದರು. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಬಳಿಕ ಪೆಮಾ ಖಂಡು, ಮತ್ತೆ 43 ಶಾಸಕರೊಂದಿಗೆ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಈಗ ಅರುಣಾಚಲ ಪ್ರದೇಶದ ಬಿಜೆಪಿ ಸಿಎಂ ಆಗಿದ್ದಾರೆ.

ಅರುಣಾಚಲ ಪ್ರದೇಶದ ಸಿಎಂ ಆಗಿದ್ದ ಗೆಗಾಂಗ್ ಅಪಾಂಗ್ ಕೂಡ ಮೂಲತಃ ಕಾಂಗ್ರೆಸ್ಸಿಗ. ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಪಕ್ಷದಿಂದ ಸಿಎಂ ಆಗಿದ್ದರು. ಈಗ ಬಿಜೆಿಪಿಯನ್ನು ತ್ಯಜಿಸಿ ಜೆಡಿಯು ಪಕ್ಷ ಸೇರಿದ್ದಾರೆ.

ಅಸ್ಸಾಂ ಸಿಎಂ ಹೀಮಂತ್ ಬಿಸ್ವಾ ಶರ್ಮಾ ಮೂಲತಃ ಕಾಂಗ್ರೆಸ್ಸಿಗ
ಮೇ ತಿಂಗಳಲ್ಲಿ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಹೀಮಂತ್ ಬಿಸ್ವಾ ಶರ್ಮಾ ಅಸ್ಸಾಂ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಹೀಮಂತ್ ಬಿಸ್ವಾ ಶರ್ಮಾ 2015ರ ಆಗಸ್ಟ್ ತಿಂಗಳವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ತರುಣ್ ಗೋಗೋಯಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದರು. ತರುಣ್ ಗೋಗೋಯಿಗೆ ಆಪ್ತ ಸಚಿವರಾಗಿದ್ದರು. ಆದರೆ, 2016ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಸಿಎಂ ಅಭ್ಯರ್ಥಿ ಮಾಡುವುದಿಲ್ಲವೆಂದು ಗೊತ್ತಾದ ಬಳಿಕ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು. 2016 ರಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸರ್ಬಾನಂದ ಸೋನವಾಲ್ ಸಿಎಂ ಹುದ್ದೆಗೇರಿದ್ದರು. ಈಗ 2021ರ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಬಹುಮತ ಸಿಕ್ಕಿದೆ. ಅಸ್ಸಾಂ ಮಾತ್ರವಲ್ಲದೇ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬರಲು ಶ್ರಮಿಸಿದ ಹೀಮಂತ್ ಬಿಸ್ವಾ ಶರ್ಮಾಗೆ ಬಿಜೆಪಿ ಹೈಕಮಾಂಡ್ ಸಿಎಂ ಹುದ್ದೆಯ ಬಹುಮಾನ ನೀಡಿದೆ.

ಮಣಿಪುರ ಸಿಎಂ ಬೀರೇನ್ ಸಿಂಗ್ ಕೂಡ ಮೂಲತಃ ಕಾಂಗ್ರೆಸ್ಸಿಗ
ಮಣಿಪುರದ ಹಾಲಿ ಸಿಎಂ ಬೀರೇನ್ ಸಿಂಗ್ ಕೂಡ ಮೂಲತಃ ಕಾಂಗ್ರೆಸ್ಸಿಗರು. ಮಣಿಪುರದ ಸಿಎಂ ಆಗಿದ್ದ ಒಕ್ರಾಂ ಇಬೋಬಿ ಸಿಂಗ್ ಜೊತೆ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು. ಕಾಂಗ್ರೆಸ್ ವಿರೋಧಿ ಅಲೆ ಬಳಸಿಕೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಯತ್ನ ನಡೆಸಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಬಿಜೆಪಿ ಪಕ್ಷವು ಮಿತ್ರ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ ಫ್ರಂಟ್ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಬೀರೇನ್ ಸಿಂಗ್ ಮಣಿಪುರದ ಸಿಎಂ ಆಗಿ ಆಳ್ವಿಕೆ ನಡೆಸುತ್ತಿದ್ದಾರೆ.

ಕೇಂದ್ರದ ಕ್ಯಾಬಿನೆಟ್ ನಲ್ಲೂ ವಲಸಿಗರಿದ್ದಾರೆ
ಇನ್ನೂ ಕೇಂದ್ರದ ಮೋದಿ ಕ್ಯಾಬಿನೆಟ್ ನಲ್ಲೂ ವಲಸಿಗ ಮಂತ್ರಿಗಳಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ, ನಾರಾಯಣ್ ರಾಣೆ ಬೇರೆ ಪಕ್ಷದಿಂದ ಬಿಜೆಪಿಗೆ ವಲಸೆ ಬಂದಿರುವವರು. ಇಬ್ಬರು ಈಗ ಮೋದಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳಾಗಿದ್ದಾರೆ. 2014ರ ಲೋಕಸಭೆ ಚುನಾವಣೆಗೂ ಮುನ್ನ ಬೇರೆ ಪಕ್ಷದಿಂದ ಸಾಕಷ್ಟು ಮಂದಿ ನಾಯಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಸಂಘ ಪರಿವಾರದ ಹಿನ್ನಲೆ ಇಲ್ಲದೇ ಇರುವ ಅನೇಕರಿಗೆ ಈಗ ಕೇಂದ್ರ, ರಾಜ್ಯಗಳಲ್ಲಿ ಉನ್ನತ ಹುದ್ದೆಗಳನ್ನು ನೀಡಿ, ತನ್ನವರನ್ನಾಗಿಯೇ ಮಾಡಿಕೊಳ್ಳುತ್ತಿದೆ. ಬಿಜೆಪಿಯಲ್ಲಿ ಪ್ರತಿಭಾವಂತರಿಗೆ ಕೊರತೆ ಇದೆ ಎಂಬ ಟೀಕೆ ಬಂದಾಗ, ನಿವೃತ್ತ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳನ್ನ ಬಿಜೆಪಿಗೆ ಸೇರಿಸಿಕೊಂಡು ಕೇಂದ್ರ ಮಂತ್ರಿ ಪದವಿಯನ್ನೇ ನೀಡಿದೆ. ಅಶ್ವಿನಿ ವೈಷ್ಣವ್, ಆರ್‌.ಕೆ.ಸಿಂಗ್. ಹರದೀಪ್ ಸಿಂಗ್ ಪುರಿ ಸೇರಿದಂತೆ ಇನ್ನೂ ಕೆಲವರು ಅಖಿಲ ಭಾರತ ನಾಗರಿಕ ಸೇವೆಯ ಹಿನ್ನಲೆ ಇರುವವರು. ಇವರೆಲ್ಲರೂ ಈಗ ಕೇಂದ್ರದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳಾಗಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!