ಕೊರೊನಾ 3ನೇ ಅಲೆ ಶುರುವಾಯ್ತಾ? ಅಪಾರ್ಟ್​​​ಮೆಂಟ್​​, ಸೀಲ್​​ಡೌನ್​​!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ತಗ್ಗಿದ್ದು ಇದರ ಬೆನ್ನಲ್ಲೇ 3ನೇ ಅಲೆ (corona 3rd wave ) ಆತಂಕ ಮನೆ ಮಾಡಿತ್ತು. ಆದರೆ ಹೊಸ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ಕೊರೊನಾ 3ನೇ ಅಲೆ ಆರಂಭವಾಗಿದೆಯಾ ಎಂಬ ಅನುಮಾನ ಶುರುವಾಗಿದೆ. ಕೊರೊನಾ ಹೊಸ ಪ್ರಕರಣ ಸಂಖ್ಯೆಯಲ್ಲಿ ದಿಢೀರ್​ ಏರಿಕೆ ಕಂಡು ಬಂದಿದೆ. ಇಂದು ರಾಜಧಾನಿಯ ಅಪಾರ್ಟ್​​ಮೆಂಟ್​ನಲ್ಲಿ ಕೊರೊನಾ ಸ್ಫೋಟವಾಗಿದ್ದು ಬಿಬಿಎಂಪಿ ಸೀಲ್​ಡೌನ್​ ಮೊರೆ ಹೋಗಿದೆ. ಯಶವಂತಪುರದಲ್ಲಿರುವ ಖಾಸಗಿ ಅಪಾರ್ಟ್ ಮೆಂಟನ್ನು ಸೀಲ್ ಡೌನ್ ಮಾಡಲಾಗಿದೆ.

ಪಾಲಿಕೆ ಪಶ್ಚಿಮ‌‌ ವಿಭಾಗದ ಅಪಾರ್ಟ್ ಮೆಂಟ್ ಒಂದರಲ್ಲಿ 16 ಕೇಸ್ ಪತ್ತೆಯಾಗಿದೆ. ಅಪಾರ್ಟ್​​ಮೆಂಟ್​ ನಿವಾಸಿಗಳಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಸೋಂಕು ನಿಯಂತ್ರಿಸಲು ಅಪಾರ್ಟ್ ಮೆಂಟ್ A ಬ್ಲಾಕನ್ನು ಸೀಲ್ ಡೌನ್ ಮಾಡಲಾಗಿದೆ. A ಬ್ಲಾಕ್‌ನ 72 ಮನೆಗಳು ಸೀಲ್ ಡೌನ್​ಗೆ ಒಳಪಟ್ಟಿವೆ. ಈ ಭಾಗದ ನಿವಾಸಿಗಳು ಕೆಲಸ‌, ಊರು ,ಟೂರು ಏನು ಮಾಡುವಂತಿಲ್ಲ, ಮನೆಯಲ್ಲಿ ಇರಲೇಬೇಕು, ಕಂಟೈನ್ ಮೆಂಟ್ ಆಗಲೇ ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧಾರವಾಡ ,ದೆಹಲಿಗೆ ಪ್ರಯಾಣ ಮಾಡಿ ವಾಪಸ್ ಆದವರಲ್ಲಿ ಕೊರೊನಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಕ್ಲಸ್ಟರ್ ಎಂದು ಗುರುತಿಸಿ ಸೀಲ್ ಡೌನ್ ಮಾಡಲಾಗಿದೆ. A ಬ್ಲಾಕ್​​ 72 ಮನೆಗಳ 385 ಜನರನ್ನು ಐಸೋಲೇಷನ್​ಗೆ ಒಳಪಡಿಸಲಾಗಿದೆ. ಎಲ್ಲರನ್ನು ಹೋಂ ಐಸೋಲೆಷನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ ಜವಾಬ್ದಾರಿ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಒಪ್ಪಿಕೊಂಡಿದೆ.

ಕೊರೊನಾ ಮತ್ತೆ ಉಲ್ಪಣಿಸಿರುವ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಹೇಳಿಕೆ ನೀಡಿದ ಫನಾ ಅಧ್ಯಕ್ಷ ಡಾ. ಪ್ರಸನ್ನ , ಕೊರೋನಾ ಮೂರನೇ ಅಲೆಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ನೇರವಾಗಿ ಆರೋಪಿಸಿದರು. ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿವೆ. ಮೊದಲ & ಎರಡನೇ ಅಲೆ ಎದುರಿಸಿ ಅನುಭವ ಇದ್ದರೂ ಮೂರನೇ ಅಲೆಯನ್ನು ತಡೆಗಟ್ಟಲು ಸಾಧ್ಯಾವಾಗ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಕದ ಕೇರಳ, ಮಹಾರಾಷ್ಟ್ರದಲ್ಲಿ ಕೊರೋನಾ ಸ್ಪೋಟಗೊಂಡಿದೆ. ಈ ನಡುವೆ ಬೆಂಗಳೂರು ಸೇರಿದಂತೆ ಗಡಿ ಭಾಗದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗ್ತಿದೆ. ಹೀಗಿದ್ರೂ ಸರ್ಕಾರ ಎಚ್ಚೆತ್ತುಕೊಳ್ಳದೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಲಸಿಕೆ ಹಂಚಿಕೆಯನ್ನೂ ಸೂಕ್ತ ರೀತಿಯಲ್ಲಿ ಮಾಡದೆ ನಿರ್ಲಕ್ಷ್ಯ ಮಾಡಿದೆ. ಕೊರೊನಾ ಮೂರ‌ನೇ ಅಲೆ ಆರಂಭದಲ್ಲಿ ಗಡಿ ಭಾಗದ ಜಿಲ್ಲೆಗಳಿಗೆ ವಿಶೇಷ ವೈದ್ಯಕೀಯ ತಂಡ ರಚಿಸಿ‌ ಕಳುಹಿಸಿಕೊಡಬೇಕು. ಕೊರೋನಾ ಪರೀಕ್ಷೆ ವರದಿ ಕೇವಲ ಕಡ್ಡಾಯ ಮಾಡುವುದಲ್ಲ, ತಪಾಸಣೆ ಮಾಡಿ ಪ್ರಯಾಣಿಕರಿಗೆ ನೆಗೆಟಿವ್ ಎಂದು ಖಚಿತ ಪಡಿಸಬೇಕು. ಇದ್ಯಾವುದನ್ನೂ ಮಾಡದೆ ಸಭೆ ಮಾಡಿ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಿ ಎಂದು ಜನರಿಗೆ ಹೇಳಿದರೆ ನಡೆಯುವುದಿಲ್ಲ

ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಆಗಸ್ಟ್ ಮಧ್ಯಕ್ಕೆ ಕೊರೋ‌ನಾ ಮೂರ‌ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಇನ್ನೇನು ಕೆಲವೇ ದಿನಗಳು ಬಾಕಿ, ಅದರ ಮುನ್ಸೂಚನೆ ಇದು ಎಂದು ಭಾಸವಾಗುತ್ತಿದೆ ಎಂದು ಎಚ್ಚರಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!