ನೀರಜ್ ಚೋಪ್ರಾ ಕೋಚರ್ ಗೆ ಸರ್ಕಾರ 10 ಲಕ್ಷ ನಗದು ಬಹುಮಾನ

ಜಾವಲಿನ್ ಎಸೆತ ತರಬೇತಿ ನೀಡಿದ ಶಿರಸಿಯ ಕಾಶೀನಾಥ್ ನಾಯ್ಕ್ ಅವರಿಗೆ ನಗದು ಬಹುಮಾನ ಘೋಷಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್​​ನ-2020ನಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾಗೆ ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಕನ್ನಡಿಗನ ಪಾತ್ರವೂ ಇದೆ. ಚೋಪ್ರಾಗೆ ತರಬೇತಿ ನೀಡಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಶೀನಾಥ್. 2010 ರ ಕಾಮನ್​ ವೆಲ್ತ್​‌ನಲ್ಲಿ ಕಾಶೀನಾಥ್ ಜಾವಲಿನ್ ಥ್ರೋದಲ್ಲಿ ಕಂಚಿನ ಪದಕ‌ ಗಳಿಸಿದ್ದರು. ಅತ್ಯುತ್ತಮ ಕ್ರೀಡಾ ಸಾಧಕ ಕಾಶೀನಾಥ್ ಗರಡಿಯಲ್ಲಿ ಪಳಗಿದ ನೀರಜ್ ಸ್ವರ್ಣ ಪದಕ ಗಳಿಸಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಇಂತಹ ಸಾಧನೆಗೆ ಬೆನ್ನೆಲುಬಾದ ಕನ್ನಡಿಗ ಕಾಶೀನಾಥ್ ನಾಯ್ಕ್ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರೂ. 10 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

ದೇಶದ ಕ್ರೀಡಾ ಸಾಧಕರಿಗೆ ಸನ್ಮಾನ:

ಟೋಕಿಯೊ ಒಲಿಪಿಂಕ್ಸ್​​ನಲ್ಲಿ ಅಮೋಘ ಸಾಧನೆಗೈದ ಭಾರತದ 7 ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸಲಾಗುವುದು. ಈಗಾಗಲೇ ಸಿಎಂ ಜೊತೆ ಚರ್ಚೆ ನಡೆಸಿರುವ ಸಚಿವ ಡಾ. ನಾರಾಯಣ ಗೌಡ ಅವರು, ಎಲ್ಲ ಕ್ರೀಡಾಪಟುಗಳನ್ನು ಆಹ್ವಾನಿಸಿ ಗೌರವಿಸಲು ತೀರ್ಮಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ತರಬೇತುದಾರ ಕಾಶೀನಾಥ್ ಅವರನ್ನು ಸನ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ

ಒಲಿಂಪಿಕ್ಸ್​ ಕ್ರೀಡಾಪಟುಗಳಿಗೆ ಗೌರವ:

ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುವುದೂ ಒಂದು ದೊಡ್ಡ ಸಾಧನೆಯೆ ಆಗಿದೆ. ಟೋಕಿಯೋ ಓಲಿಂಪಿಕ್​ನಲ್ಲಿ ಮೂವರು ಕನ್ನಡಿಗರು ಪಾಲ್ಗೊಂಡು ಉತ್ತಮ ಸಾಧನೆ ತೋರಿದ್ದಾರೆ. ಪದಕ ಗಳಿಸಿದ ಕ್ರೀಡಾ ಸಾಧಕರನ್ನು ಗೌರವಿಸಿದಂತೆಯೇ ರಾಜ್ಯದ ಹೆಮ್ಮೆಯ ಕ್ರೀಡಾಪಟುಗಳಾದ ಅದಿತಿ ಅಶೋಕ್, ಶ್ರೀಹರಿ ನಟರಾಜ್, ಫವಾದ್ ಮಿರ್ಜಾ ಅವರನ್ನೂ ಸನ್ಮಾನಿಸಲಾಗುವುದು‌ ಎಂದು ಸಚಿವ ಡಾ. ನಾರಾಯಣ ಗೌಡ ಹೇಳಿದ್ದಾರೆ.

You May Also Like

error: Content is protected !!