ಹಬ್ಬಗಳ ಹರಿದಿನಕ್ಕೆ ಕೊರೋನಾ ಕರಿನೆರಳು: ಸರ್ಕಾರದಿಂದ ಮಹತ್ವ ನಿರ್ಧಾರ?

ರಾಜ್ಯದಾದ್ಯಂತ ಇನ್ನು ಕೆಲವೇ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗಲಿವೆ. ಪ್ರಮುಖವಾಗಿ ವರಮಹಾಲಕ್ಷ್ಮೀ, ಗಣೇಶ ಚತುರ್ಥಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಎಲ್ಲಿಲ್ಲದ ಸಡಗರ, ಸಂಭ್ರಮ. ಆದರೆ, ಕೋವಿಡ್ 3ನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಹಬ್ಬ ಹಾಗೂ ಉತ್ಸವಗಳನ್ನು ಸರಳವಾಗಿ ಆಚರಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ನಡುವೆ ಆರೋಗ್ಯ ತಜ್ಞರೂ ಕೂಡ ಸಾಕಷ್ಟು ಎಚ್ಚರಿಕೆ ವಹಿಸುವಂತೆ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಹೆಚ್ಚೆಚ್ಚು ಜನರು ಒಂದೆಡೆ ಸೇರುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ರೀತಿಯಾಗಿದ್ದೇ ಆದರೆ, 2ನೇ ಅಲೆಯ ಪರಿಸ್ಥಿತಿ ಮತ್ತೊಮ್ಮೆ ಬಂದೊದಗಿಲಿದೆ ಎಂದು ಎಚ್ಚರಿಸುತ್ತಿದ್ದಾರೆ.

ಸಂಭ್ರಮವನ್ನಾಚರಿಸಲು ಹೆಚ್ಚೆಚ್ಚು ಜನರು ಸೇರುವಂತೆ ಮಾಡಿದ್ದೇ ಆದರೆ, ಈ ಹಬ್ಬಗಳೇ ಸೂಪರ್ ಸ್ಪ್ರೆಡರ್ ಸಂದರ್ಭಗಳಾಗಬಹುದು ಎಂದು ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಎಚ್ಚರಿಸಿದ್ದಾರೆ. ದೇವಾಲಯಗಳಲ್ಲಿ ಹಾಗೂ ಇತರೆ ಪ್ರದೇಶಗಳಲ್ಲಿ ನಡೆಯುವ ಉತ್ಸವಗಳ ಮೇಲೆ ನಿರ್ಬಂಧಗಳನ್ನು ಹೇರುವ ಅಗತ್ಯವಿದೆ. ಹಬ್ಬಗಳ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವುದು ಆಯಾ ಉಪ ಆಯುಕ್ತರ ಜವಾಬ್ದಾರಿಯಾಗಿರುತ್ತದೆ. ಉತ್ಸವಗಳಿಗೆ ಅನುಮತಿ ನೀಡಿ ಕಡಿಮೆ ಸಂಖ್ಯೆಯಲ್ಲಿ ಜನರು ಸೇರಬೇಕೆಂದು ನಿಯಮ ಹೇರುವುದು ಯಾವುದೇ ಕೆಲಸ ಮಾಡುವುದಿಲ್ಲ. ಏಕೆಂದರೆ, ಇಂತಹ ಸಂದರ್ಭದಲ್ಲಿ ಖಂಡಿತವಾಗಿಯೂ ಜನರು ನಿಯಮಗಳನ್ನು ಉಲ್ಲಂಘಿಸುತ್ತಾರೆ. ಪ್ರಮುಖವಾಗಿ ಗ್ರಾಮಗಳ ಉತ್ಸವ ಸಂದರ್ಭದಲ್ಲಿ 10-15 ಗ್ರಾಮಸ್ಥರು ಒಂದೆಡೆ ಸೇರುತ್ತಾರೆ. ಹೀಗಾಗಿ ಇಂತಹ ಉತ್ಸವಗಳಿಗೆ ಅನುಮತಿ ನೀಡಬಾರದು. ಅದಷ್ಟೇ ಅಲ್ಲದೆ, ರಾಜಕೀಯ ಪ್ರಚಾರ ಕಾರ್ಯಗಳಿಗೂ ನಿರ್ಬಂಧ ಹೇರುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಶೇ.2ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ನಾವು ಯಾವುದೇ ರೀತಿಯ ಹಬ್ಬಗಳು, ಜಾತ್ರೆಗಳು, ಪೂಜೆಗಳು ಮತ್ತು ಸಾರ್ವಜನಿಕ ಸಭೆಗಳ ನಡೆಸಲು ಶಿಫಾರಸು ಮಾಡಿಲ್ಲ. ಆದರೆ, ಜನರು ತಮ್ಮ ತಮ್ಮ ಮನೆಗಳಲ್ಲಿ ಆಚರಿಸಬಹುದಾಗಿದೆ. ನೆರೆ ರಾಜ್ಯಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ಜನರು ಬಹಳ ಎಚ್ಚರಿಕೆಯಿಂದ ಇರಬೇಕಿದೆ ಎಂದು ಹೇಳಿದ್ದಾರೆ.

ಜನರಿಗೆ ಲಸಿಕೆ ನೀಡುವಿಕೆಯಲ್ಲಿ ರಾಜ್ಯ ಉತ್ತಮ ಸ್ಥಿತಿಯಲ್ಲಿದೆ. ಈ ಕಾರಣದಿಂದ ಕೊರೋನಾ 3ನೇ ಅಲೆ ಪರಿಣಾಮ ಅಷ್ಟಾಗಿ ಬೀರುವುದಿಲ್ಲ ಎಂಬ ವಿಶ್ವಾಸವಿದೆ. ಹಬ್ಬಗಳು, ರ್ಯಾಲಿಗಳ ಮೇಲೆ ನಿಷೇಧ ಹೇರುವುದರ ಜೊತೆಗೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವುದನ್ನೂ ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 10ರವರೆಗೂ ಸಾರ್ವಜನಿಕ ಸಭೆಗಳ ಮೇಲೆ ನಿಷೇಧ ಹೇರಲಾಗಿದೆ. ಇದಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಅಂತರ್ ರಾಜ್ಯ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!