ಇಂದಿರಾ ಬದಲು ಮಹರ್ಷಿ ವಾಲ್ಮೀಕಿ ಅನ್ನಕುಟೀರ

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಚರ್ಚೆ ನಿಲ್ಲುವಂತೆ ಕಾಣುತ್ತಿಲ್ಲ. ಜೊತೆಗೆ ರಾಜ್ಯ ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೆ ಬಂದಿದ್ದ ಯೋಜನೆಯ ಹೆಸರು ಬದಲಾಯಿಸುವುದು ಬಹುತೇಕ ಖಚಿತವಾದಂತೆ ಕಾಣುತ್ತಿದೆ. ಶುಕ್ರವಾರವೂ ಬಹುತೇಕ ಸಚಿವರು ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನೇರವಾಗಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಮಾತನಾಡದಿದ್ದರೂ, ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಹಾಕಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ತೀರ್ಮಾನ ಅಂತಿಮ ಎಂದಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ತೀರ್ಮಾನ ಅಂತಿಮವಾಗಿದ್ದು, ಅದು ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎನ್ನಲಾಗಿದೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರದ ಬಗ್ಗೆ ಗುರುವಾರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ವಾಗ್ಯುದ್ಧವೇ ನಡೆದಿದೆ. ಯಾವುದಾರೂ ಬಾರ್‌ಗೆ ಇಂದಿರಾ ಅಂತಾ ಹೆಸರಿಟ್ಟುಕೊಳ್ಳಲಿ ಎಂದು ಗುರುವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದ್ದರು. ಅದಕ್ಕೆ ಕಾಂಗ್ರೆಸ್ ನಾಯಕರು ಪ್ರತ್ಯುತ್ತರ ಕೊಟ್ಟಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, “ಹುಕ್ಕಾ ಬಾರ್, ಗಾಂಜಾ, ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ ರವಿ ಹಾಗೂ ಬಿಜೆಪಿಯವರ ಸಂಸ್ಕೃತಿ” ಎಂದು ತಿರುಗೇಟು ಕೊಟ್ಟಿದ್ದರು.

ಜೊತೆಗೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರದಲ್ಲಿ ಬಿಜೆಪಿಯಲ್ಲಿಯೇ ಗೊಂದಲಗಳಿವೆ ಎನ್ನಲಾಗುತ್ತಿದೆ. ಕಳೆದ 2019ರಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ “ಮಹರ್ಷಿ ವಾಲ್ಮೀಕಿ ಅನ್ನಕುಟೀರ” ಎಂದು ಮರು ನಾಮಕರಣ ಮಾಡುತ್ತೇವೆ ಎಂದು ಸಚಿವ ಆರ್. ಅಶೋಕ್ ಪ್ರಕಟಿಸಿದ್ದರು. ಆದರೆ ನಂತರ ತಮ್ಮ ನಿಲುವು ಬದಲಿಸಿದ್ದರು. ಈಗ ಮತ್ತೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಚರ್ಚೆ ನಿಲ್ಲುವಂತೆ ಕಾಣುತ್ತಿಲ್ಲ

