ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಧಾನಮಂಡಲ ಅಧಿವೇಶನ

ಬೆಂಗಳೂರು: ಸೆಪ್ಟೆಂಬರ್ ಮೊದಲ ವಾರದಿಂದ 10 ದಿನಗಳ ಕಾಲ ವಿಧಾನ ಸೌಧದಲ್ಲೇ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸುವಂತೆ ವಿವಿಧ ಭಾಗಗಳಿಂದ ಆಗ್ರಹಗಳು ಕೇಳಿಬರುತ್ತಿದ್ದು, ಕೋವಿಡ್-19ರ ಹಿನ್ನೆಲೆಯಲ್ಲಿ ಸರ್ಕಾರ ಅಧಿವೇಶನವನ್ನು ವಿಧಾನಸೌಧದಲ್ಲೇ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಬಜೆಟ್ ಅಧಿವೇಶನ ಆ ತಿಂಗಳ ಅಂತ್ಯದವ ರೆಗೂ ನಡೆಯಬೇಕಿತ್ತು. ಆದರೆ ಕೋವಿಡ್ ಸೋಂಕು ಏರಿಕೆಯಾದ ಹಿನ್ನೆಲೆ ಯಲ್ಲಿ ಮಾರ್ಚ್ 24ಕ್ಕೆ ಮುಕ್ತಾಯ ಗೊಳಿಸ ಲಾಗಿತ್ತು. ಸಂವಿಧಾನ 174ನೇ ನಿಯಮದ ಪ್ರಕಾರ ಆರು ತಿಂಗಳಿಗೊಮ್ಮೆ ಅಧಿವೇಶನ ನಡೆಸಬೇಕಿದೆ. ಹೀಗಾಗಿ ಸರ್ಕಾರ ಸೆಪ್ಟೆಂಬರ್ 24ರೊಳಗಾಗಿ ಅಧಿವೇಶನ ನಡೆಸಲು ಉದ್ದೇಶಿಸಿದ್ದು, ಸೆಪ್ಟೆಂಬರ್ 6 ಅಥವಾ ಎರಡನೇ ವಾರದಲ್ಲಿ ಅಧಿವೇಶನ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅಧಿವೇಶನದ ದಿನಾಂಕ ಮತ್ತು ವೇಳಾಪಟ್ಟಿಯನ್ನು ಸಂಪುಟ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.ಎಲ್ಲಾ ಕೋವಿಡ್ -19 ನಿಯಮಗಳನ್ನು ಅನುಸರಿಸುವ ಮೂಲಕ ಅಧಿವೇಶನ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಧುಸ್ವಾಮಿ ತಿಳಿಸಿದ್ದಾರೆ.

ಇದನ್ನು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಮತ್ತು ಮುಂದಿನ ವಾರದ ವೇಳೆಗೆ ಅದನ್ನು ಸಂಪುಟದ ಮುಂದೆ ಅನುಮೋದನೆಗೆ ಇರಿಸಲಾಗುತ್ತದೆ. ಕೋವಿಡ್ -19 ಪರಿಸ್ಥಿತಿಗೆ ಅವಲಂಬಿಸಿ ಅಧಿವೇಶನದ ದಿನಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.

ಇದಕ್ಕೂ ಮುನ್ನ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಲು ಬಾಕಿ ಇರುವ ಮಸೂದೆಗಳ ವಿವರಗಳ ಕುರಿತು ಇಲಾಖೆ ಇನ್ನೂ ಮಾಹಿತಿ ಪಡೆದುಕೊಂಡಿಲ್ಲ ಎಂದು ತಿಳಿಸಿದರು.ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರಿಗೆ ಇದು ಮೊದಲನೇ ಅಧಿವೇಶನವಾಗಿದೆ. ಈ ಬಾರಿಯ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸಾಂಕ್ರಾಮಿಕ ರೋಗದ ನಿರ್ವಹಣೆ, ಲಸಿಕೆ ಕೊರತೆ, ಪ್ರವಾಹ ಪರಿಸ್ಥಿತಿ ಹಾಗೂ ಇತರೆ ಹಲವಾರು ಸಮಸ್ಯೆಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

You May Also Like

error: Content is protected !!