ಏರ್‌ಟೆಲ್‌ ಕನಿಷ್ಠ ರೀಚಾರ್ಜ್ ಬೆಲೆ ಏರಿಕೆ!

ಭಾರತದ ಟೆಲಿಕಾಂಕ್ಷೇತ್ರದಲ್ಲಿ ಉಂಟಾದ ದರಸಮರ ಪರಿಣಾಮದಿಂದ ಈಗಲೂ ಚೇತರಿಸಿಕೊಳ್ಳಲು ಒದ್ದಾಡುತ್ತಿರುವ ಏರ್‌ಟೆಲ್ ಕಂಪೆನಿ ಮತ್ತೆ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ತನ್ನ ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು ಹೆಚ್ಚು ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಏರ್‌ಟೆಲ್, ಇದೀಗ ತನ್ನ ಕನಿಷ್ಠ ರೀಚಾರ್ಜ್ ಯೋಜನೆಗಳನ್ನು ಮತ್ತೆ ಬದಲಾಯಿಸಲು ಮುಂದಾಗಿದೆ. ಅಂದರೆ, ಇದೀಗ ನಿಮ್ಮ ಏರ್‌ಟೆಲ್ ಸಿಮ್ ಕಾರ್ಯನಿರ್ವಹಿಸಲು ನೀವು ಕನಿಷ್ಠವೆಂದರೂ 100 ರೂ. ಗಳಿಗಿಂತ ಹೆಚ್ಚು ಹಣವನ್ನು ರೀಚಾರ್ಜ್ ಮಾಡಬೇಕಿದೆ.

ಹೌದು, ಮೊದಲು ತನ್ನ ಗ್ರಾಹಕರಿಗೆ 49 ರೂ. ಪ್ರಿಪೇಯ್ಡ್ ಪ್ಲಾನ್ ಹಾಗೂ 79 ರೂ. ಗಳ ಕನಿಷ್ಠ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಒದಗಿಸಿದ್ದ ಏರ್‌ಟೆಲ್, ಇತ್ತೀಚಿಗಷ್ಟೇ 49 ರೂ. ಪ್ರಿಪೇಯ್ಡ್ ಪ್ಲಾನ್ ಅನ್ನು ತೆಗೆದುಹಾಕುವ ಮೂಲಕ ಶಾಕ್ ನೀಡಿತ್ತು. ಇದೀಗ 79 ರೂ. ಗಳ ಕನಿಷ್ಠ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಕೂಡ ತೆಗೆದು ಹಾಕುತ್ತಿರುವುದಾಗಿ ವರದಿಯಾಗಿದೆ. ಹಾಗಾಗಿ, ನೀವು ಇನ್ನು ನಿಗದಿತ ಕಾಲದಲ್ಲಿ ನಿಮ್ಮ ಏರ್‌ಟೆಲ್ ಸಿಮ್ ಅನ್ನು ಕನಿಷ್ಠ ಎಂದರೂ 100 ರೂ. ಗಳಿಗಿಂತ ಹೆಚ್ಚು ಹಣವನ್ನು ರೀಚಾರ್ಜ್ ಮಾಡಲೇಬೇಕಾಗುತ್ತದೆ. ಇಲ್ಲದಿದ್ದರೆ ಸಿಮ್ ಸೇವೆ ಸ್ಥಗಿತಗೊಳ್ಳಲಿದೆ.