ಉಚಿತ ಅನ್ನ ಸ್ವೀಕರಿಸುವ ಜನರೇ ನಿರ್ಧಾರ ಮಾಡಲಿ!
ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸುವ ವಿಚಾರಕ್ಕೆ ಇಂಧನ ಸಚಿವ ಸುನಿಲ್ ಕುಮಾರ್ ಸಹಮತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿರುವ ಅವರು, ‘ಸರ್ಕಾರದಿಂದ ಉಚಿತವಾದ ಅನ್ನ ಸ್ವೀಕರಿಸುವ ಜನರೇ ನಿರ್ಧಾರ ಮಾಡಲಿ. ಇಂದಿರ ಕ್ಯಾಂಟಿನ್ ಹೆಸರಿಡಬೇಕಾ? ಅನ್ನಪೂರ್ಣೇಶ್ವರಿ ಹೆಸರು ಬೇಕಾ? ಎಂಬುದನ್ನು ಜನರ ಅಭಿಪ್ರಾಯ ಸಂಗ್ರಹ ಆಗಲಿ. ಯಾವ ಹೆಸರಿಟ್ಟರೆ ಉಚಿತ ಅನ್ನ ಆಹಾರ ಸ್ವೀಕರಿಸಲು ಒಳ್ಳೆಯದು ಅನ್ನೋದರ ಜನಾಭಿಪ್ರಾಯ ಸಂಗ್ರಹ ಆಗಲಿ. ಕಾಂಗ್ರೆಸ್ ಸಂಸ್ಕೃತಿ ಏನು ಅನ್ನೋದು ನಮಗೆಲ್ಲ ಗೊತ್ತಿದೆ. ಹೀಗಾಗಿ ಅವರು ನಮಗೆ ಸಂಸ್ಕೃತಿ ಕಲಿಸಿಕೊಡುವ ಅಗತ್ಯವಿಲ್ಲ. ಹಿಂದೆ‌ ದಿ. ಮಾಜಿ ಪ್ರಧಾನಿ ವಾಜಪೇಯಿ ಚತುಷ್ಪಥ ರಸ್ತೆ ನಿರ್ಮಾಣ ಆದಾಗ, ಇದೇ ಕಾಂಗ್ರೆಸ್ ದೇಶಾದ್ಯಂತ ಹೆಸರು ಬದಲಾಯಿಸಲು ಹೊರಟಿದ್ದರು. ವಾಜಪೇಯಿ ಚತುಷ್ಪಥ ರಸ್ತೆಯ ಬೋರ್ಡ್ ಬದಲಾಯಿಸುವುದಕ್ಕಾಗಿಯೇ ಹೆಚ್ಚಿನ ಹಣ ಬಿಡುಗಡೆ ಮಾಡಿದ್ದರು. ಹೀಗಾಗಿ ಅವರಿಂದ ನಾವೇನು ಕಲಿಬೇಕಾಗಿಲ್ಲ. ಆದರೆ ಕ್ಯಾಂಟಿನ್‌ಗೆ ಯಾವ ಹೆಸರಿಡಬೇಕು ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹ ಆಗಲಿ’ ಎಂದು ಅಭಿಪ್ರಾಯ ಹೇಳಿದ್ದಾರೆ.

ಇಂದಿರಾ ಮೇಲೆ ಮಮತೆಯೂ ಇಲ್ಲ, ದ್ವೇಷವೂ ಇಲ್ಲ
ಇನ್ನು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಮಾಜಿ ಕಾಂಗ್ರೆಸ್ಸಿಗ ಹಾಗೂ ಹಾಲಿ ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿದ್ದಾರೆ, ‘ಇಂದಿರಾ ಮೇಲೆ ಮಮತೆಯೂ ಇಲ್ಲ, ದ್ವೇಷವೂ ಇಲ್ಲ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನ ಮಾಡುತ್ತಾರೆ. ನಾಳೆಯೆ ಹೆಸರು ಬದಲಾವಣೆ ಮಾಡುತ್ತೇವೆ ಎಂದೇನೂ ಸಿಎಂ ಬೊಮ್ಮಾಯಿ ಹೇಳಿಲ್ಲ. ಆದರೆ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದು ಹೇಳಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಹಾಕಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜೊತೆಗೆ ರಾಜ್ಯ ಬಿಜೆಪಿ ಕೂಡ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ನಿಟ್ಟಿನಲ್ಲಿ ತನ್ನ ನಿಲುವು ಸ್ಪಷ್ಟವಾಗಿ ಹೇಳಿದೆ.

ಮಹರ್ಷಿ ವಾಲ್ಮೀಕಿ ಅನ್ನಕುಟೀರ”

ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳ ಕಾಲ ಯಾಕೆ ಮಾಡಲಿಲ್ಲ? ಎಂಬ ಪ್ರಶ್ನೆಯನ್ನು ಇದೀಗ ಜನರು ಕೇಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಆಗ ಹೆಸರು ಬದಲಾವಣೆ ಮಾಡದವರು ಈಗೇಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಬವವಾಗಿದೆ. ಮೋದಿ ಅವರು ಖೇಲ್ ರತ್ನ ಪ್ರಶಸ್ತಿಯನ್ನು ಧ್ಯಾನ್ ಚಂದ್ ಹೆಸರಿಗೆ ಬದಲಾಯಿಸಿದ್ದರು. ಪ್ರಧಾನಿ ಗಮನ ಸೆಳೆಯಲು ರಾಜ್ಯ ಬಿಜೆಪಿ ನಾಯಕರು ಈಗ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತು ಹೇಳಿಕೆ ಕೊಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

You May Also Like

error: Content is protected !!