ತುಮಕೂರು ಜಿಲ್ಲೆ ಪ್ರವೇಶಕ್ಕೆ ಕೋವಿಡ್‌ ವರದಿ ಕಡ್ಡಾಯ

ತುಮಕೂರು: ಕೇರಳ, ಮಹಾರಾಷ್ಟ್ರ ರಾಜ್ಯಗಳಿಂದ ಜಿಲ್ಲೆಗೆ ಬರುವವರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಮಾಡಲಾಗಿದ್ದು, ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದಿಂದ ಬರುವವರೂ ಕೋವಿಡ್ ವರದಿ ಹೊಂದಿರುವುದನ್ನು ಕಡ್ಡಾಯ ಮಾಡಲು ಜಿಲ್ಲಾ ಆಡಳಿತ ಮುಂದಾಗಿದೆ

ಕೋವಿಡ್ ಮೂರನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಈಗಾಗಲೇ ಕೆಲವು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತೊಂದು ಸುತ್ತಿನ ಸಭೆ ನಡೆಸಿ ಚರ್ಚಿಸಿದ ನಂತರ ಆಂಧ್ರದ ಗಡಿ ಭಾಗದಿಂದ ಜಿಲ್ಲೆಗೆ ಬರುವವರಿಗೆ ಕೋವಿಡ್ ವರದಿ ಕಡ್ಡಾಯ ಮಾಡಲಾಗುತ್ತದೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಜಿಲ್ಲೆಯಲ್ಲೂ ಕೆಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕಳೆದ ಒಂದು ವಾರದ ಅಂಕಿ ಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ ಪ್ರಮಾಣ ತೀವ್ರ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಈ ವಾರದಲ್ಲಿ ಯಾವ ದಿನವೂ ಕೊರೊನಾ ಸೋಂಕಿತರ ಸಂಖ್ಯೆ 100ರ ಗಡಿಯನ್ನು ದಾಟಿಲ್ಲ. ಸಾವಿನ ಪ್ರಮಾಣವೂ ದಿನಕ್ಕೆ ಒಂದು–ಎರಡು ಇದೆ. ಮೂರು ದಿನ ಯಾರೊಬ್ಬರೂ ಸಾವನ್ನಪ್ಪಿಲ್ಲ. ಹಾಗಾಗಿ ಸ್ವಲ್ಪ ಮಟ್ಟಿಗೆ ಸೋಂಕು ಹರಡುವುದು ನಿಯಂತ್ರಣದಲ್ಲಿ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಾದಿದೆ ಎಂದು ಹೇಳಲಾಗುತ್ತಿದೆ.

ಆಮ್ಲಜನಕ ಘಟಕ: ಎರಡನೇ ಅಲೆ ಸಮಯದಲ್ಲಿ ಪ್ರಮುಖವಾಗಿ ಕಾಡಿದ್ದ ಆಮ್ಲಜನಕ ಕೊರತೆ ನೀಗಿಸುವ ಕೆಲಸಗಳು ನಡೆದಿವೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿವೆ. ಆದರೆ ಜಿಲ್ಲಾ ಕೇಂದ್ರದಲ್ಲೇ ಈ ಕೆಲಸ ಚುರುಕಾಗಿಲ್ಲ. ಜಿಲ್ಲಾ ಆಸ್ಪತ್ರೆ ಆವರಣದ ಬಳಿ ಒಂದು ಸಾವಿರ ಎಲ್‌ಪಿಎಂ ಸಾಮರ್ಥ್ಯದ ಎರಡು ಘಟಕಗಳನ್ನು ನಿರ್ಮಾಣ ಮಾಡುತ್ತಿದ್ದು, ಕೆಲಸ ಪೂರ್ಣಗೊಂಡಿಲ್ಲ. ಒಎನ್‌ಜಿಸಿ ನೇತೃತ್ವದಲ್ಲಿ ನಿರ್ಮಿಸುತ್ತಿರುವ ಘಟಕದ ಕಾಮಗಾರಿ ಎರಡು ವಾರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಪಿಎಂ ಕೇರ್‌ ವತಿಯಿಂದ ನಿರ್ಮಿಸುತ್ತಿರುವ ಘಟಕದ ಕೆಲಸ ಒಂದು ವಾರದಲ್ಲಿ ಮುಗಿಯುವ ಸಾಧ್ಯತೆಗಳಿವೆ.

ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ ಪ್ರಮಾಣ ಕಡಿಮೆ ಇರುವುದರಿಂದ ಆತಂಕಪಡುವ ಆಗತ್ಯವಿಲ್ಲ. ಆದರೆ ಮೂರನೇ ಅಲೆ ತಡೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ ಕೆಲಸವೂ ಚುರುಕಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

You May Also Like

error: Content is protected !!