ಮಕ್ಕಳ ತಪಾಸಣೆಗಾಗಿ ‘ಆರೋಗ್ಯ ನಂದನ’ವಿನೂತನ ಕಾರ್ಯಕ್ರಮ

ಬೆಂಗಳೂರು: ಮಕ್ಕಳ ಆರೋಗ್ಯ ತಪಾಸಣೆ ಮಾಡುವ ಆರೋಗ್ಯ ನಂದನ ಎಂಬ ವಿನೂತನ ಕಾರ್ಯಕ್ರಮವನ್ನು ಇನ್ನೊಂದು ವಾರದಲ್ಲಿ ಪ್ರಾರಂಭಿಸುವುದಾಗಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಮೂರನೆ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ತಜ್ಞರ ಸಲಹೆ ಹಿನ್ನೆಲೆಯಲ್ಲಿ ಈ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ರಾಜ್ಯದಲ್ಲಿ ಒಂದೂವರೆ ಕೋಟಿ ಮಕ್ಕಳಿದ್ದು, ಎಲ್ಲಾ ಮಕ್ಕಳನ್ನು ತಪಾಸಣೆ ಮಾಡಲಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮತ್ತು ಅಪೌಷ್ಠಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ಪೌಷ್ಠಿಕ ಆಹಾರ ನೀಡಲಾಗುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನೊಂದು ವಾರದಲ್ಲಿ ಆರೋಗ್ಯ ನಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಹಾವೇರಿ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಪ್ರಾರಂಭವಾಗಿದ್ದು, ಅದರ ರೂಪುರೇಷೆ ಸಿದ್ಧವಾಗಿದೆ. ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದರು.

ಕೇವಲ ನಾಲ್ಕೈದು ತಿಂಗಳಲ್ಲೇ ನಾಲ್ಕು ಸಾವಿರ ವೈದ್ಯರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಇಷ್ಟು ಕಡಿಮೆ ಅವಧಿಯಲ್ಲಿ ಈ ಪ್ರಮಾಣದ ವೈದ್ಯರನ್ನು ನೇಮಕ ಮಾಡಿದ ನಿದರ್ಶನವಿಲ್ಲ. ಸ್ವಾತಂತ್ರ್ಯೋತ್ಸವದ 100ನೇ ದಿನಾಚರಣೆ ವೇಳೆಗೆ ದೇಶವನ್ನು ನಂಬರ್ ಒನ್ ಮಾಡಲು ಉದ್ದೇಶಿಸಲಾಗಿದೆ. ಅದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆ ರಾಜ್ಯದಲ್ಲಿ ಭದ್ರ ಬುನಾದಿ ಹಾಕಲಿದೆ . ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ಸ್ಪಷ್ಟ ನೀತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

You May Also Like

error: Content is protected !!