ವಾರದೊಳಗೆ ಆರೋಪಿಗಳ ಬಂಧನ : ಸುರೇಶ್‌ಗೌಡ ವಿಶ್ವಾಸ

ತುಮಕೂರು: ಕಳೆದ ಒಂದು ವಾರದ ಹಿಂದೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿರುವ ಆರೋಪಿಗಳ ಸುಳಿವು ಪೊಲೀಸರಿಗೆ ಸಿಕ್ಕಿದ್ದು, ಇನ್ನೊಂದು ವಾರದೊಳಗೆ ಆರೋಪಿಯನ್ನು ಬಂಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆಗಸ್ಟ್ 24 ರಂದು ಛೋಟಾಸಾಬರ ಪಾಳ್ಯದಲ್ಲಿ ದನ ಮೇಯಿಸಲು ತೆರಳಿದ್ದ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆಗೈದಿದ್ದು, ಆದಷ್ಟು ಬೇಗ ಈ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವರೆಂಬ ವಿಶ್ವಾಸವಿದೆ ಎಂದರು.

ತಾವು ಈಗಾಗಲೇ ಈ ಕೊಲೆ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇನ್ಸ್‌ಪೆಕ್ಟರ್ ಜನರಲ್ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದು, ಈಗಾಗಲೇ ಈ ಪ್ರಕರಣದ ತನಿಖೆಗಾಗಿ 6 ತಂಡಗಳನ್ನು ರಚಿಸಿದ್ದಾರೆ, ಈ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನೊಂದು ವಾರದೊಳಗೆ ಆರೋಪಿಗಳನ್ನು ಬಂಧಿಸುವ ನಿರೀಕ್ಷೆ ಇದೆ ಎಂದರು.

ಎಂತಹ ಕುಖ್ಯಾತ ಕ್ರಿಮಿನಲ್ ಕಳ್ಳರಿದ್ದರೂ ಸಹ ಅವರನ್ನು ನಮ್ಮ ರಾಜ್ಯದ ಪೊಲೀಸರು ಪತ್ತೆಹಚ್ಚುತ್ತಾರೆ. ಜಿಲ್ಲಾ ಪೊಲೀಸರ ಬಗ್ಗೆ ತಮಗೆ ನಂಬಿಕೆ ವಿಶ್ವಾಸವಿದೆ. ಇಂತಹ ಘಟನೆಗಳಲ್ಲಿ ರಾಜಕೀಯ ಬೆರೆಸಬಾರದು. ತನಿಖಾಧಿಕಾರಿಗಳಿಗೆ ಸಹಕಾರದ ಜೊತೆಗೆ ಆತ್ಮವಿಶ್ವಾಸ, ಆಸ್ಮಸ್ಥೈರ್ಯ ತುಂಬಬೇಕು ಎಂದು ತಿಳಿಸಿದರು.

ಮಹಿಳೆ ಕೊಲೆ ನಡೆದಿರುವ ಸ್ಥಳ ನಿರ್ಜನ ಪ್ರದೇಶವಾಗಿದ್ದು, ಅಲ್ಲಿ ಯಾರೂ ಓಡಾಡುತ್ತಿರಲಿಲ್ಲ ಎಂಬ ಮಾಹಿತಿ ಇದೆ. ಹಾಗಾಗಿ ಆರೋಪಿಗಳ ಪತ್ತೆ ಕಾರ್ಯ ವಿಳಂಬವಾಗುತ್ತಿರಬಹುದು. ಶೀಘ್ರ ಪೊಲೀಸರು ಬಂಧಿಸುವುದಾಗಿಯೂ ತಿಳಿಸಿದ್ದಾರೆ ಎಂದರು.

ತ್ಯಾಮಗೊಂಡ್ಲುವಿನಲ್ಲೂ ಇದೇ ರೀತಿಯ ಪ್ರಕರಣ ನಡೆದಿತ್ತು ಎಂಬ ಮಾಹಿತಿ ಇದೆ. ಅದನ್ನು ಆಧರಿಸಿ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ ಎಂದರು.

ಗೃಹಸಚಿವರ ಭೇಟಿ:

ಇನ್ನೆರಡು ದಿನದಲ್ಲಿ ಗೃಹ ಸಚಿವರು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಈಗಾಗಲೇ ಐಜಿಪಿಯವರು ಸಹ ಎರಡು ಬಾರಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ಅವರು ಹೇಳಿದರು.

ಹಳೆ ಪ್ರಕರಣದಲ್ಲಿ ಇಬ್ಬರ ಬಂಧನ: ಕಳೆದ ಒಂದು ವರ್ಷದ ಹಿಂದೆ ಗ್ರಾಮಾಂತರದ ದೊಡ್ಡತಿಮ್ಮಯ್ಯನಪಾಳ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಹೇಳಿದರು.

ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಬೇಕು, ಆ ಕೆಲಸ ಪೊಲೀಸರು ಮಾಡುತ್ತಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಹೆಬ್ಬಾಕ ರವಿಶಂಕರ್, ಕೊಪ್ಪಲ್ ನಾಗರಾಜು, ಕೆ.ಟಿ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!