ದೇಶ ಕಟ್ಟುವ ಕಾಯಕದಲ್ಲಿ ಯಶಸ್ಸು ಕಾಣಬೇಕು: ಸಚಿವ ಜೆ.ಸಿ.ಮಾಧುಸ್ವಾಮಿ


ತುಮಕೂರು: ಪ್ರಧಾನ ಮಂತ್ರಿಗಳ ಆಶಯದಂತೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ವರ್ಷ ಪೂರ್ತಿ ಇಲಾಖಾವಾರು ರಚನಾತ್ಮಕ ಕಾರ್ಯಕ್ರಮವನ್ನು ಹಾಕಿಕೊಂಡು ದೇಶವನ್ನು ಕಟ್ಟುವ ಕಾಯಕದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಭಾರತ ಸ್ವಾತಂತ್ರೋತ್ಸವದ 75ನೇ ಅಮೃತ ಮಹೋತ್ಸವದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಚಿಕ್ಕನಾಯಕನಹಳ್ಳಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸಹಯೋಗದಲ್ಲಿ ತೀ.ನಂ.ಶ್ರೀ. ಭವನದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಪೌಷ್ಠಿಕ ಆಹಾರ ಸಪ್ತಾಹ ಮತ್ತು ಕೋವಿಡ್-19 3ನೇ ಅಲೆಯ ಹಿನ್ನೆಲೆಯಲ್ಲಿ ಮಕ್ಕಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ನಿರ್ಮೂಲನೆಗೆ ಮುಂಚೂಣಿಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ನಿಸ್ವಾರ್ಥತೆಯಿಂದ ಭಾಗವಹಿಸಿ ಸೇವೆ ಸಲ್ಲಿಸಬೇಕು ಎಂದರು.

ಸ್ವಾತಂತ್ರ್ಯ ಚಳುವಳಿಯಿಂದ ಹಿಡಿದು ಇಲ್ಲಿಯವರೆಗೆ ನಮ್ಮ ಸಾಮಾಜಿಕ ಬದುಕು, ನಡೆದು ಬಂದದಾರಿ, ವೈಫಲ್ಯಗಳನ್ನು ಮೀರಿ ನಾವು ಸಮಾಜಕ್ಕೆ ಕೊಡಬೇಕಾದ ಕೊಡುಗೆಗಳ ಬಗ್ಗೆ ತಿಳಿಸಿದ ಸಚಿವರು, ಅಪೌಷ್ಠಿಕತೆಯ ದುಷ್ಟರಿಣಾಮಗಳು, ತಾಯಿ ಮಗುವಿನ ಆರೋಗ್ಯ ಕಾಪಾಡುವಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಎಂ.ಎಸ್. ಶ್ರೀಧರ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಕುರಿತು ಪರಿಚಯ ಮಾಡಿಕೊಟ್ಟರು.

ಕೋವಿಡ್‍ನಂತಹ ಆತಂಕದ ಪರಿಸ್ಥಿತಿಯಲ್ಲಿ ನಮ್ಮ ಆಹಾರ ಕ್ರಮ, ಸ್ವಚ್ಛತೆ ಕ್ರಮಗಳು ಹೇಗಿರಬೇಕು. ಅದರಲ್ಲೂ ತಾಯಿ ಮತ್ತು ಮಗುವಿನ ಆರೈಕೆ, ಆಹಾರ ಪದ್ಧತಿ ಜೀವನ ಕ್ರಮದ ಬಗ್ಗೆ ಮಾರ್ಗಸೂಚಿಯಂತೆ ನಿರ್ವಹಣೆ ಮಾಡುವ ಕುರಿತು ಮಾತನಾಡಿದರು.

ಮಕ್ಕಳ ತಜ್ಞ ಡಾ.ರಾಜೇಂದ್ರಪ್ರಸಾದ್ ಮಾತನಾಡಿ, ಕೋವಿಡ್ ಮೂರನೇ ಅಲೆಯ ಹಿನ್ನಲೆಯಲ್ಲಿ ಮಕ್ಕಳ ರಕ್ಷಣೆ ಸ್ವಚ್ಛತೆ, ಆಹಾರ ಕ್ರಮ, ಸಾಮಾಜಿಕ ಅಂತರಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನವೀನ್‍ಕುಮಾರ್ ಮಾತನಾಡಿ, ಆರೋಗ್ಯ ಇಲಾಖೆಯಿಂದ ಕೋವಿಡ್ ನಿರ್ಮೂಲನೆ ಹೋರಾಟದಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಅಲ್ಲದೇ ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದರು. ಯಾವುದೇ ಸಂದರ್ಭದಲ್ಲಿ ಸ್ವಯಂ ಚಿಕಿತ್ಸೆ ಪಡೆಯದೇ ವೈದ್ಯರನ್ನು ಭೇಟಿಯಾಗಿ ಅವರ ಮಾರ್ಗದರ್ಶನ ಪಡೆಯುವುದು ಉತ್ತಮ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಸಹಾಯಧನದ ಮಂಜೂರಾತಿ ಆದೇಶ ನೀಡಲಾಯಿತು. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಭಿತ್ತಿ ಚಿತ್ರಗಳನ್ನು ಸಚಿವರು ಅನಾವರಣಗೊಳಿಸಿದರು.

ಸೇವ್ ದಿ ಚಿಲ್ದ್ರನ್ ಸೇವಾ ಸಂಸ್ಥೆಯ ವತಿಯಿಂದ ಮುಂಜಾಗರೂಕ ಕ್ರಮವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ವಚ್ಛತಾ ಕಿಟ್‍ಗಳನ್ನು ವಿತರಿಸಿದರು. 

ಈ ಕಾರ್ಯಕ್ರಮದಲ್ಲಿ ತೇಜಸ್ವಿನಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಹೊನ್ನಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!