ಇದಕ್ಕಿಂತಲೂ ಮತ್ತೊಂದು ಶಾಕಿಂಗ್ ಸುದ್ದಿ ಎಂದರೆ, ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಏರ್‌ಟೆಲ್ ತನ್ನ ಕನಿಷ್ಟ ರೀಚಾರ್ಜ್ ಪ್ಲ್ಯಾನ್‌ಗಳನ್ನು 200 ರೂ.ಗೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದೆಯಂತೆ. ಮತ್ತು ಇದನ್ನು 300 ರೂ. ಗಳ ವರೆಗೂ ಹೆಚ್ಚಿಸುವಂತಹ ಮುಂದಾಲೋಚನೆಯನ್ನು ಏರ್‌ಟೆಲ್ ಆಡಳಿತ ಮಂಡಳಿ ಹೊಂದಿದೆ ಎಂದು ಹೇಳಲಾಗಿದೆ. ಇತ್ತೀಚಿಗಷ್ಟೇ ಏರ್‌ಟೆಲ್ ಕಂಪನಿಯ ಅಧ್ಯಕ್ಷ ಸುನಿಲ್ ಮಿತ್ತಲ್ ಅವರು ಬೆಲೆ ಏರಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ ನಂತರ ಈ ಎಲ್ಲಾ ನೂತನ ಬೆಳವಣಿಗೆಗಳು ಕಂಡುಬಂದಿವೆ.
ತನ್ನ ಗ್ರಾಹಕರಿಂದ ನಿವ್ವಳ ಸರಾಸರಿ ಆದಾಯ ಗಳಿಸಲು ಏರ್‌ಟೆಲ್ ಮಾಡಿದ್ದ ಪ್ಲ್ಯಾನ್ ಈ ಕನಿಷ್ಠ ರೀಚಾರ್ಜ್ ಸೇವೆಗಳು. ಅಂದರೆ, ನೀವು ಏರ್‌ಟೆಲ್ ಸಿಮ್ ಸೇವೆಗಳನ್ನು ಪಡೆಯಲು ಕನಿಷ್ಠ ಮೊತ್ತದಷ್ಟು ಹಣವನ್ನು ರಿಚಾರ್ಜ್ ಮಾಡಿಸಲೇಬೇಕಿತ್ತು. ಈ ಮೂಲಕ ಏರ್‌ಟೆಲ್ ಸಿಮ್ ಅನ್ನು ಗ್ರಾಹಕರ ಮೊಬೈಲ್‌ನಲ್ಲಿನ ಎರಡನೇ ಸ್ಲಾಟ್ ಸಿಮ್ ಆಗಿ ಬದಲಾಯಿಸದೇ ಇರುವಂತೆ ನೋಡಿಕೊಳ್ಳುವಂತಹ ವಿಶೇಷ ಯೋಜನೆ ರೂಪಿಸಿತ್ತು. ಇದಕ್ಕಾಗಿ ಮೊದಲು ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಸೇವೆಗಳನ್ನು ಒದಗಿಸಿದ್ದ ಏರ್‌ಟೆಲ್ ಇದೀಗ ತನ್ನ ತಂತ್ರವನ್ನು ಬದಲಿಸಿಕೊಂಡಿದೆ.

ಇನ್ನು ಏರ್‌ಟೆಲ್ ಅಷ್ಟೇ ಅಲ್ಲದೆ, ವೊಡಾಫೋನ್ ಐಡಿಯಾ ಕಂಪನಿ ಸಹ ಕನಿಷ್ಠ ರೀಚಾರ್ಜ್ ದರವನ್ನು ನಿಗದಿ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದಾಗಿ ಗ್ರಾಹಕರು ಈ ಎರಡು ಟೆಲಿಕಾಂ ನೆಟ್ವರ್ಕ್ ಬಳಸಲು ಪ್ರತಿ ತಿಂಗಳು ನಿಗದಿತ ಮೊತ್ತದ ರೀಚಾರ್ಜ್ ಮಾಡಿಸಲೇಬೇಕಾಗುವ ಅನಿವಾರ್ಯತೆ ಎದುರಾಗಲಿದೆ. ಇಂತಹದೊಂದು ಪೈಪೋಟಿ ರಿಲಾಯನ್ಸ್ ಜಿಯೋಗೆ ಮತ್ತಷ್ಟು ಲಾಭವನ್ನು ತಂದುಕೊಡಬಹುದು ಎಂಬ ಭಯ ಈ ಎರಡೂ ಕಂಪೆನಿಗಳಿಗಿದ್ದರೂ ಸಹ, ಈ ರೀತಿಯಾಗಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿರುವುದು ಆಶ್ಚರ್ಯವೇ ಸರಿ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!